Advertisement

ಬಿಜೆಪಿ ಕಾರ್ಯಕಾರಿಣಿಗೆ ಹೊಸಪೇಟೆ ಕೇಸರಿಮಯ ­

11:07 AM Apr 08, 2022 | Team Udayavani |

ಹೊಸಪೇಟೆ: ವಿಜಯನಗರ ಜಿಲ್ಲಾ ಕೇಂದ್ರ, ಐತಿಹಾಸಿಕ ಹೊಸಪೇಟೆಯಲ್ಲಿ ಮೊದಲ ಬಾರಿಗೆ ನಡೆಯಲಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿಗೆ ಭರದ ಸಿದ್ಧತೆ ನಡೆದಿದೆ.

Advertisement

ಏ.16 ಮತ್ತು 17ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಹೊಸಪೇಟೆ ನಗರದ ಪ್ರಮುಖ ವೃತ್ತ, ಬೀದಿಗಳು ಕಾರ್ಯಕಾರಿಣಿಗಾಗಿ ಸಿಂಗಾರಗೊಳ್ಳುತ್ತಿದ್ದು, ನಗರ ಪ್ರವೇಶಿಸುವ ರಸ್ತೆಗಳು ಕೇಸರಿಮಯವಾಗುತ್ತಿವೆ. ರಸ್ತೆಯ ಎರಡೂ ಬದಿಯಲ್ಲಿ ಕೇಸರಿ ಕಂಬದ ಮೇಲೆ ಬಿಜೆಪಿ ಬಾವುಟ ರಾರಾಜಿಸುತ್ತಿದೆ. ಜಿಲ್ಲೆ ಘೋಷಣೆಯಾಗಿ ವರ್ಷದೊಳಗೆ ಮತ್ತು ಚುನಾವಣೆ ಹೊಸ್ತಿಲಲ್ಲಿ ಹೊಸ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಕಾರ್ಯಕಾರಿಣಿ ಗಮನ ಸೆಳೆದಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌, ಸಿಎಂ ಬಸವರಾಜ್‌ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರು ಕಾರ್ಯಕಾರಿಣಿಗೆ ಹಾಜರಾಗಲಿದ್ದಾರೆ. ಬಿಜೆಪಿ ಮಹತ್ತರವಾದ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಇದನ್ನೇ ಚುನಾವಣೆಗೆ ರಣಕಹಳೆ ಎಂದುಕೊಳ್ಳಿ ಎಂದು ಸಚಿವ ಆನಂದ್‌ಸಿಂಗ್‌ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಕಾರ್ಯಕಾರಿಣಿಯಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಎಲ್ಲರಲ್ಲೂ ಕುತೂಹಲ ಮನೆ ಮಾಡಿದೆ.

ಹೊಸಪೇಟೆ ಕೇಸರಿಮಯ: ಹೊಸಪೇಟೆ ನಗರ ಪ್ರವೇಶಿಸುತ್ತಿದ್ದಂತೆ ಹೆದ್ದಾರಿ ಹಾಗೂ ಇತರೆ ರಸ್ತೆಗಳಲ್ಲಿ ಸುಮಾರು 3 ಕಿಮೀಗೂ ಹೆಚ್ಚು ಕಡೆಗಳಲ್ಲಿ ಬಿಜೆಪಿ ಬಾವುಟಗಳು ಹಾರಾಡುತ್ತಿವೆ. ಕಂಬಗಳಿಗೆ ಕೇಸರಿ ಬಟ್ಟೆ ಸುತ್ತಿದ್ದು, ಅದರ ತುದಿಗೆ ಬಾವುಟ ಕಟ್ಟಲಾಗಿದೆ. ಪ್ರತಿ ಹತ್ತು ಅಡಿಗೊಂದು ಕಂಬ ಹಾಕಲಾಗಿದೆ. ಹರಿಹರ ರಸ್ತೆಯಲ್ಲಿ ಗುಂಡಾ ಸಸ್ಯೋದ್ಯಾನದ ಸಮೀಪದಿಂದ ನಗರದ ಮಧ್ಯಭಾಗದವರೆಗೂ ಹೆದ್ದಾರಿ ಮೂಲಕ ನೇರ ಕಾರ್ಯಕಾರಿಣಿ ವೇದಿಕೆ ಸ್ಥಳದವರೆಗೆ, ಕಮಲಾಪುರ ರಸ್ತೆಯಲ್ಲಿ ಕೊಂಡಾನಾಯಕನಹಳ್ಳಿವರೆಗೆ, ಬಳ್ಳಾರಿ ರಸ್ತೆಯಲ್ಲಿ ಸಂಕ್ಲಾಪುರದವರೆಗೆ, ಹೊಸೂರು-ಮಾಗಾಣಿ ರಸ್ತೆ, ಕೊಪ್ಪಳ ರಸ್ತೆ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಕೇಸರಿ ಕಂಬಗಳ ಮೇಲೆ ಬಿಜೆಪಿ ಧ್ವಜ ಹಾರಾಡುತ್ತಿದೆ.

ಹೇಗಿದೆ ವೇದಿಕೆ? ಹೊಸಪೇಟೆಯ ಭಟ್ರಹಳ್ಳಿ ಆಂಜನೇಯ ದೇಗುಲದ ಬಯಲು ಸ್ಥಳದಲ್ಲಿ ಮಾ.28ರಂದು ವೇದಿಕೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಸಿದ್ಧತೆ ಭರದಿಂದ ಸಾಗಿದೆ. ವೇದಿಕೆಯಲ್ಲಿ ಹಂಪಿಯ ವಾಸ್ತುಶಿಲ್ಪ ಅನಾವರಣಗೊಳ್ಳಲಿದೆ. ಜತೆಗೆ ಬಿಜೆಪಿಯ ಕಮಲದ ಚಿಹ್ನೆ ರಾರಾಜಿಸಲಿದೆ. ಬಯಲು ಜಾಗದಲ್ಲಿ ಹವಾನಿಯಂತ್ರಿತ ಜರ್ಮನ್‌ ಟೆಂಟ್‌ ನಿರ್ಮಿಸುತ್ತಿದ್ದು, 750 ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ಕಾರ್ಯಕಾರಿಣಿಗಾಗಿ 80 ಅಡಿ ಉದ್ದ ಮತ್ತು 40 ಅಡಿ ಅಗಲದ ವೇದಿಕೆ ನಿರ್ಮಾಣಗೊಳ್ಳಲಿದೆ. ವೇದಿಕೆ ಹಿಂಭಾಗದಲ್ಲಿ 30 ಅಡಿ ಎತ್ತರದ ಬ್ಯಾಕ್‌ಡ್ರಾಪ್‌ ಇರಲಿದೆ. ಇದರಲ್ಲಿ ಹಂಪಿಯ ವಾಸ್ತು ಶಿಲ್ಪದ ಪ್ರಪಂಚ ಗೋಚರಿಸಲಿದೆ. ಹಂಪಿಯ ಶ್ರೀವಿರೂಪಾಕ್ಷೇಶ್ವರ ಗೋಪುರ, ಕಲ್ಲಿನ ತೇರು, ಸಾಸಿವೆಕಾಳು ಗಣಪ, ಆನೆಗೊಂದಿಯ ಅಂಜನಾದ್ರಿ ಬೆಟ್ಟದ ಆಂಜನೇಯ, ವಿಜಯ ವಿಠuಲ ದೇಗುಲದ ಸಪ್ತಸ್ವರ ಹೊರಡಿಸುವ ಕಲ್ಲಿನ ಕಂಬಗಳು, ಉಗ್ರ ನರಸಿಂಹ ಸೇರಿದಂತೆ ವಿವಿಧ ಸ್ಮಾರಕಗಳ ಮಿಶ್ರಣದೊಂದಿಗೆ ವೇದಿಕೆ ಕಂಗೊಳಿಸಲಿದೆ. ವೇದಿಕೆ ಸುತ್ತ ವಿವಿಧ ಸ್ಮಾರಕಗಳನ್ನು ಕೂಡ ಸೃಜಿಸಲಾಗುತ್ತದೆ. ಇದಕ್ಕಾಗಿ 200 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ವೇದಿಕೆ ಸಭಾಂಗಣದ ಸುತ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ ಪ್ರತಿಬಿಂಬಿಸಲು ಸ್ಟಾಲ್‌ಗ‌ಳನ್ನು ನಿರ್ಮಿಸಲಾಗುತ್ತಿದೆ.

Advertisement

ಬಿಜೆಪಿ ರಾಜ್ಯ ಕಾರ್ಯಕಾರಣಿ ಹೊಸಪೇಟೆಯಲ್ಲಿ ಪ್ರಥಮ ಬಾರಿಗೆ ನಡೆಯುತ್ತಿದೆ. ಭಟ್ಟರಳ್ಳಿ ಆಂಜನೇಯ ಬಯಲು ಜಾಗದಲ್ಲಿ ಹವಾನಿಯಂತ್ರಿತ ಜರ್ಮನ್‌ ಟೆಂಟ್‌ ನಿರ್ಮಿಸುತ್ತಿದ್ದು, ಹಂಪಿಯ ವಾಸ್ತು ಶಿಲ್ಪದ ಪ್ರಪಂಚ ಗೋಚರಿಸಲಿದೆ. ಟೆಂಟ್‌ನಲ್ಲಿ 750 ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ.   –ಆನಂದ್‌ ಸಿಂಗ್‌, ಪ್ರವಾಸೋದ್ಯಮ ಸಚಿವ                         

-ಪಿ.ಸತ್ಯನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next