ಆಲ್ದೂರು: ಬಿಜೆಪಿ ದೇಶಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು. ಪಟ್ಟಣದ ಜಾಮೀಯಾ ಶಾದಿಮಹಲ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ( ಎಸ್ಸಿ)ಮೋರ್ಚಾದ ಪದಗ್ರಹಣ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ದೇಶದಲ್ಲಿರುವ ಹಿಂದೂಗಳ ರಕ್ಷಣೆ ಕೇವಲ ನಮ್ಮಿಂದ ಮಾತ್ರ ಸಾಧ್ಯ ಎಂದು ಜನರನ್ನು ನಂಬಿಸಿ ಬಿಜೆಪಿಯವರು ಅಧಿಕಾರಕ್ಕೆ ಬಂದರು. ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಮಾಡಿರುವ ಸಾಧನೆಯಾದರೂ ಏನು? ಉದ್ಯೋಗ ಸೃಷ್ಟಿಸುತ್ತೇವೆ, ಬಡವರು, ಮಧ್ಯಮ ವರ್ಗದವರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ. ಎಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಇಲ್ಲಿವರೆಗೆ ಎಷ್ಟು ದೇವಾಲಯ ಕಟ್ಟಿದ್ದಾರೆ, ಎಷ್ಟು ಕಾರ್ಖಾನೆಗಳನ್ನು ಸ್ಥಾಪಿಸಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದ್ದಾರೆ ಎನ್ನುವುದನ್ನು ತಿಳಿಸಲಿ ಎಂದು ಸವಾಲು ಹಾಕಿದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಸಂವಿಧಾನ ಬದಲಾಯಿಸಲು ಮೋದಿ ಸರ್ಕಾರ ಹುನ್ನಾರ ನಡೆಸುತ್ತಿದೆ. ದಲಿತರಿಗಾಗಿ ಕಾಂಗ್ರೆಸ್ ಅನೇಕ ಕೊಡುಗೆ ನೀಡಿದೆ. ಭೂ ಒಡೆತನ ಕಾಯ್ದೆ ಜಾರಿಗೆ ತಂದಿದೆ. ಹಿಂದುಳಿದ ಮಕ್ಕಳ ಉಚಿತ ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್‌ಗಳನ್ನು ತೆರೆದಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ| ವಿಜಯ್‌ಕುಮಾರ್ ಮಾತನಾಡಿ, 4 ವರ್ಷದಿಂದ ರಾಮಮಂದಿರ ನಿರ್ಮಾಣದ ಬಗ್ಗೆ ಚಕಾರ ಎತ್ತದವರಿಗೆ ಈಗ ರಾಮ ಮಂದಿರ ನೆನಪಾಗಿದೆ. ಇಲ್ಲಿಯವರೆಗೆ ರಾಮಮಂದಿರ ನಿರ್ಮಾಣಕ್ಕೆ ಮುಹೂರ್ತ ಕೂಡಿಬರಲಿಲ್ಲವಾ ಎಂದು ವ್ಯಂಗವಾಡಿದರು. ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಹೂವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕ, ಟಿ.ಡಿ. ರಾಜೇಗೌಡ, ಎಪಿಎಂಸಿ ಅಧ್ಯಕ್ಷ ಪ್ರಕಾಶ್, ತಾಪಂ ಮಾಜಿ ಅಧ್ಯಕ್ಷ ಉದ್ದಯ್ಯ ಅವರನ್ನು ಸನ್ಮಾನಿಸಲಾಯಿತು. ಬ್ಲಾಕ್ ಎಸ್ಸಿ ಮೋರ್ಚಾದ ಅಧ್ಯಕ್ಷ ಈರಯ್ಯ, ಕಾರ್ಯಧ್ಯಕ್ಷ ರೋಹಿತ್, ಹೋಬಳಿ ಅಧ್ಯಕ್ಷರಾದ ದೇವರಾಜು, ವಸಂತ್, ಮಧು, ಸಗನಪ್ಪ ಅವರ ಪದಗ್ರಹಣ ನಡೆಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಾಯತ್ರಿ ಶಾಂತೇಗೌಡ, ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ವನಮಾಲಾ ಮೃತ್ಯಂಜಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಸ್ವಾಮಿ, ಬ್ಲಾಕ್ ಅಧ್ಯಕ್ಷ ಮುದಾμàರ್, ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಈರೇಗೌಡ, ಬ್ಲಾಕ್ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಯುವ ಮೋರ್ಚಾದ ಅಧ್ಯಕ್ಷ ಪೂರ್ಣೇಶ್, ತಾಪಂ ಮಾಜಿ ಸದಸ್ಯ ಗಂಗಯ್ಯ ಮತ್ತಿತರರಿದ್ದರು.
ದನಗಳನ್ನು ಮಾರಾಟ ಮಾಡುವವರು ಹಿಂದುಗಳೇ ವಿನಃ ಮುಸ್ಲಿಂರಲ್ಲ, ದೊಡ್ಡಿಗೆ ದನಗಳನ್ನು ಹೊಡೆಯುವ ಸಂದರ್ಭದಲ್ಲಿ ಅವರನ್ನು ಅಡ್ಡಗಟ್ಟಿ ತಳಿಸುತ್ತಾರೆ. ಮನೆ ನುಗ್ಗಿ ದರೋಡೆ, ದೌರ್ಜನ್ಯ ಮಾಡುತ್ತಾರೆ. ಇಂತವರ ಅಧಿಕಾರ ನಿಮಗೆ ಬೇಕಾ? ದಲಿತರು, ಅಲ್ಪಸಂಖ್ಯಾತರು ಹಿಂದುಳಿದವರು ನೆಮ್ಮದಿಯಾಗಿ ಜೀವನ ಸಾಗಿಸಬೇಕಾದರೆ ಬಿಜೆಪಿ ಅಧಿಕಾರವನ್ನು ಕೊನೆಗೊಳಿಸಬೇಕು ಟಿ.ಡಿ.ರಾಜೇಗೌಡ, ಶಾಸಕ