ಬೀದರ: ಕರ್ನಾಟಕವನ್ನು ದೇಶದ ನಂಬರ್ ಒನ್ ರಾಜ್ಯವನ್ನಾಗಿ ಮಾಡುವ ಕನಸು ಹೊಂದಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ಭ್ರಷ್ಟ ಆಡಳಿತ ನಡೆಸಿದ ಬಿಜೆಪಿ ಸರ್ಕಾರವೇ ಅವರ ಕನಸನ್ನು ನುಚ್ಚುನೂರು ಮಾಡಿದೆ. ಅಂತರ್ಯಾಮಿ, ಐತ್ತಾರು ಇಂಚಿನ ಎದೆಯುಳ್ಳ ಮೋದಿ ಲೂಟಿ ತಡೆಯದೆ ಕಣ್ಣು ಮುಚ್ಚಿ ಕನಸು ಕಾಣುತ್ತಿದ್ದರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವ್ಯಂಗ್ಯವಾಡಿದರು.
ಬೀದರ ದಕ್ಷಿಣ ಕ್ಷೇತ್ರದ ಬಗದಲ್ ಗ್ರಾಮದ ಬಳಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಪ್ರಧಾನಿಯಿಂದ ಹಿಡಿದು ಶಾಸಕರವರೆಗೆ ಎಲ್ಲರಿಗೂ ಅಧಿಕಾರವೇ ಮುಖ್ಯ. ಅವರಿಗೆ ಬಡ ಜನರ ಕಾಳಜಿ ಬೇಕಾಗಿಲ್ಲ, ಎಂಥದ್ದೇ ಪರಿಸ್ಥಿತಿಯಲ್ಲೂ ಅಧಿಕಾರ ಬೇಕೆನ್ನುವ ಆಲೋಚನೆಯಲ್ಲಿದ್ದಾರೆ.
ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಎಲ್ಲರೂ ಎಚ್ಚರಿಕೆ ವಹಿಸಬೇಕಾದ ಸಮಯ ಬಂದಿದೆ. ಮತ್ತೆ ಜನರ ಹಣ ಕೊಳ್ಳೆ ಹೊಡೆಯದಂತೆ ನೋಡಿಕೊಳ್ಳಬೇಕಾಗಿದೆ. ಜನರ ಮುಂದೆ ತಲೆ ಬಾಗುವ ಸರ್ಕಾರ ಅಧಿಕಾರಕ್ಕೆ ಬರಬೇಕಿದೆ. ನಾನು ಮತ ಕೇಳು ಬಂದಿಲ್ಲ, ಭ್ರಷ್ಟರ ವಿರುದ್ದ ಎಚ್ಚರಿಕೆ ಕೊಡಲು ಬಂದಿದ್ದೇನೆ. ನಿಮ್ಮ ಪ್ರದೇಶ ಅಭಿವೃದ್ಧಿಗಾಗಿ ಎಲ್ಲ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಬಹುಮತದ ಸರ್ಕಾರವನ್ನು ಅಸ್ತಿತ್ವಕ್ಕೆ ತರಬೇಕು ಎಂದು ಮನವಿ ಮಾಡಿದರು.
ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ನ್ಯಾಯಯುತವಾಗಿ ಬಿಜೆಪಿ ಅಧಿಕಾರ ಹಿಡಿಯಲಿಲ್ಲ. ಹಣದಿಂದ ಶಾಸಕರನ್ನು ಖರೀದಿಸಿ, ವಾಮ ಮಾರ್ಗದಿಂದ ಸರ್ಕಾರ ರಚಿಸಲಾಯಿತು. ಇದು 40 ಪರ್ಸೆಂಟ್ ಸರ್ಕಾರವಾಗಿದೆ. ನಾಚಿಕೆ ಬಿಟ್ಟು ರಾಜ್ಯವನ್ನು ಲೂಟಿ ಮಾಡಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು 1.5 ಲಕ್ಷ ಕೋಟಿ ರೂ. ಜನರ ಸಂಪತ್ತನ್ನು ಲೂಟಿ ಮಾಡಲಾಗಿದೆ. ಒಂದೊಮ್ಮೆ ಇದು ತಡೆದಿದ್ದರೆ 3೦ ಸಾವಿರ ಸ್ಮಾರ್ಟ್ ಕ್ಲಾಸ್ ರೂಂ, ಸಾವಿರಾರು ಕಿ.ಮೀ ಹೈವೆ ಮತ್ತು 30 ಲಕ್ಷದಷ್ಟು ಆಶ್ರಯ ಮನೆಗಳನ್ನು ಕಟ್ಟಿಸಬಹುದಾಗಿತ್ತು ಎಂದು ಅಭಿಪ್ರಾಯಪಟ್ಟ ಪ್ರಿಯಂಕಾ, ಇಂದು ಭ್ರಷ್ಟಾಚಾರದಿಂದಾಗಿ ಬೆಂಗಳೂರಿನ ಐಟಿ-ಬಿಡಿ ಕಂಪನಿಗಳು ಸಹ ಬೇರೆ ನಗರಗಳಿಗೆ ಸ್ಥಳಾಂತರಗೊಳ್ಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲು ಲೂಟಿ ತಡೆದು ಅಭಿವೃದ್ಧಿ ಶುರುವಾಗಲಿದೆ. ರಾಜ್ಯದಲ್ಲಿ ಖಾಲಿ ಇರುವ 2.50 ಲಕ್ಷ ಹುದ್ದೆಗಳನ್ನು ಒಂದು ವರ್ಷದಲ್ಲೇ ನೇಮಕ ಮಾಡಲು ಕ್ರಮ ವಹಿಸಲಾಗುವುದು. ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯಡಿ ಖಾತೆಗೆ 2 ಸಾವಿರ ರೂ., ಪ್ರತಿ ಮನೆಗೆ200 ಯುನಿಟ್ ಉಚಿತವಾಗಿ ದೊರೆಯಲಿದೆ. ಯುವ ನಿಧಿ ಅಡಿ ನಿರುದ್ಯೋಗ ಭತ್ಯೆ, ಮಹಿಳೆಯರಿಗೆ ಉಚಿತ ಬಸ್ ಪಾಸ್ ಕಲ್ಪಿಸಲಾಗುವುದು. ‘ನಂದಿನಿ’ ಬಲ ಪಡಿಸಿ, ಉದ್ಯೋಗ ಸೃಷ್ಟಿಗೆ ಸಣ್ಣ ಪುಟ್ಟ ವ್ಯಾಪಾರಿಗಳ ಬಲ ವರ್ಧನೆಗೆ ಸರ್ಕಾರ ನೆರವಾಗಲಿದೆ. ಕರ್ನಾಟಕದಲ್ಲಿ ಆಟೊಮೊಬೈಲ್, ಎಲೆಕ್ಟ್ರಿಕಲ್ ಉಪಕರಣಗಳ ತಯಾರಿಕೆ ಘಟಕ ಸ್ಥಾಪನೆ, ಬೀದರನಿಂದ ಚಾಮರಾಜನಗರವರೆಗೆ ಇಂಡಸ್ಟ್ರಿಯಲ್ ಕಾರಿಕಾಡರ್, ಕೈಗಾರಿಕೆ ಹಬ್ ಸ್ಥಾಪನೆಗೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳನ್ನು ಜಾರಿಗೆ ತರಲಿದೆ. ಈಗಾಗಲೇ ರಾಜಸ್ಥಾನ ಮತ್ತು ಛತ್ತಿಘಡದಲ್ಲಿ ಅಲ್ಲಿನ ಕಾಂಗ್ರೆಸ್ ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸಿದೆ. ಯಾವ ಸರ್ಕಾರ ಜನರ ಹಿತದಲ್ಲಿ ಕೆಲಸ ಮಾಡುತ್ತಿದೆ ಎಂಬುದನ್ನು ನಾಡಿನ ಮತದಾರರು ಅವಲೋಕನ ಮಾಡಿ ಹೆಜ್ಜೆಯನ್ನಿಡಬೇಕಿದೆ ಎಂದು ಕರೆ ನೀಡಿದರು.
ಸಮಾವೇಶದಲ್ಲಿ ಎಐಸಿಸಿ ಪ್ರಮುಖ ಶ್ರೀಧರ ಬಾಬು, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹ್ಮದ್, ಅಭ್ಯರ್ಥಿಗಳಾದ ಅಶೋಕ ಖೇಣಿ, ರಾಜಶೇಖರ ಪಾಟೀಲ, ಈಶ್ವರ ಖಂಡ್ರೆ, ಎಂಎಲ್‌ಸಿ ಅರವಿಂದಕುಮಾರ ಅರಳಿ, ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮೀನಾಕ್ಷಿ ಸಂಗ್ರಾಮ್, ಗೀತಾ ಚಿದ್ರಿ, ದತ್ತು ಮೂಲಗೆ ಮತ್ತಿತರರು ಪಾಲ್ಗೊಂಡಿದ್ದರು.
ರಾಜ್ಯದಲ್ಲಿ ನಂದಿನಿ ಜತೆಗೆ ಅಮೂಲ ಜೋಡಿಸಿ ರಾಜ್ಯದ ಸಂಪತ್ತನ್‌ನು ಲೂಟಿ ಹೊಡೆಯುವ ಷಡ್ಯಂತ್ರವಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಹಾಲಿನ ಸಂಗ್ರಹ ಹೆಚ್ಚಾಗಿ, ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯದಡಿ ಮಕ್ಕಳಿಗೆ ಉಚಿತ ಹಾಲು ಕೊಡಲಾಗುತ್ತಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಏಕಾಏಕಿ ಹಾಲು ಉತ್ಪಾದನೆ ಇಳಿಕೆಯಾಗಿದೆ, ನಂದಿನಿ ನಡೆಯುತ್ತಿಲ್ಲ ಎನ್ನುತ್ತಿದ್ದಾರೆ. ಇದು ಕನ್ನಡಿಗರಿಗೆ ಅಮೂಲ ಹಾಲು ಕೊಡುವ ಹುನ್ನಾರ ಆಗಿದೆ.
– ಪ್ರಿಯಂಕಾ ಗಾಂಧಿ, ಕಾಂಗ್ರೆಸ್ ನಾಯಕಿ.