Advertisement

ಸಾರ್ವತಿಕ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸಿ

01:16 PM Apr 16, 2022 | Team Udayavani |

ಹೊಸಕೋಟೆ: ಕಮಿಷನ್‌ ದಂಧೆ ವಿಚಾರ ಎಲ್ಲಾ ಸರ್ಕಾರದಲ್ಲೂ ನಡೆದುಕೊಂಡು ಬಂದಿದೆ. ಇದರಲ್ಲಿ ಯಾರೂ ಸತ್ಯಹರಿಶ್ಚಂದ್ರರಲ್ಲ, ಆದರೆ, ಶೇ.40ರಷ್ಟು ಅನ್ನೋದು ಮಾತ್ರ ಶುದ್ಧ ಸುಳ್ಳು ಎಂದು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ತಿರುಗೇಟು ನೀಡಿದರು.

Advertisement

ಹೊಸಕೋಟೆ ಪಟ್ಟಣದ ಕನಕಭವನದಲ್ಲಿ ಹಮ್ಮಿಕೊಂಡಿದ್ದ ಹೊಸಕೋಟೆ ತಾಲೂಕು ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿ, ಎಲ್ಲ ಸರ್ಕಾರದಲ್ಲೂ ಪರ್ಸೆಂಟೆಜ್‌ ವಿಚಾರ ನಡೆಯುತ್ತದೆ. ಆದರೆ, ಒಬ್ಬ ಮಂತ್ರಿ ಶೇ. 40ರಷ್ಟು ಕಮಿಷನ್‌ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮಂತ್ರಿ ಇಷ್ಟು ಪಡೆದರೆ ಗುತ್ತಿಗೆದಾರರು ಕೆಲಸ ಮಾಡಲು ಸಾಧ್ಯವಾಗುತ್ತದೆಯೇ ಎಂಬುದನ್ನು ಮೊದಲು ಅರಿತು, ನಂತರ ಆರೋಪ ಮಾಡಬೇಕು ಎಂದರು.

ಈಶ್ವರಪ್ಪ ಅವರು ಈಗಾಗಲೇ ಪಕ್ಷದ ವರಿಷ್ಠರ ಮಾತಿಗೆ ಬೆಲೆ ಕೊಟ್ಟು ರಾಜೀನಾಮೆ ನೀಡಿದ್ದಾರೆ. ಈಗಾಗಲೇ ತನಿಖಾ ತಂಡದಿಂದ ತನಿಖೆ ನಡೆಯುತ್ತಿದ್ದು, ಸತ್ಯಾಂಶ ಹೊರ ಬಂದ ನಂತರ ಪುನಃ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ಈಗಾಗಲೇ ಎಫ್‌ಐಆರ್‌ ದಾಖಲಾಗಿದೆ. ತನಿಖೆ ತಂಡದಿಂದ ತನಿಖೆ ಸಹ ನಡೆಯುತ್ತಿದ್ದು, ನಂತರ ಬಂಧಿಸುವುದು ಅಥವಾ ಬಿಡುವುದು ತನಿಖಾ ತಂಡಕ್ಕೆ ಬಿಟ್ಟಿದ್ದು ಎಂದರು.

ಕಾರ್ಯಕಾರಣಿ ಸಭೆ: ಏ.22ರಂದು ಕೇಂದ್ರ ಸಚಿವ ಅರುಣ್‌ ಸಿಂಗ್‌, ಜೆಪಿನಡ್ಡಾ, ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸೇರಿ ಪಕ್ಷದ ನಾಯಕರ ಸಮ್ಮುಖದಲ್ಲಿ ದೇವನಹಳ್ಳಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಯಕಾರಣಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಗ್ರಾಮಾಂತರ ಭಾಗದ ಬಿಜೆಪಿ ಪಕ್ಷದ ಬಲವನ್ನು ತೋರಿಸಬೇಕು. ಕಳೆದ 8 ವರ್ಷದಿಂದ ನಮ್ಮ ಬಿಜೆಪಿ ಸರ್ಕಾರ ಹಾಗೂ ಮೋದಿ ಅವರ ಆಡಳಿತದಿಂದ ಜನ ಸಾಮಾನ್ಯರಿಗೆ ದೊರೆತ ಕಾರ್ಯಕ್ರಮಗಳ ಬಗ್ಗೆ ಮನೆ ಮನೆಗೆ ತೆರಳಿ ತಿಳಿಸಬೇಕು ಎಂದರು.

ಭಾನುವಾರ ಹೊಸಕೋಟೆ ಪಟ್ಟಣದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಶ್ರೀ ಹನುಮಾನ ಬೃಹತ್‌ ಮೂರ್ತಿ ಶೋಭಾಯಾತ್ರೆ ನಡೆಯಲಿದ್ದು, ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಶೋಭಾಯಾತ್ರೆಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

Advertisement

ಉತ್ತಮ ಆಡಳಿತ ನೀಡುತ್ತಿದೆ: ಬಿಬಿಎಂಪಿ ಮಾಜಿ ಸದಸ ಎಂಟಿಬಿ ರಾಜೇಶ್‌ ಮಾತನಾಡಿ, ಎಂಟಿಬಿ ನಾಗರಾಜ್‌ ಅವರಿಂದ ಈ ಭಾಗದಲ್ಲಿ ಬಿಜೆಪಿ ಪಕ್ಷ ಬಲವರ್ಧನೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣದಲ್ಲಿ ಮೊದಲ ಬಿಜೆಪಿ ಕಾರ್ಯಕಾರಣಿ ಸಭೆ ನಡೆಯುತ್ತಿದ್ದು, ದೇವನಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ 5 ಸಾವಿರಕ್ಕೂ ಅಧಿಕ ಮಂದಿ ಈ ಕ್ಷೇತ್ರದಿಂದ ಭಾಗವಹಿಸಬೇಕು. ಕಳೆದ 8 ವರ್ಷಗಳಿಂದ ಜನ ಸಾಮಾನ್ಯರು ಬಿಜೆಪಿ ಪಕ್ಷಕ್ಕೆ ಅಧಿಕಾರ ನೀಡಿದ್ದು, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಮೋದಿ ಸರ್ಕಾರ ಹಾಗೂ ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ ಎಂದರು.

ಸೇವೆ ಮಾಡಲು ಸಿದ್ಧ: ಕಾರ್ಯಕರ್ತರ ಎಲ್ಲ ಕುಂದುಕೊರತೆಗಳಿಗೆ ಸ್ಪಂದಿಸಲು ಸದಾ ಸಿದ್ಧರಿರುವ ನಮ್ಮ ನಾಯಕರು ಯಾವ ಸಮಯದಲ್ಲಾದರೂ ತಮ್ಮ ಸೇವೆ ಮಾಡಲು ಸಿದ್ಧ ಎಂದರು. ಬೆಂಗಳೂರು ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಎ.ವಿ. ನಾರಾಯಣ ಸ್ವಾಮಿ, ಸಂಘಟನಾ ಕಾರ್ಯದರ್ಶಿ ಕಾಂತರಾಜು, ನಗರಸಭೆ ಅಧ್ಯಕ್ಷ ಡಿ.ಕೆ ನಾಗರಾಜ್‌, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಂಕರೇಗೌಡ, ಬಿಜೆಪಿ ಅಧ್ಯಕ್ಷ ಕೆ. ಸತೀಶ್‌, ಸಿ.ನಾಗರಾಜ್‌, ಬಿ.ಎಂ. ನಾರಾಯಣ ಸ್ವಾಮಿ, ಟೌನ್‌ ಬ್ಯಾಂಕ್‌ ಅಧ್ಯಕ್ಷ ಬಾಲಚಂದ್ರನ್‌, ಸುಜಾತಾ, ಅನುರೆಡ್ಡಿ, ರಾಜಶೇಖರ್‌, ಸುಗುಣಾ ಮೋಹನ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next