Advertisement

ಪುಟಗೋಸಿ ಪ್ರಿಯಾಂಕಾ ಗಾಂಧಿಗೆ ಬಿಜೆಪಿ ಹೆದರಲ್ಲ: ಈಶ್ವರಪ್ಪ

11:05 AM Jan 28, 2019 | |

ಬಸವನಬಾಗೇವಾಡಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿಜವಾಗಿಯೂ ಹಿಂದುಳಿದ ವರ್ಗದ ನಾಯಕರಾಗಿದ್ದರೆ ಸಮ್ಮಿಶ್ರ ಸರಕಾರದ ಮೇಲೆ ಒತ್ತಡ ಹೇರಿ ಕಾಂತರಾಜ್‌ ಅವರ ಜಾತಿ, ಜನಗಣತಿ ವರದಿ ಬಹಿರಂಗಪಡಿಸಲಿ ಎಂದು ಮಾಜಿ ಸಚಿವ ಬಿಜೆಪಿ ಹಿರಿಯ ಮುಖಂಡ ಕೆ. ಈಶ್ವರಪ್ಪ ಹೇಳಿದರು.

Advertisement

ರವಿವಾರ ಪಟ್ಟಣದ ಯಲ್ಲಾಲಿಂಗ ಮಠದಲ್ಲಿ ನಡೆದ ಹಿಂದುಳಿದ ಮೋರ್ಚಾ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ನಾನೇ ಒಬ್ಬ ಸತ್ಯ ಹರಿಶ್ಚಂದ್ರ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇವರೊಬ್ಬರು ಮಹಾ ಮೋಸಗಾರ ಮತ್ತು ಸುಳ್ಳುಗಾರ. ಇವರಿಗೆ ಹಿಂದುಳಿದ ವರ್ಗದ ಜನರ ಮೇಲೆ ಪ್ರೀತಿ ವಿಶ್ವಾಸವಿದ್ದರೆ ಅವರ ಹಿಂದಿನ ಸರಕಾರದಲ್ಲಿ ಜಾತಿ, ಜನ ಗಣತಿ ಮಾಡುತ್ತೇನೆ ಎಂದು ಸರಕಾರದ 120 ಕೋಟಿ ಹಣವನ್ನು ಹಾಳು ಮಾಡಿದ್ದಾರೆ ಎಂದರು.

ಸಿದ್ದರಾಮಯ್ಯನವರಿಗೆ ಜಾತಿ ಜಾತಿ ಮಧ್ಯ, ಧರ್ಮ ಧರ್ಮಗಳ ಮಧ್ಯ ಜಗಳ ಹಚ್ಚುವುದೆ ನಿತ್ಯ ಕಾಯಕವಾಗಿದೆ. ಈ ಹಿಂದೆ ವೀರಶೈವ ಮತ್ತು ಲಿಂಗಾಯತರು ಒಂದಾಗಿದ್ದರು. ಅವರ ಮಧ್ಯ ಜಗಳ ಹಚ್ಚಿದವರು ಯಾರು? ಸುಮ್ಮ ಸುಮ್ಮನೆ ಬಿಜೆಪಿ ಮೇಲೆ ಕೋಮುವಾದಿ ಜಾತಿವಾದಿ ಎಂದು ಹೇಳುತ್ತಾರೆ.

ರಾಜ್ಯದಲ್ಲಿ ಗುಂಡಾಗಳು ಸೇರಿ ಸರಕಾರ ರಚಿಸಿದ್ದಾರೆ. ಇತ್ತೀಚೆಗೆ ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ ಶಾಸಕರಿಂದ ಕಾಂಗ್ರೆಸ್‌ ಶಾಸಕನ ಮೇಲೆ ಕೊಲೆ ಕೇಸು ದಾಖಲಾಗಿದೆ. ಇನ್ನೂ ಮುಂದೆ ಯಾವೊಬ್ಬ ಕಾಂಗ್ರೆಸ್‌ ಶಾಸಕನು ಕೂಡಾ ರೆಸಾರ್ಟ್‌ನತ್ತ ಮುಖ ಮಾಡಿ ಮಲಗಲ್ಲ. ಏಕೆಂದರೆ ಕಾಂಗ್ರೆಸ್‌ ಶಾಸಕರು ಹೊರಗಡೆ ಹೊರಟರೆ ಅವರ ಪತ್ನಿಯರು ಎಲ್ಲಿಗೆ ಹೊರಟಿರಿ ಅಪ್ಪಿ ತಪ್ಪಿ ರೆಸಾರ್ಟ್‌ಗೆ ಹೋಗಿರಿ ಎಂದು ಪ್ರಶ್ನೆ ಮಾಡುವಂತ ಸ್ಥಿತಿ ಬಂದೊದಗಿದೆ ಕಾಂಗ್ರೆಸ್‌ ಪಕ್ಷಕ್ಕೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಿಯಾಂಕಾ ಗಾಂಧಿ ಲೋಕಸಭಾ ಚುನಾವಣೆ ಅಖಾಡಕ್ಕೆ ಇಳಿದ ಕ್ಷಣ ಬಿಜೆಪಿಗೆ ನಡಕು ಹುಟ್ಟಿದೆ ಎಂದು ಹೇಳಿತ್ತಾರೆ. ನೆಹರು, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಅಂತವರಿಗೆ ಅಂಜಿಲ್ಲ, ಇನ್ನೂ ನಿನ್ನೆ ಮೊನ್ನೆ ಕಣ್ಣು ಬಿಟ್ಟಿರುವ ಪುಟಗೋಸಿಗೆ ಹೇದರುತ್ತೇವಾ ಎಂದು ಪ್ರಶ್ನಿಸಿದ ಅವರು, ದೇಶದಲ್ಲಿ ಮತ್ತೆ ನರೇಂದ್ರ ಮೋದಿ ಸರಕಾರವೇ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.

Advertisement

ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಅಥವಾ ಸಮ್ಮಿಶ್ರ ಸರಕಾರದ ಸಚಿವರು ಬರ ವೀಕ್ಷಣೆಗೆ ಯಾವುದಾದರು ಜಿಲ್ಲೆಗೆ ಭೇಟಿ ಕೊಟ್ಟಿದ್ದಾರಾ ಅಥವಾ ಆಯಾ ಜಿಲ್ಲೆಯ ಮುಂಗಾರು, ಹಿಂಗಾರಿನ ಬೆಳೆಹಾನಿ ವರದಿ ಬಗ್ಗೆ ಸಮಗ್ರ ಮಾಹಿತಿಯನ್ನೂ ತೆಗೆದುಕೊಂಡಿಲ್ಲ. ಇನ್ನೂ ಇವರು ಕೇಂದ್ರಕ್ಕೆ ವರದಿ ಸಲ್ಲಿದ ಬಳಿಕ ಅವರು ಬರ ಪರಿಹಾರ ನೀಡುವದಾದರು ಯಾವಾಗ ಎಂಬ ಪ್ರಶ್ನೆ ಪ್ರತಿಯೊಬ್ಬರನ್ನು ಕಾಡುತ್ತಿದೆ ಎಂದು ಹೇಳಿದರು.

ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಶಾಸಕರಾದ ಎ.ಎಸ್‌. ಪಾಟೀಲ (ನಡಹಳ್ಳಿ), ಸೋಮನಗೌಡ ಪಾಟೀಲ, ಬಿಜೆಪಿ ಮುಖಂಡರಾದ ಸಂಗರಾಜ ದೇಸಾಯಿ, ರವಿಕಾಂತ ಬಗಲಿ, ವಿವೇಕ್‌ ಡಬ್ಬಿ, ಕೊಟ್ರೇಶ, ಕೆ.ಪುಟ್ಟಸ್ವಾಮಿ, ಸಾಬು ಮಾಶ್ಯಾಳ, ಶಿಲ್ಪಾ ಕುಂದಗೊಡ, ಬಿ.ಕೆ. ಕಲ್ಲೂರ, ಜಗದೀಶ ಕೊಟ್ರಶೆಟ್ಟಿ, ರವಿ ಪಟ್ಟಣಶೆಟ್ಟಿ, ಜಯಸಿಂಗ್‌ ನಾಯಕ, ಸಾವಿತ್ರಿ ಕಲ್ಯಾಣಶೆಟ್ಟಿ ಇದ್ದರು. ರಾಜು ಬಿರಾದಾರ ಸ್ವಾಗತಿಸಿದರು. ಶಿವಶಂಕರ ಬಡಿಗೇರ ನಿರೂಪಿಸಿದರು. ಮೌನೇಶ ಪತ್ತಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next