ಆಳಂದ: ಶಾಸಕ ಸುಭಾಷ ಗುತ್ತೇದಾರ ನೇತೃತ್ವದಲ್ಲಿ ಸ್ಥಳೀಯ ಪುರಸಭೆಗೆ 9ನೇ ಅವಧಿಯ ಅಧ್ಯಕ್ಷರಾಗಿ ನಿರೀಕ್ಷೆಯಂತೆ ವಾರ್ಡ್ 6ರ ಬಿಜೆಪಿ ಸದಸ್ಯೆ ರಾಜೇಶ್ರೀ ಶ್ರೀಶೈಲ ಖಜೂರಿ, ಉಪಾಧ್ಯಕ್ಷರಾಗಿ ವಾರ್ಡ್-17ರ ಬಿಜೆಪಿ ಸದಸ್ಯ ಚಂದ್ರಕಾಂತ (ಈರಣ್ಣಾ) ಅಡಿವೆಪ್ಪ ಹತ್ತರಕಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ರಾಜೇಶ್ರೀ ಶ್ರೀಶೈಲ ಖಜೂರಿ ಮತ್ತು ಕಾಂಗ್ರೆಸ್‌ನಿಂದ ವಾರ್ಡ್ 23ರ ಸದಸ್ಯೆ ಕವಿತಾ ಸಂಜಯ ನಾಯಕ ನಾಮಪತ್ರ ಸಲ್ಲಿಸಿದ್ದರು. ಅಲ್ಲದೇ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ವಾರ್ಡ್ 17ರ ಸದಸ್ಯ ಚಂದ್ರಕಾಂತ ಅಡಿವೆಪ್ಪ ಹತ್ತರಕಿ, ವಾರ್ಡ್ 2ರ ಕಾಂಗ್ರೆಸ್ ಸದಸ್ಯ ದೋಂಡಿಬಾ ವಿಠ್ಠಲರಾವ್ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷೆ, ಉಪಾಧ್ಯಕ್ಷ ಆಯ್ಕೆಗೆ ಕೈ ಎತ್ತುವ ಮೂಲಕ ಮತದಾನ ನಡೆಯಿತು. ಈ ವೇಳೆ ಕ್ರಮವಾಗಿ ಬಿಜೆಪಿಯ ರಾಜೇಶ್ರೀ ಮತ್ತು ಚಂದ್ರಕಾಂತ ಹತ್ತರಕಿ ಪರ ಇಬ್ಬರಿಗೂ ಕೈ ಎತ್ತುವ ಮೂಲಕ ತಲಾ 14 ಮಂದಿ ಬೆಂಬಲಿಸಿದರು. ಆದರೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಸದಸ್ಯರು ಸೇರಿದಂತೆ 12 ಜನರು ಚುನಾವಣೆ ನಿಯಮ ಉಲ್ಲಂಘಿಸಲಾಗಿದೆ ಎಂದು ಸಭೆ ಬಹಿಷ್ಕರಿಸಿ ಹೊರಹೋದರು.
ಈ ನಡುವೆ ಸಭೆಗೆ ಕೋರಂ ಭರ್ತಿಯಾಗಿದ್ದ ಕಾರಣ ಬಿಜೆಪಿ ಅಧ್ಯಕ್ಷೆ, ಉಪಾಧ್ಯಕ್ಷರ ಪರ ಆಯ್ಕೆಯನ್ನು ಚುನಾವಣಾಧಿಕಾರಿ ಆಗಿದ್ದ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಫಲಿತಾಂಶ ಘೋಷಿಸಿದರು. ಪುರಸಭೆಗೆ ಒಟ್ಟು 27 ಸ್ಥಾನಗಳಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ 13, ಬಿಜೆಪಿ 13 ಮತ್ತು ಜೆಡಿಎಸ್-1 ಸದಸ್ಯರ ಗೆಲುವಾಗಿದೆ. ಶುಕ್ರವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಬಿಜೆಪಿಯ 13 ಸದಸ್ಯರು ಸೇರಿ ಮತಚಲಾಯಿಸಲು ಸಭೆಯಲ್ಲಿ ಹಾಜರಿದ್ದ ಸಂಸದ ಭಗವಂತ ಖೂಬಾ, ಶಾಸಕ ಸುಭಾಷ ಗುತ್ತೇದಾರ ಸೇರಿ ಸಂಖ್ಯೆ 15ಕ್ಕೆ ಏರಿತು.
ಮತ್ತೂಂದೆಡೆ ಕಾಂಗ್ರೆಸ್ ಚುನಾಯಿತ 13 ಸದಸ್ಯರ ಪೈಕಿ ಮಹಿಳಾ ಸದಸ್ಯೆ ಸುಜಾತಾ ಸಿದ್ರಾಮಪ್ಪ ಹತ್ತರಕಿ ಗೈರಾಗಿದ್ದ 12 ಮಂದಿ ಸದಸ್ಯರು ಹಾಜರಿದ್ದರು. ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದಂತೆ ಚುನಾವಣೆ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಸಭೆ ಬಹಿಷ್ಕರಿಸಿದರು. ಬಳಿಕ ಹೊರಬಂದು ಮರು ಚುನಾವಣೆಗೆ ಪಟ್ಟುಹಿಡಿದು ಘೋಷಣೆ ಕೂಗಿದರು. ಮತ್ತೂಂದೆಡೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದರಿಂದ ಎರಡು ಗುಂಪುಗಳನ್ನು ಚದುರಿಸುವಲ್ಲಿ ಪೊಲೀಸರು ಹರಸಹಾಸ ಪಟ್ಟರು.
ಸಭೆಯಲ್ಲಿ ಹಾಜರಿದ್ದ ಜೆಡಿಎಸ್ ಸದಸ್ಯ ವೈಹೀದ್ ಜರ್ದಿ ತಟ್ಟಸ್ಥವಾಗಿದ್ದಾಗಿ ತಿಳಿಸಿದ್ದಾರೆ. ಆಯ್ಕೆ ಬಳಿಕ ಶಾಸಕ ಸುಭಾಷ ಗುತ್ತೇದಾರ, ಸಂಸದ ಭಗವಂತ ಖೂಬಾ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಸನ್ಮಾನಿಸಿದರು. ಜಿ.ಪಂ ಸದಸ್ಯ ಹರ್ಷಾನಂದಗುತ್ತೇದಾರ, ವಿಪ ಮಾಜಿ ಸದಸ್ಯ ಅಮರನಾಥ ಪಾಟೀಲ, ಸಂತೋಷ ಹಾದಿಮನಿ, ವೀರಣ್ಣ ಮಂಗಾಣೆ, ಹಣಮಂತರಾವ ಮಲಾಜಿ, ಮಲ್ಲಣ್ಣ ನಾಗೂರೆ, ಅಶೋಕ ಗುತ್ತೇದಾರ, ಮಲ್ಲಿಕಾರ್ಜುನ ಕಂದಗೂಳೆ, ಮಹಿಬೂಬ್ ನಿಂಬರ್ಗಾ, ಜಿಪಂ ಸದಸ್ಯ ಗುರುಶಾಂತ ಪಾಟೀಲ ನಿಂಬಾಳ, ಗುರುನಾಥ ಪಾಟೀಲ, ಆಳಂದ ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ, ಚೆನ್ನವೀರ ಪಾಟೀಲ, ನಿಜಲಿಂಗಪ್ಪ ಕೊರಳ್ಳಿ, ಗೌರಿ ಚಿಚಕೋಟಿ, ಪ್ರಕಾಶ ಮಾನೆ, ಶರಣು ಕುಮಸಿ, ಸುನೀಲ ಹಿರೋಳಿಕರ್ ಹಾಗೂ ಪುರಸಭೆ ಸದಸ್ಯರು ಭಾಗವಹಿಸಿದ್ದರು.