ನವದೆಹಲಿ: ಬಿಜೆಪಿಯಲ್ಲಿ ಅಧ್ಯಕ್ಷೀಯ ಚುನಾವಣೆ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಬೂತ್ ಮಟ್ಟದ ಚುನಾವಣೆ ಅಕ್ಟೋಬರ್‌ನಲ್ಲಿ ಶುರುವಾಗಲಿದ್ದು, ನವೆಂಬರ್‌ನಲ್ಲಿ ಜಿಲ್ಲಾ ಮಟ್ಟದ ಚುನಾವಣೆಗಳು ನಡೆಯಲಿವೆ. ಅಲ್ಲದೆ, ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಅಧ್ಯಕ್ಷರ ಹುದ್ದೆಗೆ ಚುನಾವಣೆ ನಡೆಯಲಿದೆ ಎಂದು ನಡ್ಡಾ ಹೇಳಿದ್ದಾರೆ.
ಈ ಮಧ್ಯೆ ಸದಸ್ಯತ್ವ ಅಭಿಯಾನದಲ್ಲಿ ಒಟ್ಟು 18 ಕೋಟಿ ಸದಸ್ಯರನ್ನು ಬಿಜೆಪಿ ಹೊಂದಿದೆ. ಜುಲೈ 6 ರಿಂದ ಆಗಸ್ಟ್ 20ರ ವರೆಗೆ ಅಭಿಯಾನ ನಡೆಸಲಾಗಿದ್ದು, ಈ ಅವಧಿಯಲ್ಲಿ ಒಟ್ಟು 7 ಹೊಸ ಕೋಟಿ ಸದಸ್ಯರನ್ನು ಸೇರಿಸಿಕೊಳ್ಳಲಾಗಿದೆ. 1.85 ಲಕ್ಷ ವಿಸ್ತಾರಕರು ಈ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದರು. ಬಿಜೆಪಿ ಸದಸ್ಯತ್ವ ಸಂಖ್ಯೆ ಸದ್ಯ ಎಷ್ಟಿದೆಯೆಂದರೆ, ಬಿಜೆಪಿ ಸದಸ್ಯರಿಗಿಂತ ಹೆಚ್ಚಿನ ಜನಸಂಖ್ಯೆಯಿರುವ ದೇಶಗಳು ವಿಶ್ವದಲ್ಲಿ ಕೇವಲ ಎಂಟು ಎಂದು ನಡ್ಡಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಸದಸ್ಯತ್ವದ ಗುರಿ 10 ಲಕ್ಷ ಇತ್ತು. ಆದರೆ ಇದು 1 ಕೋಟಿ ದಾಟಿದ್ದು, ರಾಜ್ಯ ಸರ್ಕಾರದ ವಿರುದ್ಧ ಜನರು ಬೇಸತ್ತಿದ್ದು ಸ್ಪಷ್ಟವಾಗಿದೆ ಎಂದಿದ್ದಾರೆ. ಇನ್ನೊಂದೆಡೆ ಜಮ್ಮು ಕಾಶ್ಮೀರದಲ್ಲಿ ಆರು ಲಕ್ಷ ಜನರು ಬಿಜೆಪಿಗೆ ಸದಸ್ಯರಾಗಿದ್ದಾರೆ.
ಆನ್‌ಲೈನ್‌ನಲ್ಲಿ 5,81,34, 242 ಸದಸ್ಯರನ್ನು ಆನ್‌ಲೈನ್ ಮೂಲಕ ಮತ್ತು ಸಾಮಾನ್ಯ ಮಾದರಿಯಲ್ಲಿ 62,34,967 ಮಂದಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎಂದಿದ್ದಾರೆ. ಜು.6ರಂದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ದೇಶಾದ್ಯಂತ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಸದ್ಯ ಗೃಹ ಸಚಿವ ಅಮಿತ್ ಶಾ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿರುವ ಜೆ.ಪಿ.ನಡ್ಡಾ ಅವರೇ ಮುಂದಿನ ಅಧಕ್ಷರಾಗುವುದು ಖಚಿತವಾಗಿದೆ.
ಬಿಜೆಪಿಯಿಂದ ಸೇವಾ ಸಪ್ತಾಹ: ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇವಾ ಸಪ್ತಾಹವನ್ನು ಆಚರಿಸಲು ನಿರ್ಧರಿಸಿದ್ದಾರೆ. ಸೆ. 14 ರಿಂದ ಸೆ. 20ರ ವರೆಗೆ ದೇಶಾದ್ಯಂತ ಸ್ವಚ್ಛತೆ ಹಾಗೂ ಸಾಮಾಜಿಕ ಸೇವೆಗಳನ್ನು ಪಕ್ಷದ ಕಾರ್ಯಕರ್ತರು ನಡೆಸಲಿದ್ದಾರೆ. ರಕ್ತದಾನ ಕ್ಯಾಂಪ್, ಆರೋಗ್ಯ ಕ್ಯಾಂಪ್ ಮತ್ತು ಕಣ್ಣು ತಪಾಸಣೆ ಕ್ಯಾಂಪ್ ಅನ್ನು ನಡೆಸಲಾಗುತ್ತದೆ.