ಪಾಟ್ನಾ: ಬಿಹಾರದ ಕರಕತ್ ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿ, ರಾಷ್ಟ್ರೀಯ ಲೋಕ ಮೋರ್ಚಾ ಪಕ್ಷದ ಉಪೇಂದ್ರ ಕುಶ್ವಾಹಾ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಕ್ಕಾಗಿ ಭೋಜ್‌ಪುರಿ ನಟ-ರಾಜಕಾರಣಿ ಪವನ್ ಸಿಂಗ್ ಅವರನ್ನು ಬಿಜೆಪಿ ಉಚ್ಚಾಟಿಸಿದೆ.
ಕರಕಟ್‌ನಿಂದ ಅವರ ಉಮೇದುವಾರಿಕೆ ಬಗ್ಗೆ ವಾರಗಳ ಊಹಾಪೋಹಗಳಿಗೆ ಅಂತ್ಯ ಹಾಡಿ, ಪವನ್ ಸಿಂಗ್ ಅವರು ಮೇ 9 ರಂದು ನಾಮಪತ್ರ ಸಲ್ಲಿಸಿದ್ದರು.
2014 ರಲ್ಲಿ ಬಿಜೆಪಿ ಬಿಹಾರ ರಾಜ್ಯ ಘಟಕದ ಮುಖ್ಯಸ್ಥ ನಿತ್ಯಾನಂದ ರಾಯ್ ಮತ್ತು ಬಿಹಾರ ಉಸ್ತುವಾರಿ ಭೂಪೇಂದ್ರ ಯಾದವ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿ ಸಕ್ರಿಯವಾಗಿದ್ದ ಪವನ್ ಸಿಂಗ್ ಅವರಿಗೆ ಬಿಜೆಪಿ ಈ ಬಾರಿ ಪಶ್ಚಿಮ ಬಂಗಾಳದ ಅಸನ್ಸೋಲ್‌ನಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಟಿಕೆಟ್ ಘೋಷಣೆಯಾದ ಬಳಿಕ ನಾನು ಸ್ಪರ್ಧಿಸುವುದಿಲ್ಲ ಎಂದು ಪಕ್ಷಕ್ಕೆ ಭಾರಿ ಮುಜುಗರ ತಂದಿಟ್ಟಿದ್ದರು. ಇದು ಬಿಜೆಪಿ ಹಿರಿಯ ನಾಯಕರನ್ನು ಕೆರಳುವಂತೆ ಮಾಡಿತ್ತು.
ಸ್ಫರ್ಧಿಸುವುದಿಲ್ಲ ಎಂದ ಬಳಿಕ ಬಿಜೆಪಿ ನಾಯಕರ ಪ್ರಯತ್ನದ ಬಳಿಕ, ಯು ಟರ್ನ್ ಹೊಡೆದು ಕಣಕ್ಕಿಳಿಯುತ್ತೇನೆ ನಿಮ್ಮ ಆಶೀರ್ವಾದ ಬೇಕು ಎಂದು ಭಾರಿ ಗೊಂದಲ ಸೃಷ್ಟಿ ಮಾಡಿದ್ದರು. ಆದರೆ ಬಿಜೆಪಿ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಅಸನ್ಸೋಲ್ ನಲ್ಲಿ 38 ರ ಹರೆಯದ ಪವನ್ ಸಿಂಗ್ ಅವರು ಹಾಲಿ ಸಂಸದರಾಗಿರುವ ಟಿಎಂಸಿ ನಾಯಕ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರೂಂದಿಗೆ ಸ್ಪರ್ಧಿಸಬೇಕಾಗಿತ್ತು.
ಭೋಜ್‌ಪುರಿ ಚಲನಚಿತ್ರ ರಂಗದ ಅತ್ಯುತ್ತಮ ಹಿನ್ನೆಲೆ ಗಾಯಕ, ನಟ, ಸಂಗೀತ ಸಂಯೋಜಕ, ರಂಗ ಕಲಾವಿದರಾಗಿರುವ ಪವನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.