ಬೆಂಗಳೂರು: ಕನ್ನಡಿಗರ ಸಮಸ್ಯೆ ಹಾಗೂ ಪ್ರಶ್ನೆಗಳ ಬಗ್ಗೆ ರಾಜ್ಯದಿಂದ ಆಯ್ಕೆಯಾಗಿರುವ 25 ಮಂದಿ ಬಿಜೆಪಿ ಸಂಸದರು ಧ್ವನಿ ಎತ್ತುವ ಧೈರ್ಯ ತೋರುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
66ನೇ ಕನ್ನಡ ರಾಜ್ಯೋತ್ಸವದ ಅಂಗವವಾಗಿ ನಾಡಿನ ಜನತೆಗೆ ಶುಭಾಷಯ ಕೋರಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಡಿ.ಕೆ.ಶಿವಕುಮಾರ್, ಇಂಗ್ಲಿಷ್, ಹಿಂದಿ ಬಾರದ ಕನ್ನಡಿಗರು ಬ್ಯಾಂಕುಗಳಲ್ಲಿ ವ್ಯವಹರಿಸಲು ಕಷ್ಟವಾಗಿದೆ. ಹಣ ಡ್ರಾ ಮಾಡುವುದೂ ಸೇರಿ ಎಲ್ಲ ಫಾರ್ಮ್ ಗಳು ಇಂಗ್ಲಿಷ್ ಅಥವಾ ಹಿಂದಿಯಲ್ಲಿರುವುದು ಇದಕ್ಕೆ ಕಾರಣ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಡಬಲ್ ಇಂಜಿನ್ ಬಿಜೆಪಿ ಸರ್ಕಾರದಲ್ಲಿ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಸಿಗಬೇಕಾದ ಪ್ರಾತಿನಿಧ್ಯ, ಅವಕಾಶಗಳು ಸಿಗುತ್ತಿಲ್ಲ. ಈ ಬಗ್ಗೆ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ 25 ಸಂಸದರು ಸಂಸತ್ತಿನಲ್ಲಿ ಧ್ವನಿ ಎತ್ತುವ ಧೈರ್ಯ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯುಪಿಎಸ್ಸಿ, ಬ್ಯಾಂಕಿಂಗ್ ಸೇರಿ ಕೇಂದ್ರ ಸರ್ಕಾರದ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವ ಅವಕಾಶ ಸಿಗಬೇಕಾಗಿದೆ. ಕರ್ನಾಟಕವು ಒಕ್ಕೂಟ ವ್ಯವಸ್ಥೆಯ ಭಾಗವಾಗಿದೆ. ಕನ್ನಡ ಭಾಷೆಯಲ್ಲಿ ಎಲ್ಲ ಹಂತದ ಯುಪಿಎಸ್ಸಿ, ಬ್ಯಾಂಕಿಂಗ್ ಸೇರಿ ಕೇಂದ್ರ ಸರ್ಕಾರದ ಪರೀಕ್ಷೆಗಳನ್ನು ಬರೆಯಲು ಅವಕಾಶ ಸಿಗಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ:ರಾಜ್ಯೋತ್ಸವ ಪ್ರಶಸ್ತಿ ಮೊತ್ತ 1 ಲಕ್ಷದಿಂದ 5 ಲಕ್ಷಕ್ಕೆ : ಸಿಎಂ ಘೋಷಣೆ
ನಾಡಿನ ಜ್ವಲಂತ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಜನಾಭಿಪ್ರಾಯ ಕ್ರೋಢೀಕರಣದ ಮೂಲಕ ಆಳುವ ಬಿಜೆಪಿ ಸರ್ಕಾರವನ್ನು ಎಚ್ಚರಿಸುವ ಭಾಗವಾಗಿ ಅವರು ಕನ್ನಡಿಗರ ಸ್ವಾಭಿಮಾನ ಹಾಗೂ ಹಿತರಕ್ಷಣೆಯನ್ನು ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಐಎಎಸ್, ಐಪಿಎಸ್ ಮತ್ತಿತರ ನಾಗರಿಕ ಸೇವಾ ಪರೀಕ್ಷೆಗಳು, ಬ್ಯಾಂಕಿಂಗ್, ರೈಲ್ವೆ ಮತ್ತಿತರ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ಎಲ್ಲ ಹಂತದಲ್ಲಿ ಕನ್ನಡ ಭಾಷೆಯಲ್ಲಿ ಬರೆದು ಪ್ರತಿಭೆಗೆ ತಕ್ಕಂತೆ ಅವಕಾಶಗಳು ಕನ್ನಡದ ಯುವಜನರಿಗೂ ಸಿಗಬೇಕು. ಇದು ಕನ್ನಡಿಗರ ರಾಜ್ಯಾಂಗ ಬದ್ದವಾದ ಹಕ್ಕು ಕೂಡ ಆಗಿದೆ ಎಂದು ಹೇಳಿದ್ದಾರೆ.