Advertisement

ಬಿಹಾರ ಚುನಾವಣೆ: ನಿತೀಶ್ ರಿಂದ ದೂರಸರಿಯುತ್ತಿದೆ ಎನ್ ಡಿಎ: ಏನಿದು ಬಿಜೆಪಿ ಲೆಕ್ಕಾಚಾರ?

12:27 PM Oct 27, 2020 | Nagendra Trasi |

ಪಾಟ್ನಾ: ಬಿಹಾರದ ಮೊದಲ ಸುತ್ತಿನ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಮತ್ತೊಂದೆಡೆ ಭಾರತೀಯ ಜನತಾ ಪಕ್ಷ ನಿತೀಶ್ ಕುಮಾರ್ ಅವರಿಂದ ದೂರವಾಗುತ್ತಿರುವ ಲಕ್ಷಣ ಗೋಚರಿಸತೊಡಗಿದೆ. ನಿತೀಶ್ ಕುಮಾರ್ ವಿರುದ್ಧ ಬಂಡಾಯ ಸಾರಿರುವ ಚಿರಾಗ್ ಪಾಸ್ವಾನ್ ಗೆ ಬಿಜೆಪಿ ಬೆಂಬಲಿಸುತ್ತಿದೆ. ಕಳೆದ ವಾರ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಚುನಾವಣಾ ಪ್ರಚಾರ ರಾಲಿಯಲ್ಲಿ ಎನ್ ಡಿಎ ಹೆಸರಿನಲ್ಲಿ ಮತ ಯಾಚಿಸಿದ್ದು ಹೊರತು ಪಡಿಸಿ ಭಾಷಣದ ಕೊನೆಯಲ್ಲಿ ನಿತೀಶ್ ಕುಮಾರ್ ಅವರ ಹೆಸರನ್ನು ಮಾತ್ರ ಪ್ರಸ್ತಾಪಿಸಿದ್ದರು.

Advertisement

ಬಿಹಾರ ವಿಧಾನಸಭಾ ಚುನಾವಣೆ ಮೂರು ಹಂತಗಳಲ್ಲಿ ನಡೆಯಲಿದೆ. ಅಕ್ಟೋಬರ್ 28ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ.

ಜೆಡಿಯು/ಬಿಜೆಪಿ ಹಾದಿ ಬೇರೆ, ಬೇರೆ!

ಕಳೆದ ವಾರದಲ್ಲಿ ಎರಡು ಮೈತ್ರಿಕೂಟದ ಪಕ್ಷಗಳು ಯಾವುದೇ ಪೈಪೋಟಿ ಇಲ್ಲದೆ ಸಮಾನಾಂತರವಾಗಿ ಚುನಾವಣಾ ಪ್ರಚಾರ ರಾಲಿ ನಡೆಸಿದ್ದವು. ಉಪಮುಖ್ಯಮಂತ್ರಿ ಸುಶೀಲ್ ಮೋದಿ ಮತ್ತು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೊರತುಪಡಿಸಿ, ಬಿಜೆಪಿಯ ಯಾವುದೇ ಪ್ರಮುಖ ನಾಯಕರು ನಿತೀಶ್ ಕುಮಾರ್ ಅಥವಾ ಅವರ ಜನತಾ ದಳ(ಸಂಯುಕ್ತ) ಸಮಾವೇಶಗಳಲ್ಲಿ ಭಾಗವಹಿಸಲಿಲ್ಲ ಎಂದು ವರದಿ ವಿಶ್ಲೇಷಿಸಿದೆ.

ಸುಶೀಲ್ ಮೋದಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಸಭೆಗೆ ಗೈರಾಗುತ್ತಿದ್ದು, ನಿತೀಶ್ ಕುಮಾರ್ ಮಾತ್ರ ಪಾಲ್ಗೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಬಿಜೆಪಿ ವಿಡಿಯೋ ಪ್ರಚಾರಾಂದೋಲನದಲ್ಲಿಯೂ ನಿತೀಶ್ ಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸುತ್ತಿಲ್ಲ. ಬಿಹಾರ ರಾಜ್ಯಾದ್ಯಂತ ರಾರಾಜಿಸುತ್ತಿರುವ ಜಾಹೀರಾತುಗಳಲ್ಲಿ ಪ್ರಧಾನಿ ಮೋದಿ ಅವರ ಭಾವಚಿತ್ರ ಹಾಕಲಾಗಿದೆ. ಜನತಾದಳದ ಪ್ರಚಾರ ರಾಲಿಗಳಲ್ಲಿಯೂ ನಿತೀಶ್ ಕುಮಾರ್ ಭಾವಚಿತ್ರ ಮಾತ್ರ ಹಾಕಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:“ಯಾರೂ ಅಲ್ಲಾ, ಯಡಿಯೂರಪ್ಪಾನೇ ವಿಲನ್”: ಸಚಿವ ಸೋಮಶೇಖರ್ ಹೇಳಿಕೆ

ಚುನಾವಣಾ ಪ್ರಚಾರ ರಾಲಿಗಳಲ್ಲಿ ಕೇವಲ ಪ್ರಧಾನಿ ನರೇಂದ್ರ ಮೋದಿ ಅವರ ಪೋಸ್ಟರ್ಸ್ಸ್ ಮತ್ತು ಕಟೌಟ್ ಗಳನ್ನು ಮಾತ್ರ ಯಾಕೆ ಹಾಕಲಾಗುತ್ತಿದೆ ಎಂಬ ಬಗ್ಗೆ ಯಾವುದೇ ಬಿಜೆಪಿ ನಾಯಕರು ಗುಟ್ಟು ಬಿಟ್ಟುಕೊಟ್ಟಿಲ್ಲ. ಬಿಹಾರದ ಎನ್ ಡಿಎ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರಧಾನಿ ಮೋದಿ, ಶಾ ಮಾತ್ರ ಘೋಷಿಸಿದ್ದು ಬಿಟ್ಟರೆ, ಉಳಿದೆಲ್ಲವೂ ನಿತೀಶ್ ಗೆ ವ್ಯತಿರಿಕ್ತವಾಗಿಯೇ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ಭಾಗವಹಿಸಿದ್ದ ಮೂರು ಸಮಾವೇಶದಲ್ಲಿಯೂ ನಿತೀಶ್ ಕುಮಾರ್ ಅವರ ಹೆಸರನ್ನು ಒಂದೆರಡು ಬಾರಿ ಮಾತ್ರ ಪ್ರಸ್ತಾಪಿಸಿದ್ದರು. ಸಸಾರಾಮ್ ನಲ್ಲಿ ನಡೆದ ಮೊದಲ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಎನ್ ಡಿಎ ಸರ್ಕಾರಕ್ಕೆ ಮತ ನೀಡಿ ಎಂದು ಕೇಳಿದ್ದು, ಭಾಷಣದ ಕೊನೆಯಲ್ಲಿ ನಿತೀಶ್ ಕುಮಾರ್ ಹೆಸರಲ್ಲಿ ಮತ ಯಾಚಿಸಿದ್ದು, ಹೊಂದಾಣಿಕೆಯ ಕೊರತೆ ಎದ್ದು ಕಾಣಿಸುತ್ತಿರುವುದಾಗಿ ವರದಿ ಹೇಳಿದೆ.

ಬಿಜೆಪಿಯ ಆಂತರಿಕ ವಲಯದ ಮಾಹಿತಿ ಪ್ರಕಾರ, ಎಲ್ಲಾ ವಲಯಗಳಿಂದಲೂ ನಿತೀಶ್ ಕುಮಾರ್ ವಿರುದ್ಧ ಅಸಮಾಧಾನದ ಅಲೆ ಎದ್ದಿರುವ ಬಗ್ಗೆ ಪಕ್ಷಕ್ಕೆ ಮಾಹಿತಿ ಲಭ್ಯವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ನಿತೀಶ್ ಕುಮಾರ್ ವಲಸೆ ಕಾರ್ಮಿಕರ ಬಗ್ಗೆ ನಡೆದುಕೊಂಡ ರೀತಿ ಬಗ್ಗೆ ಜನಸಾಮಾನ್ಯರಲ್ಲಿ ಆಕ್ರೋಶ ಹುಟ್ಟು ಹಾಕಿದೆ. ಇದು ರಾಷ್ಟ್ರೀಯ ಜನತಾದಳದ ತೇಜಸ್ವಿ ಯಾದವ್ ಗೆ ಅನುಕೂಲ ಕಲ್ಪಿಸಿಕೊಟ್ಟಿರುವುದಾಗಿ ವಿವರಿಸಿದೆ.

ಇದನ್ನೂ ಓದಿ:ನಟಿ ಖುಷ್ಬೂ ಸೇರಿ ಹಲವು ಬಿಜೆಪಿ ನಾಯಕರನ್ನು ಬಂಧಿಸಿದ ತಮಿಳುನಾಡು ಪೊಲೀಸರು

ಭ್ರಷ್ಟಾಚಾರ ಮತ್ತು ಇತರ ಆರೋಪಗಳನ್ನು ಎದುರಿಸುತ್ತಿರುವ ನಿತೀಶ್ ಕುಮಾರ್ ಅವರು ಮತ್ತೊಮ್ಮೆ ಅಧಿಕಾರದ ಗದ್ದುಗೆ ನೀಡಬಾರದು ಎಂದು ಬಿಜೆಪಿ ಮುಖಂಡರು ಬಯಸುತ್ತಿದ್ದಾರೆ. ಇದೀಗ ರಾಜ್ಯದ ಚುನಾವಣೆಯಲ್ಲಿ ನಿತೀಶ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಚಿರಾಗ್ ಪಾಸ್ವಾನ್ ಗೆ ಪರೋಕ್ಷ ಬೆಂಬಲ ನೀಡಲಾಗುತ್ತಿದೆ ಎಂದು ವರದಿ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮತ ಯಾಚಿಸದಿದ್ದರೆ, ಎನ್ ಡಿಎಗೆ ಅವಕಾಶ ಇಲ್ಲ ಎಂಬುದು ಸ್ಪಷ್ಟವಾಗಿದೆ. ಇದರಿಂದಾಗಿಯೇ ಚಿರಾಗ್ ಪಾಸ್ವಾನ್ ತನ್ನ ನಿಷ್ಠೆಯನ್ನು ಬಿಜೆಪಿಗೆ ಎಂದು ಘೋಷಿಸಿದ್ದರೂ ಸಹ 135 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಚಿರಾಗ್ ಪಕ್ಷ ಎನ್ ಡಿಎ ಭಾಗ ಅಲ್ಲ ಎಂದು ಬಹಿರಂಗವಾಗಿ ಹೇಳಲಾಗಿದೆ. ಅಲ್ಲದೇ ಪ್ರಧಾನಿ ಮೋದಿ ಅವರ ವರ್ಚಸ್ಸು ಬಿಹಾರದಲ್ಲಿ ಈಗಲೂ ಇದೆ. ಇದರಿಂದಾಗಿ ಫಲಿತಾಂಶದ ಬಗ್ಗೆ ಇನ್ನಷ್ಟು ಕುತೂಹಲಕಾರಿ ಬೆಳವಣಿಗೆ ನಡೆಯಲಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next