ನವದೆಹಲಿ: ಜೈಶ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಮತದಾನದಲ್ಲಿ ತನ್ನ ವಿರೋಧ ವ್ಯಕ್ತಪಡಿಸಿದ ಚೀನಾದ ನಿಲುವನ್ನು ಖಂಡಿಸುವಲ್ಲಿ ಪ್ರಧಾನಿ ಮೋದಿ ಅವರು ಮೃದುಧೋರಣೆ ಅನುಸರಿಸುತ್ತಿದ್ದಾರೆ ಮತ್ತು
ಚೀನಾ ಅಧ್ಯಕ್ಷ ಕ್ಸಿ ಪಿಂಗ್ ಅವರಿಗೆ ಮೋದಿ ಹೆದರುತ್ತಿದ್ದಾರೆ ಎಂದು ಇಂದು ಬೆಳಿಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡುವ ಮೂಲಕ ಟೀಕಿಸಿದ್ದರು. ರಾಹುಲ್ ಅವರ ಈ ಟೀಕೆಗೆ ಭಾರತೀಯ ಜನತಾ ಪಕ್ಷವು ಸರಿಯಾದ ತಿರುಗೇಟನ್ನು ನೀಡಿದೆ.
ಚೀನಾ ಇವತ್ತು ವಿಶ್ವಸಂಸ್ಥೆಯಲ್ಲಿ ಪದೇ ಪದೇ ಭಾರತದ ತೀರ್ಮಾನಗಳಿಗೆ ಅಡ್ಡಗಾಲು ಹಾಕಲು ನಿಮ್ಮ ತಾತ ನೆಹರೂ ಅಂದು ನೀಡಿದ ‘ಭದ್ರತಾ ಸ್ಥಾನ ಕೊಡುಗೆ’ಯ ಭಿಕ್ಷೆಯೇ ಕಾರಣ ಎಂದು ಬಿ.ಜೆ.ಪಿ. ರಾಹುಲ್ ಅವರಿಗೆ ತಿರುಗೇಟು ನೀಡಿದೆ. ಪ್ರಧಾನಿ ಮೋದಿಯನ್ನು ಟೀಕಿಸಿ ರಾಹುಲ್ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ ಮೂಲಕ ಈ ಪ್ರತ್ಯುತ್ತರವನ್ನು ನೀಡಿದೆ.
‘ಆವತ್ತು ನಿಮ್ಮ ಆದರಣೀಯ ಮಹಾನ್ ತಾತ ಭಾರತದ ಆಶಯಗಳನ್ನು ಬದಿಗಿಟ್ಟು ಚೀನಾ ಪರವಾಗಿ ನಿಂತು ಅವರಿಗೆ ಭದ್ರತಾ ಸ್ಥಾನದ ‘ಕೊಡುಗೆ’ಯನ್ನು ನೀಡದೇ ಇರುತ್ತಿದ್ದರೆ ಚೀನಾ ಇವತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲೇ ಇರುತ್ತಿರಲಿಲ್ಲ. ನಿಮ್ಮ ಘನ ಕುಟುಂಬವು ಈ ದೇಶಕ್ಕೆ ಮಾಡಿದ ಎಲ್ಲಾ ತಪ್ಪುಗಳನ್ನು ಇವತ್ತು ಈ ದೇಶ ಸರಿಪಡಿಸಿಕೊಳ್ಳುತ್ತಿದೆ. ಮತ್ತು ಭಯೋತ್ಪಾದನಾ ವಿರುದ್ಧದ ಹೋರಾಟದಲ್ಲಿ ನಾವು ಖಂಡಿತವಾಗಿಯೂ ಜಯಗಳಿಸಲಿದ್ದೇವೆ. ಈ ವಿಚಾರವನ್ನು ಮೋದಿಯವರಿಗೆ ಬಿಟ್ಟುಬಿಡಿ ಮತ್ತು ಅಲ್ಲಿಯವರೆಗೆ ನೀವು ಚೀನೀ ರಾಜತಾಂತ್ರಿಕರೊಂದಿಗೆ ಗೌಪ್ಯ ಮಾತುಕತೆಯನ್ನು ನಡೆಸುತ್ತಿರಿ’ ಎಂದು ಕೇಸರಿ ಪಕ್ಷವು ರಾಹುಲ್ ಅವರಿಗೆ ಖಡಕ್ ಉತ್ತರವನ್ನು ನೀಡಿದೆ.
‘ದೇಶವು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುವ ಸಂದರ್ಭಗಳಲ್ಲಿ ಎಲ್ಲಾ ರಾಹುಲ್ ಗಾಂಧಿ ಅವರು ಯಾಕೆ ಸಂಭ್ರಮದ ಮನಸ್ಥಿತಿಯಲ್ಲಿರುತ್ತಾರೆ?’ ಎಂದು ಕೇಂದ್ರ ಸಚಿವ ಆರ್. ಎಸ್. ಪ್ರಸಾದ್ ಅವರು ಪ್ರಶ್ನಿಸಿದ್ದಾರೆ.
‘ನಿಮಗೆ ಏನಾಗಿದೆ? ಖಂಡಿತವಾಗಿಯೂ ನಿಮ್ಮ ಈ ಟ್ವೀಟ್ ಪಾಕಿಸ್ಥಾನದ ಪತ್ರಿಕೆಗಳಿಗೆ ಹೆಡ್ ಲೈನ್ ಆಗಲಿದೆ’ ಎಂದವರು ‘ಕೈ’ ಪಕ್ಷದ ಮುಖಂಡನನ್ನು ತರಾಟೆಗೆ ತೆಗೆದುಕೊಂಡರು.
‘ಇನ್ನು 2009ರಲ್ಲಿಯೂ ಸಹ ಚೀನಾ ತಾಂತ್ರಿಕ ಅಂಶಗಳನ್ನು ಮುಂದೊಡ್ಡಿ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ತಡೆಯೊಡ್ಡಿತ್ತು, ಆವಾಗಲೂ ನೀವು ಇದೇ ರೀತಿ ಟ್ವೀಟ್ ಮಾಡಿದ್ದೀರಾ?’ ಎಂಬ ಪ್ರಶ್ನೆಯನ್ನು ಪ್ರಸಾದ್ ಅವರು ರಾಹುಲ್ ಗಾಂಧಿ ಅವರನ್ನು ಕೇಳಿದ್ದಾರೆ.