Advertisement

ಅತೃಪ್ತರ ನಿಲುವಿನ ಮೇಲೆ ಬಿಜೆಪಿ ಸರ್ಕಾರ ರಚನೆ ಪ್ರಯತ್ನ

01:57 AM Jul 26, 2019 | Sriram |

ಬೆಂಗಳೂರು: ಬಿಜೆಪಿಗೆ ಬೆಂಬಲ ಘೋಷಿಸಿದ್ದ ಪಕ್ಷೇತರ ಶಾಸಕ ಆರ್‌.ಶಂಕರ್‌ ಹಾಗೂ ಕಾಂಗ್ರೆಸ್‌ನ ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಟಳ್ಳಿ ಅನರ್ಹಗೊಂಡ ಬಳಿಕ ಉಳಿದ ಅತೃಪ್ತ ಶಾಸಕರು ತಮ್ಮ ರಾಜೀನಾಮೆ ನಿಲುವಿಗೆ ಎಷ್ಟರ ಮಟ್ಟಿಗೆ ಬದ್ಧರಾಗಿರಲಿದ್ದಾರೆ ಎಂಬುದರ ಮೇಲೆ ಬಿಜೆಪಿಯ ಸರ್ಕಾರ ರಚನೆ ಸಾಧ್ಯಾಸಾಧ್ಯತೆ ನಿರ್ಧಾರವಾಗಲಿದೆ.

Advertisement

ಕೆಲ ದಿನಗಳಲ್ಲಿ ಸ್ಪೀಕರ್‌ ಉಳಿದ ಶಾಸಕರ ರಾಜೀನಾಮೆ ಪ್ರಕರಣಗಳನ್ನು ಇತ್ಯರ್ಥಪಡಿಸುವುದಾಗಿ ಹೇಳಿರುವುದರಿಂದ ಸ್ಪೀಕರ್‌ ಕ್ರಮ ಕೈಗೊಳ್ಳುವವರೆಗೆ ನಿರೀಕ್ಷಿಸಬೇಕೋ ಅಥವಾ ಸರ್ಕಾರ ರಚನೆಗೆ ಅವಕಾಶ ಕೋರಿ ರಾಜ್ಯಪಾಲರ ಬಳಿ ಪ್ರಸ್ತಾವ ಮಂಡಿಸಬೇಕೋ ಎಂಬ ಜಿಜ್ಞಾಸೆ ಬಿಜೆಪಿಯಲ್ಲಿ ಮೂಡಿದೆ. ಜತೆಗೆ ಮಾಸಾಂತ್ಯದೊಳಗೆ ಹಣಕಾಸು ವಿಧೇಯಕಕ್ಕೂ ಅಂಗೀಕಾರ ಪಡೆಯಬೇಕಿರುವುದರಿಂದ ಒತ್ತಡದ ಸ್ಥಿತಿ ನಿರ್ಮಾಣವಾದಂತಾಗಿದೆ.

ಮಂಗಳವಾರ ವಿಶ್ವಾಸಮತ ಸಾಬೀತುಪಡಿಸಲಾಗದೆ ಮೈತ್ರಿ ಸರ್ಕಾರ ಪತನಗೊಂಡ ಮರುಕ್ಷಣದಿಂದಲೇ ರಾಜ್ಯ ಬಿಜೆಪಿ, ಸರ್ಕಾರ ರಚನೆಯ ಸಂಭ್ರಮದಲ್ಲಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಪ್ರಸ್ತಾವ ಮಂಡಿಸುವ ತವಕದಲ್ಲಿದ್ದರು. ಆದರೆ, ವರಿಷ್ಠರಿಂದ ಯಾವುದೇ ಸೂಚನೆ ಬಾರದ ಹಿನ್ನೆಲೆಯಲ್ಲಿ ರಾಜ್ಯ ನಿಯೋಗ ದೆಹಲಿಗೆ ತೆರಳಿದೆ. ಈ ನಡುವೆ ಸ್ಪೀಕರ್‌ ಕ್ರಮ ಬಿಜೆಪಿಯ ಸರ್ಕಾರ ರಚನೆ ಲೆಕ್ಕಾಚಾರದ ಮೇಲೆ ತುಸು ಪರಿಣಾಮ ಬೀರಿದಂತಿದೆ.

ಬಿಜೆಪಿ ಬಲ ಇಳಿಕೆ: ಮೈತ್ರಿ ಸರ್ಕಾರ ಸಂಖ್ಯಾಬಲ ಇಳಿಕೆ ಮಾಡುವ ಕಸರತ್ತಿನ ನಡುವೆಯೇ ಶಂಕರ್‌ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಬೆಂಬಲಿಸುವುದಾಗಿ ಪ್ರಕಟಿಸಿದ್ದರಿಂದ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಬಲ ಒಂದು ಹೆಚ್ಚಾಗಿತ್ತು. ಇದೀಗ ಆರ್‌.ಶಂಕರ್‌ ಅವರನ್ನು ಸ್ಪೀಕರ್‌ ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಸಂಖ್ಯಾಬಲ ಒಂದು ಇಳಿಕೆಯಾದಂತಾಗಿದ್ದು, ಬಿಜೆಪಿಯಲ್ಲಿ ತುಸು ಆತಂಕ ಸೃಷ್ಟಿಸಿದಂತಿದೆ.

ಅತೃಪ್ತರ ಬದ್ಧತೆ ಮುಖ್ಯ: ಕಾಂಗ್ರೆಸ್‌ನ ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಟಳ್ಳಿ ಅವರನ್ನು ಅನರ್ಹ ಗೊಳಿಸಿರುವ ಸ್ಪೀಕರ್‌, ಉಳಿದ ಶಾಸಕರ ರಾಜೀನಾಮೆ ಪ್ರಕರಣವನ್ನು ಶೀಘ್ರವೇ ಇತ್ಯರ್ಥಪಡಿಸುವುದಾಗಿ ಪ್ರಕಟಿ ಸಿದ್ದಾರೆ. ಸದ್ಯ ಅನರ್ಹರಾದವರು 15ನೇ ವಿಧಾನಸಭೆಯ ಅವಧಿ ಮುಕ್ತಾಯವಾಗುವವರೆಗೆ ಚುನಾವಣೆಗೆ ಸ್ಪಧಿಸು ವಂತಿಲ್ಲ ಹಾಗೂ ರಾಜಕೀಯ ಹುದ್ದೆ ಪಡೆಯುವಂತಿಲ್ಲ. ಇದು ಉಳಿದ ಅತೃಪ್ತ ಶಾಸಕರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಮುಖ್ಯ.

Advertisement

ಏಕೆಂದರೆ ಸಚಿವ ಸ್ಥಾನ ಸಿಕ್ಕಿಲ್ಲ. ಹಿರಿತನ, ಅನುಭವವನ್ನು ಬಳಸಿಕೊಂಡಿಲ್ಲ ಎಂಬ ಕಾರಣಕ್ಕೆ ಹಲವು ಶಾಸಕರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಮುಂದೆ ಬಿಜೆಪಿ ಸರ್ಕಾರ ರಚನೆಯಾದರೆ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆಯನ್ನೂ ನೀಡಲಾಗಿದೆ ಎಂಬ ಮಾತುಗಳಿವೆ. ಹೀಗಿರುವಾಗ ಒಂದೊಮ್ಮೆ ಅನರ್ಹಗೊಂಡರೆ ಸಚಿವರಾಗುವುದಿರಲಿ, ಉಪಚುನಾವಣೆಗೂ ಸ್ಪರ್ಧಿಸಲು ಅವಕಾಶವಿರುವುದಿಲ್ಲ. ಆ ಹಿನ್ನೆಲೆಯಲ್ಲಿ ಅತೃಪ್ತರು ಈವರೆಗಿನ ರಾಜೀನಾಮೆ ನಿರ್ಧಾರಕ್ಕೆ ಎಷ್ಟರ ಮಟ್ಟಿಗೆ ಬದ್ಧವಾಗಿರಲಿದ್ದಾರೆ ಎಂಬುದರ ಮೇಲೆ ಬಿಜೆಪಿಯ ಸರ್ಕಾರ ರಚನೆ ಲೆಕ್ಕಾಚಾರ ನಿರ್ಧಾರವಾಗಲಿದೆ.

ಒತ್ತಡದಲ್ಲಿ ಕಮಲ ಪಾಳಯ

ಮೈತ್ರಿ ಸರ್ಕಾರ ಪತನವಾಗುತ್ತಿದ್ದಂತೆ ಸರ್ಕಾರ ರಚನೆಗೆ ಉತ್ಸಾಹ ತೋರಿದ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್‌ ಹಸಿರು ನಿಶಾನೆ ತೋರಲಿಲ್ಲ. ಇದೀಗ ಪಕ್ಷೇತರ ಆರ್‌.ಶಂಕರ್‌ ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಸಂಖ್ಯಾಬಲ ಕುಸಿದಿದೆ. ಇನ್ನೂ 13 ಶಾಸಕರ ರಾಜೀನಾಮೆ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಒಂದೊಮ್ಮೆ ಉಳಿದ ಶಾಸಕರ ರಾಜೀನಾಮೆ ಇತ್ಯರ್ಥವಾಗುವವರೆಗೆ ಸರ್ಕಾರ ರಚನೆ ಪ್ರಯತ್ನ ಬೇಡ ಎಂದು ವರಿಷ್ಠರು ಸೂಚಿಸಿದರೆ ಇತ್ತ ಅತೃಪ್ತ ಶಾಸಕರನ್ನು ಒಗ್ಗಟ್ಟಾಗಿ ಇನ್ನೂ ಸ್ವಲ್ಪ ಕಾಲ ಹಿಡಿದಿಟ್ಟುಕೊಳ್ಳುವ ಸವಾಲು ಎದುರಾಗಲಿದೆ. ಒಂದೊಮ್ಮೆ ಸರ್ಕಾರ ರಚನೆಗೆ ಪ್ರಸ್ತಾವ ಮಂಡಿಸಿದರೆ ತಕ್ಷಣವೇ ಪ್ರಮಾಣ ವಚನ ಸ್ವೀಕರಿಸಿ ಬಳಿಕ ವಿಧಾನಸಭೆ ಯಲ್ಲಿ ಬಹುಮತ ಸಾಬೀತುಪಡಿಸಿ ಹಣಕಾಸು ವಿಧೇಯಕಕ್ಕೆ ಅನುಮೋದನೆ ಪಡೆಯಬೇಕಾಗುತ್ತದೆ. ಈ ಎಲ್ಲ ಲೆಕ್ಕಾಚಾರದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯು ಒತ್ತಡಕ್ಕೆ ಸಿಲುಕಿದಂತಿದೆ. ಎಲ್ಲವೂ ಬಿಜೆಪಿ ವರಿಷ್ಠರ ನಿರ್ಧಾರದ ಮೇಲೆ ನಿಂತಿದೆ.
-ಎಂ. ಕೀರ್ತಿಪ್ರಸಾದ್‌
Advertisement

Udayavani is now on Telegram. Click here to join our channel and stay updated with the latest news.

Next