Advertisement

ಕೈ ಭದ್ರಕೋಟೆ ವಶಕ್ಕೆ ಕಮಲ ಪಾಳಯ ಹರಸಾಹಸ

10:52 PM Apr 09, 2019 | Lakshmi GovindaRaju |

ಚಿತ್ರದುರ್ಗ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಐತಿಹಾಸಿಕ ಕೋಟೆನಾಡು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಹಾಗೂ ಬಿಜೆಪಿ ಮಧ್ಯೆ ನೇರ ಮತಸಮರ ನಡೆಯಲಿದೆ. ಮೈತ್ರಿ ಅಭ್ಯರ್ಥಿ, ಹಾಲಿ ಸಂಸದ ಬಿ.ಎನ್‌. ಚಂದ್ರಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ಆನೇಕಲ್‌ ನಾರಾಯಣಸ್ವಾಮಿ ಇಬ್ಬರೂ ಬೇರೆ ಜಿಲ್ಲೆಯವರೇ ಆಗಿದ್ದು, ವಲಸೆ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

Advertisement

ಅತಿ ಹೆಚ್ಚು ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳ ಮತದಾರರನ್ನು ಒಳಗೊಂಡ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮೈತ್ರಿಕೂಟ ಹಾಗೂ ಬಿಜೆಪಿ ಮಧ್ಯೆಯೇ ಬಿಗ್‌ ಫೈಟ್‌ ನಿರೀಕ್ಷಿಸಬಹುದು. ಇನ್ನುಳಿದ ಅಭ್ಯರ್ಥಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದಾರೆ.

ಕಣ ಚಿತ್ರಣ: ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಬ್ಬರೂ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಗಾಗಿ ಇವರಿಬ್ಬರ ನಡುವಿನ ಸ್ಪರ್ಧೆ ತುರುಸಿನಿಂದ ಕೂಡಿದೆ. ಹಾಲಿ ಸಂಸದ ಚಂದ್ರಪ್ಪ ಬಗ್ಗೆ ಕ್ಷೇತ್ರದಲ್ಲಿ ಅಪಸ್ವರ ಕೇಳಿ ಬರುತ್ತಿಲ್ಲ. ಅದೇ ರೀತಿ ನಾರಾಯಣಸ್ವಾಮಿ ಬಗ್ಗೆಯೂ ಪಕ್ಷ, ಸಂಘ ಪರಿವಾರದಿಂದ ಭಿನ್ನ ಧ್ವನಿ ವ್ಯಕ್ತವಾಗುತ್ತಿಲ್ಲ.

ಭೋವಿ ಸಮುದಾಯಕ್ಕೆ ಟಿಕೆಟ್‌ ನೀಡಲಿಲ್ಲ ಎನ್ನುವ ಅಸಮಾಧಾನ ಹೊರತುಪಡಿಸಿದರೆ ಹೇಳಿಕೊಳ್ಳುವಂತಹ ಸಮಸ್ಯೆ ಬಿಜೆಪಿ ಅಭ್ಯರ್ಥಿಗಿಲ್ಲ. ಮೈತ್ರಿಕೂಟದ ಅಭ್ಯರ್ಥಿ ಬಿ.ಎನ್‌. ಚಂದ್ರಪ್ಪ ಪುನರಾಯ್ಕೆಯಾಗಲು ಕನಸು ಕಾಣುತ್ತಿದ್ದಾರೆ. ಅಧಿಕಾರಾವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಕೆಲಸ ಮಾಡಿದ್ದರಿಂದ ಜನತೆ ಮತ್ತೂಮ್ಮೆ ಕೈಹಿಡಿಯಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಅಲ್ಲದೆ ಈ ಬಾರಿ ಜೆಡಿಎಸ್‌ ಮತಗಳೂ ದೊರೆಯುವುದರಿಂದ ಗೆಲುವು ನಿಶ್ಚಿತ ಎಂದೇ ಹೇಳಲಾಗುತ್ತಿದೆ. ಚಳ್ಳಕೆರೆ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಟಿ. ಕುಮಾರಸ್ವಾಮಿ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ ಎಸ್‌. ತಿಪ್ಪೇಸ್ವಾಮಿ ಸೇರಿದಂತೆ ಜಿಲ್ಲೆಯ ಹಲವು ಮುಖಂಡರು ಬೆಂಬಲ ನೀಡುತ್ತಿರುವುದರಿಂದ ತಮ್ಮ ಗೆಲುವು ಖಾತ್ರಿ ಎಂಬ ವಿಶ್ವಾಸದಲ್ಲಿದ್ದಾರೆ.

Advertisement

ಇನ್ನು ಬಿಜೆಪಿ ಅಭ್ಯರ್ಥಿ ಆನೇಕಲ್‌ ನಾರಾಣಸ್ವಾಮಿ ಆಯ್ಕೆಯಲ್ಲಿ ಸಂಘ ಪರಿವಾರದ ಶಿಫಾರಸು ಕೆಲಸ ಮಾಡಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಐವರು ಬಿಜೆಪಿ ಶಾಸಕರಿರುವುದು, ಬಿಜೆಪಿ ತನ್ನದೇ ಆದ ಮತ ಬ್ಯಾಂಕ್‌ ಹೊಂದಿರುವುದು, ಕಾಂಗ್ರೆಸ್‌ ಪಕ್ಷದಿಂದ 2009 ರಲ್ಲಿ ಸ್ಪ ರ್ಧಿಸಿ ಸೋಲು ಅನುಭವಿಸಿದ್ದ ಡಾ| ಜೆ.ಜಿ. ಹಟ್ಟಿ ತಿಪ್ಪೇಸ್ವಾಮಿ, ಕಾಂಗ್ರೆಸ್‌ ಮಾಜಿ ಜಿಲ್ಲಾಧ್ಯಕ್ಷ ಎಂ.ಎ. ಸೇತುರಾಮ್‌ ಮತ್ತಿತರರು ಬಿಜೆಪಿಗೆ ಸೇರ್ಪಡೆಗೊಂಡಿರುವುದು ಆನೆಬಲ ಬಂದಂತಾಗಿದೆ.

ದೇಶದಲ್ಲಿರುವ ಮೋದಿ ಹವಾ ಮತ್ತು ಬಿಜೆಪಿ ಪರ ಅಲೆ, ಯುವ ಸಮೂಹದ ಬೆಂಬಲ ಬಿಜೆಪಿ ಕಡೆ ಇರುವುದರಿಂದ ಗೆಲುವು ನನ್ನದೇ ಎಂಬ ವಿಶ್ವಾಸದಲ್ಲಿ ನಾರಾಯಣಸ್ವಾಮಿ ಇದ್ದಾರೆ. ನಾರಾಯಣಸ್ವಾಮಿ ಸಮಾಜಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಮುಂದಾಗಿದ್ದರು. ಭೋವಿ, ಲಂಬಾಣಿ ಸೇರಿದಂತೆ ಇತರೆ 99 ಎಸ್ಸಿ ಜಾತಿಗಳಿಗೆ ಅನ್ಯಾಯ ಮಾಡಿದ್ದಾರೆನ್ನುವ ಆರೋಪ ಕೇಳಿ ಬಂದಿದೆ. ಭೋವಿ, ಲಂಬಾಣಿ, ಕೊರಚ, ಕೊರಮ, ಶಿಳ್ಳೇಕ್ಯಾತ ಸೇರಿದಂತೆ ಮತ್ತಿತರ ಸಮುದಾಯಗಳ ಅಸಮಾಧಾನವನ್ನು ನಾರಾಯಣಸ್ವಾಮಿ ಎದುರಿಸಬೇಕಾಗಿದೆ.

ಕ್ಷೇತ್ರ ವ್ಯಾಪ್ತಿ: ಚಿತ್ರದುರ್ಗ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಾದ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು ಹಾಗೂ ತುಮಕೂರು ಜಿಲ್ಲೆಯ ಶಿರಾ, ಪಾವಗಡ ವಿಧಾನಸಭಾ ಕ್ಷೇತ್ರಗಳು ಚಿತ್ರದುರ್ಗ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರಲಿವೆ.

ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಶಾಸಕರಿದ್ದಾರೆ. ಇನ್ನುಳಿದಂತೆ ಕಾಂಗ್ರೆಸ್‌ 2 ಹಾಗೂ ಜೆಡಿಎಸ್‌ 1 ಶಾಸಕರನ್ನು ಹೊಂದಿವೆ. ಹಿರಿಯೂರು, ಮೊಳಕಾಲ್ಮೂರು, ಹೊಸದುರ್ಗ, ಹೊಳಲ್ಕೆರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋಲು ಕಂಡಿದ್ದರೂ ಅತಿ ಹೆಚ್ಚು ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ಜೆಡಿಎಸ್‌ ಒಂದು ಸ್ಥಾನ ಗೆದ್ದಿದ್ದರೂ ಪಾವಗಡದಲ್ಲಿ 409 ಮತಗಳ ಅಂತರದಿಂದ ಹಾಗೂ ಚಳ್ಳಕೆರೆಯಲ್ಲಿ 13 ಸಾವಿರ ಮತಗಳ ಅಂತರದಿಂದ ಸೋತು ಎರಡನೇ ಸ್ಥಾನದಲ್ಲಿದೆ. ಚಿತ್ರದುರ್ಗ ಕ್ಷೇತ್ರದಲ್ಲೂ ಜೆಡಿಎಸ್‌ ಎರಡನೇ ಸ್ಥಾನ ಪಡೆದಿದೆ.

ಮತದಾರರು
ಒಟ್ಟು ಮತದಾರರು: 17,60,387
ಪುರುಷರು: 8,89,274
ಮಹಿಳೆಯರು: 8,71,009
ಇತರೆ: 104

ಜಾತಿವಾರು ಲೆಕ್ಕಾಚಾರ
-ಮಾದಿಗರು-3,00,000
-ವಾಲ್ಮೀಕಿ ನಾಯಕರು-2,50,000
-ಮುಸ್ಲಿಮರು-1,60,000
-ಕುಂಚಿಟಿಗರು-1,60,000
-ಲಿಂಗಾಯತರು-1,30,000
-ಗೊಲ್ಲರು-1,50,000
-ಕುರುಬರು-1,00,000
-ಭೋವಿ-1,00,000
-ಲಂಬಾಣಿ-1,00,000
-ಇತರರು-3,10,000

* ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next