ಚಿತ್ತಾಪುರ: ಲೋಕಸಭೆ ಚುನಾವಣೆ ಸಮೀಪಿಸಿದಾಗ ನಿಮಗೆ ರೈತರು ನೆನಪಾದರೇ? ಹಿಂದಿನ ನಾಲ್ಕುವರೇ ವರ್ಷ ಯಾಕೆ ನೆನಪಾಗಿಲ್ಲ. ನಿಮ್ಮ ಸುಳ್ಳಿನ ಆಟ ನಡೆಯಲ್ಲ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಸಾತನೂರ ಗ್ರಾಮದಲ್ಲಿ ಡಾ| ಬಾಬು ಜಗಜೀವನರಾಮ ಭವನ, ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
1972ರಕ್ಕಿಂತಲೂ ಕರ್ನಾಟಕದಲ್ಲಿ ಭೀಕರ ಬರಗಾಲ ಎದುರಾಗಿದೆ. ಕೂಡಲೇ ಕೇಂದ್ರ ಸರ್ಕಾರ ರಾಜ್ಯಕ್ಕೆ 4500 ಕೋಟಿ ರೂ. ನೀಡಿ ರೈತರ ಸಹಾಯಕ್ಕೆ ಬರಬೇಕೆಂದು ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ 900 ಕೋಟಿ ರೂ. ನೀಡಿದ್ದಿರಿ. ಆದರೆ ಮಹಾರಾಷ್ಟ್ರದಲ್ಲಿ ತಮ್ಮದೇ ಬಿಜೆಪಿ ಸರ್ಕಾರ ಇದೆ. ಅದಕ್ಕಾಗಿ ಅಲ್ಲಿ ಮಾತ್ರ 4500 ಕೋಟಿ ರೂ. ನೀಡಿದ್ದು ನ್ಯಾಯಾನಾ? ನಮ್ಮ ರಾಜ್ಯಕ್ಕೆ ಮಲತಾಯಿ ಧೋರಣೆ ತಾಳಿದ್ದೀರಿ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಇಎಸ್‌ಐ ಆಸ್ಪತ್ರೆ ತಂದರು. ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ ಎಂದು ಕೇಂದ್ರೀಯ ವಿಶ್ವವಿದ್ಯಾಲಯ ತಂದರು. ಆದರೆ ಇಲ್ಲಿ ಉತ್ತಮ ಚಿಕಿತ್ಸೆ, ಗುಣಮಟ್ಟದ ಶಿಕ್ಷಣ ಸಿಗಲಿ ಎನ್ನುವುದನ್ನು ಬಿಟ್ಟು ರಾಜಕೀಯ ಮಾಡುತ್ತಿರುವುದು ನಿಮ್ಮ ಸಾಧನೆಯೇ? ಇದೀಗ ತಾನೇ ಬಜೆಟ್ ಮಂಡನೆ ಮಾಡಿದ್ದಿರಿ. ಅದರಲ್ಲಿ ಪ್ರತಿಯೊಬ್ಬ ರೈತರ ಖಾತೆಗೆ 3 ಹಂತವಾಗಿ 2 ಸಾವಿರ ರೂ. ಹಾಕಲಾಗುವುದು ಎಂದು ಹೇಳುತ್ತಿರಲ್ಲ. ಚುನಾವಣೆ ಸಮೀಪವಾದ ಮೇಲೆ ನಿಮಗೆ ರೈತರು ನೆನಪಾದರೇ? ಹಿಂದಿನ ನಾಲ್ಕುವರೇ ವರ್ಷ ಯಾಕೆ ನೆನಪಾಗಿಲ್ಲ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಬೇಕು ಎಂದು ಪಣ ತೋಡುತ್ತಿದ್ದಾರೆ. ಆದರೆ ಬಿಜೆಪಿ ಯಾರನ್ನೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರೂ ಖರ್ಗೆ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಜಿಪಂ ಸದಸ್ಯರಾದ ಶಿವರುದ್ರ ಭೀಣಿ, ಶಿವಾನಂದ ಪಾಟೀಲ, ತಾಪಂ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಸಾಬಣ್ಣ ವೈ. ಕಾಶಿ, ಪುರಸಭೆ ಸದಸ್ಯರಾದ ಚಂದ್ರಶೇಖರ ಕಾಶಿ, ಪಾಶಾಮಿಯ್ನಾ ಖುರೇಶಿ ಮತ್ತಿತರರಿದ್ದರು.