Advertisement
ಇನ್ನು, ಸಮಾಜವಾದಿ ಪಕ್ಷದ ಮತ ಹಂಚಿಕೆಯೂ ಹೆಚ್ಚಳವಾಗಿದೆ. 2017ರಲ್ಲಿ ಶೇ.21.82ರಷ್ಟು ಮತಗಳನ್ನು ಪಡೆದಿದ್ದ ಎಸ್‌ಪಿ, ಈ ಬಾರಿ ಶೇ.32.02ರಷ್ಟು ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ರಾಜ್ಯದ ಪ್ರಮುಖ ಪ್ರತಿಪಕ್ಷ ಎಂಬ ಪಟ್ಟವನ್ನು ಉಳಿಸಕೊಂಡಿದೆ.
ಉತ್ತರಪ್ರದೇಶದಲ್ಲಿ ಕೆಲವು ಪ್ರಮುಖ ರಾಜಕೀಯ ಪಕ್ಷಗಳನ್ನೂ ಹಿಮ್ಮೆಟ್ಟಿಸಿ “ನೋಟಾ’ ಮುಂದೆ ಸಾಗಿರುವುದು ಕಂಡುಬಂದಿದೆ! ಈ ಚುನಾವಣೆಯಲ್ಲಿ ನೋಟಾ(ಮೇಲಿನ ಯಾವುದೂ ಅಲ್ಲ) ಆಯ್ಕೆಯ ಮತ ಹಂಚಿಕೆಯು ಶೇ.0.69 ಎಂದು ಚುನಾವಣಾ ಆಯೋಗ ಹೇಳಿದೆ. ಆಮ್ ಆದ್ಮಿ ಪಕ್ಷ(ಶೇ.0.35) ಮತ್ತು ಜೆಡಿಯು(ಶೇ.0.11)ಗೆ ಹೋಲಿಸಿದರೆ ನೋಟಾದ ಮತ ಹಂಚಿಕೆ ಹೆಚ್ಚಾಗಿದೆ. ಇನ್ನು, ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಪಕ್ಷವು ಶೇ.0.47ರಷ್ಟು ಮತಗಳನ್ನಷ್ಟೇ ಪಡೆದಿದೆ. ಸಿಪಿಐ ಶೇ.0.07, ಎನ್‌ಸಿಪಿ ಶೇ.0.05, ಶಿವಸೇನೆ ಶೇ.0.03 ಮತಗಳನ್ನು ಗಳಿಸಿದರೆ, ಸಿಪಿಎಂ, ಸಿಪಿಐಎಂಎಲ್ ಮತ್ತು ಎಲ್‌ಜೆಪಿ(ಆರ್‌ವಿ) ಪಕ್ಷಗಳ ಮತ ಹಂಚಿಕೆ ತಲಾ ಶೇ.0.01ರಷ್ಟಿವೆ ಎಂದೂ ಆಯೋಗ ತಿಳಿಸಿದೆ. ವಿಶೇಷವೆಂದರೆ, ಎಐಎಫ್ಬಿ, ಐಯುಎಂಎಲ್ ಮತ್ತು ಎಲ್‌ಜೆಪಿ ಪಕ್ಷಗಳು ಒಂದೇ ಒಂದು ಮತ ಗಳಿಸುವಲ್ಲೂ ಸೋತಿದ್ದು, ಇವುಗಳು ಮತ ಹಂಚಿಕೆಯಲ್ಲಿ ಶೂನ್ಯ ಸಾಧನೆ ಮಾಡಿವೆ.
Related Articles
ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾಗಿರುವ ವಾರಾಣಸಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. 2017ರಂತೆಯೇ ಈ ಬಾರಿಯ ಚುನಾವಣೆಯಲ್ಲೂ ವಾರಾಣಸಿಯ ಎಲ್ಲ 8 ಕ್ಷೇತ್ರಗಳಲ್ಲೂ ಕಮಲ ಪಕ್ಷವು ಭರ್ಜರಿ ಜಯ ಗಳಿಸಿದೆ. 7 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೆ, 1 ಕ್ಷೇತ್ರದಲ್ಲಿ ಮಿತ್ರಪಕ್ಷ ಅಪ್ನಾ ದಳ ಗೆಲುವು ಸಾಧಿಸಿದೆ. ವಾರಾಣಸಿಯ ಎಲ್ಲ ಕ್ಷೇತ್ರಗಳನ್ನು ಗೆಲ್ಲುವುದು ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿತ್ತು. ಕಳೆದ ವರ್ಷವಷ್ಟೇ ಮೋದಿ ಅವರು ಇಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಲೋಕಾರ್ಪಣೆ ಮಾಡಿದ್ದರು. ಸ್ಥಳೀಯ ಶಾಸಕರ ವಿರುದ್ಧ ಆಡಳಿತ ವಿರೋಧಿ ಅಲೆಯಿದ್ದ ಕಾರಣ ಬಿಜೆಪಿ ಯ ಗೆಲುವು ಸುಲಭವಾಗಿರಲಿಲ್ಲ. ಆದರೆ, ಮೋದಿ ಅವರ ನಿರಂತರ ಪ್ರಚಾರ ರ್ಯಾಲಿ, ರೋಡ್‌ಶೋಗಳು ಕೊನೆಯ ಹಂತದಲ್ಲಿ ಪಕ್ಷದ ಪರ ಗಾಳಿ ಬೀಸಲು ಕಾರಣವಾಯಿತು.
Advertisement
ಲಖೀಂಪುರದಲ್ಲೂ ಬಿಜೆಪಿಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಅತಿ ಹೆಚ್ಚು ಸುದ್ದಿಯಾದ ಜಿಲ್ಲೆ ಲಖೀಂಪುರ ಖೇರಿ. ಕೇಂದ್ರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಯ ಹೋರಾಟದ ರ್ಯಾಲಿ ನಡೆಯುತ್ತಿದ್ದಾಗ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಅವರು ರೈತರ ಮೇಲೆಯೇ ಜೀಪು ಹರಿಸಿ, 8 ಮಂದಿಯ ಸಾವಿಗೆ ಕಾರಣರಾಗಿದ್ದರು ಎಂಬ ಆರೋಪವಿದೆ. ಈ ಘಟನೆಯು ಬಿಜೆಪಿ ವಿರುದ್ಧ ರೈತರ ಆಕ್ರೋಶ ಭುಗಿಲೇಳುವಂತೆ ಮಾಡಿದ್ದು, ಲಖೀಂಪುರ ಜಿಲ್ಲೆಯಲ್ಲಿ ಪಕ್ಷಕ್ಕೆ ಭಾರೀ ಹಿನ್ನಡೆ ಉಂಟುಮಾಡಬಹುದು ಎಂದು ಊಹಿಸಲಾಗಿತ್ತು. ಆದರೆ, ಆಶ್ಚರ್ಯವೆಂಬಂತೆ ಲಖೀಂಪುರದಲ್ಲಿರುವ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಪಾಲಿಯಾ, ನಿಘಸನ್, ಘೋಲಾ ನಿಘಸನ್, ಶ್ರೀನಗರ, ಧೌರ್ಹರಾ, ಲಖೀಂಪುರ, ಕಾಸ್ತಾ ಮತ್ತು ಮೊಹಮ್ಮದಿ ಕ್ಷೇತ್ರಗಳಲ್ಲಿ ಸಮಾಜವಾದಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬಿಜೆಪಿ ಅಭ್ಯರ್ಥಿಗಳು ಮಣಿಸಿದ್ದಾರೆ. ಸರಕಾರಿ ಕೆಲಸ ಬಿಟ್ಟು ಸ್ಪರ್ಧೆ ಗೆದ್ದರು!
ಉತ್ತರ ಪ್ರದೇಶದ ಚುನಾವಣೆಯಲ್ಲಿ ಸ್ಪರ್ಧಿಸಲೆಂದು ಪೊಲೀಸ್ ಕೆಲಸ ಮತ್ತು ಜಾರಿ ನಿರ್ದೇಶನಾಲಯದ ಕೆಲಸವನ್ನು ಬಿಟ್ಟು, ಬಿಜೆಪಿ ಸೇರಿದ್ದ ಇಬ್ಬರೂ ನಾಯಕರು ಗೆಲುವಿನ ನಗೆ ಬೀರಿದ್ದಾರೆ. ಪೊಲೀಸ್ ಅಧಿಕಾರಿಯಾಗಿದ್ದ ಆಸಿಮ್ ಅರುಣ್ ಕನೌ°ಜ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಜಾರಿ ನಿರ್ದೇಶನಾಲಯದಲ್ಲಿ ಅಧಿಕಾರಿಯಾಗಿದ್ದ ರಾಜೇಶ್ವರ ಸಿಂಗ್ ಅವರು ಸರೋಜಿನಿ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ, ಸಮಾಜವಾದಿ ಪಕ್ಷದ ಅನಿಲ್ ದೊಹರೆ ಅವರನ್ನು ಸೋಲಿಸಿದ್ದಾರೆ. ಆಸಿಮ್ ಅರುಣ್ ಅವರು 1994ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ರಾಜೇಶ್ವರ್ ಸಿಂಗ್ ಅವರು 1996ನೇ ಪ್ರಾಂತೀಯ ಪೊಲೀಸ್ ಪಡೆ (ಪಿಪಿಎಸ್)ಯೊಂದಿಗೆ ವೃತ್ತಿ ಆರಂಭಿಸಿದವರಾಗಿದ್ದಾರೆ. ಮತಗಟ್ಟೆ ಸಮೀಕ್ಷೆಗೆ ಜಯ
ಉತ್ತರಪ್ರದೇಶದ ಏಳು ಹಂತದ ಚುನಾವಣೆ ಮುಗಿಯುತ್ತಿದ್ದಂತೆಯೇ ಎಲ್ಲ ಸಂಸ್ಥೆಗಳು ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಯ ವರದಿಯನ್ನು ಪ್ರಕಟಿಸಿದ್ದವು. ಬಹುತೇಕ ಎಲ್ಲ ಸಮೀಕ್ಷೆಗಳ ಅಂಕಿ ಅಂಶ ನಿಜವಾಗಿದ್ದು, ಸಮೀಕ್ಷೆಗಳು ಜಯ ಗಳಿಸಿದಂತಾಗಿದೆ. ಅತಿ ಹತ್ತಿರದ ವರದಿ ಕೊಟ್ಟಿರುವ ಜೀ ನ್ಯೂಸ್, ತನ್ನ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಗೆ 245-267 ಸ್ಥಾನ ಸಿಗಲಿದೆ ಎಂದಿತ್ತು. ಅದರಂತೆಯೇ ಬಿಜೆಪಿಯು 260ಕ್ಕೂ ಅಧಿಕ ಸ್ಥಾನ ಗೆದ್ದಿದೆ. ಹಾಗೆಯೇ ವರದಿಯಲ್ಲಿ ಸಮಾಜವಾದಿ ಪಕ್ಷವು 125-148 ಗೆಲ್ಲಲಿದೆ ಎಂದಿದ್ದು, ಅದೂ ಕೂಡ ಫಲಿತಾಂಶದಲ್ಲಿ ಸತ್ಯವಾಗಿದೆ. ಈವರೆಗೆ ಆಡಳಿತದಲ್ಲಿದ್ದ ಕಾಂಗ್ರೆಸ್ 3-7 ಸ್ಥಾನಗಳಿಗೆ ತೃಪ್ತಿ ಪಡಬೇಕಾಗುತ್ತದೆ ಎಂದು ಅಂದಾಜಿಸಲಾಗಿದ್ದು, ಅದೂ ಸತ್ಯವಾಗಿದೆ. ಬಿಎಸ್ಪಿ 5-9 ಸ್ಥಾನ ಗೆಲ್ಲುತ್ತದೆ ಎಂದು ಅಂದಾಜಿಸಲಾಗಿತ್ತಾದರೂ ಫಲಿತಾಂಶದಲ್ಲಿ ಬಿಎಸ್ಪಿ ಕೇವಲ 1 ಸ್ಥಾನವನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಉಳಿದಂತೆ ಬಹುತೇಕ ಎಲ್ಲ ಸಮೀಕ್ಷೆಗಳ ಆಸುಪಾಸಿನಲ್ಲೇ ಫಲಿತಾಂಶ ಕಂಡುಬಂದಿದೆ. ಎಲ್ಲ ಸಮೀಕ್ಷೆಗಳು ಬಿಜೆಪಿ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಸ್ಥಾನಗಳನ್ನು ಅಂದಾಜಿಸುವಲ್ಲಿ ಯಶಸ್ವಿಯಾಗಿವೆಯಾದರೂ ಬಿಎಸ್ಪಿ ಬಗ್ಗೆ ಹೆಚ್ಚಿನ ನಿರೀಕ್ಷೆಯಿಟ್ಟುಕೊಂಡು ಸೋತಿವೆ.