Advertisement

BJP ಕಾಲದಲ್ಲೇ ಸೈಟ್‌ ಕೊಟ್ಟಿದ್ದು: ಸಿಎಂ ಸಮರ್ಥನೆ

11:38 PM Jul 02, 2024 | Team Udayavani |

ಬೆಂಗಳೂರು: ನಮ್ಮ ಜಾಗವನ್ನು ಮುಡಾ ನಿವೇಶನವಾಗಿ ಪರಿವರ್ತಿಸಿಕೊಂಡು ಹಂಚಿಕೆ ಮಾಡಿಬಿಟ್ಟಿತ್ತು. ಅದಕ್ಕೆ ಪ್ರತಿಯಾಗಿ ಬೇರೆಡೆ ಸಮಾನಾಂತರ ನಿವೇಶನ ಕೊಟ್ಟಿದೆ. ಇದರಲ್ಲಿ ತಪ್ಪೇನಿದೆ? ಜಮೀನು ಕಳೆದುಕೊಂಡ ಅನಂತರ ವಾಪಸ್‌ ಕೇಳಬಾರದೇ? ಹಾಗೇ ಇದ್ದುಬಿಡಬೇಕಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

ಗೃಹಕಚೇರಿ “ಕೃಷ್ಣಾ’ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಿಂಗ್‌ರಸ್ತೆಯ ಕೆಸರೆ ಎಂಬಲ್ಲಿ 3.16 ಎಕರೆ ಜಮೀನನ್ನು ನನ್ನ ಬಾಮೈದ ಮಲ್ಲಿಕಾರ್ಜುನ್‌ ಖರೀದಿಸಿದ್ದರು. ಬಳಿಕ ಅದನ್ನು ಸಹೋದರಿ (ನನ್ನ ಪತ್ನಿ)ಗೆ ಅರಿಶಿಣ-ಕುಂಕುಮದ ಗಿಫ್ಟ್ ಡೀಡ್‌ (ದಾನವಾಗಿ) ಕೊಟ್ಟಿದ್ದರು. ಅನಂತರದ ದಿನಗಳಲ್ಲಿ ಆ ಜಮೀನನ್ನು ಮುಡಾ ನಿವೇಶನವಾಗಿ ಪರಿವರ್ತಿಸಿ ಬೇರೆಯವರಿಗೆಲ್ಲ ಮಾರಾಟ ಮಾಡಿಬಿಟ್ಟಿದೆ. ಅದಕ್ಕೆ ಸಮಾನಾಂತರವಾಗಿ 50:50 ಅನುಪಾತದಲ್ಲಿ ಬೇರೆಡೆ ನಿವೇಶನವನ್ನು ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಕೊಡಲಾಗಿದೆ. ಇದರಲ್ಲಿ ತಪ್ಪೇನಿದೆ? ನಾವು ಆಸ್ತಿ ಕಳೆದುಕೊಂಡು ಸುಮ್ಮನೆ ಇದ್ದುಬಿಡಬೇಕಾ? ಅದನ್ನು ಕೇಳುವುದು ಹಾಗೂ ನ್ಯಾಯಯುತವಾಗಿ ಕೊಟ್ಟಿದ್ದು ತಪ್ಪಾ ಎಂದು ಮರು ಪ್ರಶ್ನೆ ಮಾಡಿದರು.

ಮುಖ್ಯಮಂತ್ರಿ ಪತ್ನಿ ಅಕ್ರಮ ಮಾಡಿಲ್ಲ: ಡಿಸಿಎಂ ಡಿಕೆಶಿ
ರಾಮನಗರ: ಮುಖ್ಯಮಂತ್ರಿಗಳ ಪತ್ನಿ ಯಾಕೆ ಅಕ್ರಮ ಮಾಡುತ್ತಾರೆ? ಅವರ ಆಸ್ತಿ ಮುಡಾಕ್ಕೆ ಭೂಸ್ವಾಧೀನವಾಗಿದೆ. ಇದಕ್ಕೆ ಪರ್ಯಾಯವಾಗಿ ಜಾಗ ಕೊಡಬೇಕು. ಅದೂ ಬಿಜೆಪಿಯವರ ಆಡಳಿತದಲ್ಲೇ ಸೈಟ್‌ ಕೊಟ್ಟಿದ್ದಾರೆ ಎಂದು ಸಿಎಂ ಪರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆ ನೀಡಿದ್ದಾರೆ.

ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾದಲ್ಲಿ 4 ಸಾವಿರ ಕೋಟಿ ರೂ. ಅಕ್ರಮವಾಗಿದೆಯಾ ಎಂದು ಅಚ್ಚರಿ ವ್ಯಕ್ತಪಡಿಸಿದ ಡಿಸಿಎಂ, ಸಿಎಂ ಪತ್ನಿ ತಮ್ಮ ಭೂಮಿಯನ್ನು ಡಿನೋಟಿಫಿಕೇಷನ್‌ ಮಾಡಿಲ್ಲ. ಅದಕ್ಕಾಗಿ ಇನ್ಸೆಂಟಿವ್‌ ಸೈಟ್‌ ಕೊಟ್ಟಿದ್ದಾರೆ. ಅನುಪಾತದ ಆಧಾರದ ಮೇಲೆ ಸೈಟ್‌ ಕೊಡಲಾಗಿರುತ್ತದೆ. ಡಿನೋಟಿಫಿಕೇಷನ್‌ ಮಾಡದೇ ಇನ್ಸೆಂಟಿವ್‌ ಸೈಟ್‌ ಪಡೆದಿರೋದಕ್ಕೆ ಖುಷಿ ಪಡಬೇಕು ಎಂದರು.

ಮುಡಾ ಅಕ್ರಮದ ಹಿನ್ನೆಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಬಗ್ಗೆ ಪ್ರತಿಕ್ರಿಯಿಸಿ, ಏನೇ ಆಗಿದ್ದರೂ ಸಿಎಂ ತನಿಖೆ ಮಾಡಿಸುತ್ತಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ ಪ್ರಕರಣಕ್ಕೆ ಸಂಬಂಧಿಸಿ ಹೈದರಾಬಾದ್‌ನಿಂದಲೂ ಮಾಹಿತಿ ಪಡೆದಿದ್ದೇನೆ. ನಾಗೇಂದ್ರ ಭಾಗಿಯಾಗಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next