ಶಿವಮೊಗ್ಗ: ರಾಮನ ಹೆಸರಲ್ಲಿ ರಾಜಕೀಯ ಮಾಡುವಂತಹ ಅವಶ್ಯಕತೆ ಬಿಜೆಪಿಗೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಎಂದು ಬಿಜೆಪಿ ಹೋರಾಟ ಮಾಡಿತ್ತು. ಪ್ರಧಾನ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಮಮಂದಿರ ನಿರ್ಮಾಣ ಆಗಿರುವುದು ಖುಷಿ ತಂದಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಮನ ಬಗ್ಗೆ ನಂಬಿಕೆ ಬಂದಿರುವುದು ಖುಷಿಯ ವಿಚಾರ. ಅವರು ರಾಮಮಂದಿರಕ್ಕೆ 22ಕ್ಕೆ ಆದರೂ ಹೋಗಲಿ, ಆಮೇಲೆ ಬೇಕಾದರೆ ಹೋಗಲಿ. ರಾಮನ ಬಗ್ಗೆ ನಂಬಿಕೆ ಇಡೋಕೆ ಕಾಂಗ್ರೆಸ್ ಮುಂದಾಗಿರುವುದು ಸಂತೋಷದ ವಿಚಾರ ಎಂದರು.
ಸಚಿವ ಆರ್.ಬಿ.ತಿಮ್ಮಾಪುರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಂಸ್ಕೃತಿ, ಆಚಾರ- ವಿಚಾರ ಹೊಂದಿರುವ ದೇಶ ನಮ್ಮದು. ಕೋಟ್ಯಂತರ ದೇವತೆಗಳನ್ನು ನಾವು ಪೂಜೆ ಮಾಡುತ್ತೆವೆ. ರಾಮನ ಬಗ್ಗೆ ಹಿಂದೂಗಳಿಗೆ ಭಕ್ತಿಯ ಭಾವನೆ ಇದೆ. ಉಡಾಫೆ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರು ಗೊಂದಲದಲ್ಲಿದ್ದಾರೆ. ಪಂಚರಾಜ್ಯದ ಫಲಿತಾಂಶದ ನಂತರ ಕಾಂಗ್ರೆಸ್ ನಾಯಕರು ಗೊಂದಲದಲ್ಲಿದ್ದಾರೆ. ಅವರ ಮಾತಿಗೆ ಬೆಲೆ ಕೊಡುವ ಅವಶ್ಯಕತೆ ಇಲ್ಲ ಎಂದರು.
ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಬಿಜೆಪಿ ಬಗ್ಗೆ ಹಿಂದೂಗಳು ನಂಬಿಕೆ ಇಟ್ಟುಕೊಂಡಿದ್ದಾರೆ. ಪ್ರತಿಯೊಬ್ಬ ಭಾರತೀಯ ಕೂಡ ಮೋದಿಯನ್ನ ನಂಬಿದ್ದಾನೆ. ದೇಶದಲ್ಲಿ ಎಲ್ಲರಿಗೂ ಗೌರವ ಸಿಗುತ್ತಿದೆ. ಬಿಜೆಪಿಯಿಂದ ಹಿಂದೂಗಳಿಗೆ ಮಾತ್ರ ಅಲ್ಲ , ಎಲ್ಲ ಧರ್ಮದ ಜನರಿಗೆ ನ್ಯಾಯ ಕೊಡುವ ಕೆಲಸ ಆಗುತ್ತಿದೆ ಎಂದರು.
ಕಾಂಗ್ರೆಸ್‌ನ ಗ್ಯಾರಂಟಿ ಜನರಿಗೆ ತಲುಪಿದ್ಯಾ? ಎಂದು ಪ್ರಶ್ನಿಸಿದ ಅವರು ಒಂದು ಲಕ್ಷ ಜನರಲ್ಲಿ ಒಂದು ಸಾವಿರ ಜನರಿಗೆ ತಲುಪಿದೆ ಅಷ್ಟೇ. ಜಾಹೀರಾತು ಕೊಟ್ಟು ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ. ಹಳ್ಳಿಗಳಲ್ಲಿ ಬಸ್ ಸಮಸ್ಯೆ ಇದೆ. ಒಂದು ಕ್ಷೇತ್ರದಲ್ಲೂ ಅಭಿವೃದ್ಧಿಯಾಗಿಲ್ಲ. ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆ ಇದೆ. ಅಭಿವೃದ್ಧಿ ಶೂನ್ಯ ಆಗಿದೆ. ರೈತರಿಗೆ ಪರಿಹಾರ ಕೋಡೋಕೂ ಹಣ ಇಲ್ಲ. ಅಭಿವೃದ್ಧಿ ಶೂನ್ಯ ಸರ್ಕಾರ ಅಂದ್ರೆ ಕರ್ನಾಟಕ ಸರ್ಕಾರ ಎಂದು ಟೀಕಿಸಿದರು.