ಹೊಸದಿಲ್ಲಿ: ಭಾರತದ ಮೊದಲ ರಾಷ್ಟ್ರಪತಿ? ರಾಜೇಂದ್ರ ಪ್ರಸಾದ್. ಮೊದಲ ಉಪ ರಾಷ್ಟ್ರಪತಿ? ಎಸ್.ರಾಧಾಕೃಷ್ಣನ್, ದೇಶದ ಮೊದಲ ಉಪ ಪ್ರಧಾನಿ? ಸರ್ದಾರ್ ವಲ್ಲಭಭಾಯ್ ಪಟೇಲ್…
ಮೇಲಿನ ಕ್ರಮದಲ್ಲಿ ಏನಾದರೂ ತಪ್ಪಿ ಹೋಗಿದೆಯಾ? ಖಂಡಿತ ಒಂದು ಮಿಸ್ಸಾಗಿದೆ. ಅದು ಭಾರತದ ಮೊದಲ ಪ್ರಧಾನಿ? ಜವಾಹರ್ ಲಾಲ್ ನೆಹರು. ಆದರೆ ಈ ಸಾಮಾನ್ಯ ಜ್ಞಾನ ಪರೀಕ್ಷೆ ಈಗೇಕೆ ಅಂತೀರಾ? ಕಾರಣ ಇದೆ.
ಆಡಳಿತ ಪಕ್ಷ ಬಿಜೆಪಿ ದೇಶಾದ್ಯಂತ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಶತಮಾನೋತ್ಸವ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಬಿಜೆಪಿ ಮಕ್ಕಳಿಗಾಗಿ ಸಾಮಾನ್ಯ ಜ್ಞಾನ ಪರೀಕ್ಷೆ ನಡೆಸುತ್ತಿದೆ. ಇದಕ್ಕಾಗಿ ಪಕ್ಷದಿಂದ ಭಾರತದ ಇತಿಹಾಸಕ್ಕೆ ಸಂಬಂಧಿಸಿದ ಪ್ರತ್ಯೇಕ ಪುಸ್ತಕವೊಂದನ್ನು ಹೊರತರಲಾಗಿದೆ.
“ಸಾಮಾನ್ಯ ಜ್ಞಾನ ಪ್ರತಿಯೋಗಿತಾ 2017′ (ಸಾಮಾನ್ಯ ಜ್ಞಾನ ಸ್ಪರ್ಧೆ 2017) ಹೆಸರಿನ ಈ ಪುಸ್ತಕದಲ್ಲಿರುವ ಪ್ರಶ್ನೆಗಳನ್ನೇ ಸ್ಪರ್ಧೆಯಲ್ಲಿ ಮಕ್ಕಳಿಗೆ ಕೇಳಲಿದ್ದು, ಎಲ್ಲ ಸರಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಪುಸ್ತಕ ವಿತರಿಸಲಾಗಿದೆ. ಆದರೆ ಈ ಪುಸ್ತಕದಲ್ಲೂ ರಾಜಕೀಯ ವೈಷಮ್ಯ ಬೆರೆಸಿರುವ ಬಿಜೆಪಿ, ಭಾರತದ ಮೊದಲ ಪ್ರಧಾನಿ ಯಾರು (ನೆಹರು) ಎಂಬ ಪ್ರಶ್ನೆಯನ್ನೇ ಕೈಬಿಟ್ಟಿದೆ. ಬದಲಿಗೆ ಭಾರತದ ಪ್ರಥಮ ಪ್ರಧಾನಿ ಮೊರಾರ್ಜಿ ದೇಸಾಯಿ ಎಂದು ಸೇರಿಸಲಾಗಿದೆ.
ಇದರೊಂದಿಗೆ “ದೇಶದ ಮಹಾಪುರುಷರು’ ವಿಭಾಗದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಹೆಸರೇ ಇಲ್ಲ!
ಇದರೊಂದಿಗೆ ದೇಶದ ಮೊದಲ ಮಹಿಳಾ ಪ್ರಧಾನಮಂತ್ರಿ ಯಾರೆಂಬ (ಇಂದಿರಾ ಗಾಂಧಿ) ಪ್ರಶ್ನೆಯನ್ನೂ ಪುಸ್ತಕದಿಂದ ಕೈಬಿಡಲಾ ಗಿದೆ. ಬದಲಿಗೆ “ಭಾರತ ರತ್ನ’ ಗೌರವಕ್ಕೆ ಪಾತ್ರರಾದ ಮೊದಲ ಮಹಿಳೆ ವಿಭಾಗದಲ್ಲಿ ಇಂದಿರಾ ಗಾಂಧಿ ಅವರ ಹೆಸರಿದೆ.