Advertisement

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಮುಖಂಭಂಗ: ಉಗ್ರಪ್ಪ

05:56 PM Nov 15, 2019 | Sriram |

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ 418 ವಾರ್ಡ್‌ಗಳ ಪೈಕಿ 151 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಗೆ ಮುಖಭಂಗವಾಗಿದೆ ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಹೇಳಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಮತದಾರರೇ ಬಿಜೆಪಿಯನ್ನು 125 ಕ್ಕೆ ಇಳಿಸಿದ್ದು ಮತದಾರರು ಬಿಜೆಪಿಯನ್ನು ತಿರಸ್ಕರಿಸಿ ಯಡಿಯೂರಪ್ಪನೇತೃತ್ವದ ಸರಕಾರಕ್ಕೆ ಕಪಾಳಮೋಕ್ಷ ಮಾಡಿದ್ದಾರೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಮೂರು ವಿಚಾರಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಆರ್‌. ಶಂಕರ್‌ ಅವರಿಗೆ ಎಂಎಲ್‌ಸಿ ಮಾಡಿ ಸಚಿವ ಸ್ಥಾನ ಕೊಡುತ್ತೇನೆ ಎಂದು ಹೇಳಿರುವುದು, ಎಲ್ಲ ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡುವುದು ಮತ್ತು ಶಿವಾಜಿನಗರ ಕ್ಷೇತ್ರದಲ್ಲಿ ತಮಿಳು ಜನಾಂಗದವರಿಗೆ ಟಿಕೆಟ್‌ ನೀಡಿದ್ದೇವೆ ಎಂದು ಆ ಸಮುದಾಯದ ಮತದಾರರನ್ನು ಓಲೈಕೆ ಮಾಡಿದ್ದಾರೆ. ಹೀಗಾಗಿ ಚುನಾವಣ ಆಯೋಗ ಯಡಿಯೂರಪ್ಪ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಅನರ್ಹರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿದ್ದ ಬಿಜೆಪಿಯವರು 16 ಮಂದಿ ಅನರ್ಹ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಂಡು ನೈತಿಕವಾಗಿ ಬೆತ್ತಲಾಗಿದ್ದಾರೆ. ಈ ಹಿಂದೆ ಮೈತ್ರಿ ಸರಕಾರದ ಪತನಕ್ಕೂ ಶಾಸಕರ ರಾಜೀನಾಮೆಗೂ ಸಂಬಂಧವಿಲ್ಲ. ಆಪರೇಷನ್‌ ಕಮಲ ಮಾಡಿಲ್ಲ ಎನ್ನುತ್ತಿದ್ದರು. ಈಗ ಅವರೇ ಅನರ್ಹರಿಗೆ ಮಾತು ಕೊಟ್ಟಂತೆ ಸಚಿವರಾಗಿ ಮಾಡುವುದಾಗಿ ಹೇಳಿರುವುದು ಅವರು ಶಾಸಕರಿಗೆ ಆಮಿಷ ಒಡ್ಡಿ ಆಪರೇಷನ್‌ ಕಮಲ ಮಾಡಿದ್ದಾರೆ ಎನ್ನುವುದು ಬಯಲಾಗಿದೆ. ರಾಜ್ಯದ ಜನತೆಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಯಡಿಯೂರಪ್ಪ ಜನರ ಕ್ಷಮೆ ಕೋರಬೇಕು ಮತ್ತು ಆಪರೇಷನ್‌ ಕಮಲದ ಪ್ರಕರಣವನ್ನು ಹಾಲಿ ಹೈಕೋರ್ಟ್‌ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಬಿಜೆಪಿಯವರು ವಿಶ್ವಾಸದ್ರೋಹಿಗಳು ಎನ್ನುವುದಕ್ಕೆ ಆರ್‌. ಶಂಕರ್‌ ಮತ್ತು ರೋಶನ್‌ ಬೇಗ್‌ ಅವರೇ ಉದಾಹರಣೆ. ಚುನಾವಣೆ ಮುಗಿದ ಅನಂತರ ಉಳಿದ ಅನರ್ಹರ ಪರಿಸ್ಥಿತಿಯೂ ಅದೇ ಆಗುತ್ತದೆ ಎಂದು ಉಗ್ರಪ್ಪ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next