ಬೆಂಗಳೂರು: ನೆರೆಪರಿಹಾರ ವಿಚಾರದಲ್ಲಿ ಕೇಂದ್ರ ಸರಕಾರದ ನಿರ್ಲಕ್ಷ್ಯ ದೋರಣೆಯನ್ನು ಮಾಧ್ಯಮಗಳ ಮೂಲಕ ಖಂಡಿಸಿದ್ದ ಭಾರತೀಯ ಜನತಾ ಪಕ್ಷದ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷದ ಕೇಂದ್ರೀಯ ಶಿಸ್ತು ಮಂಡಳಿಯು ಕಾರಣ ಬಯಸಿ ನೋಟೀಸು ನೀಡಿದೆ.
ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಮತ್ತು ರಾಜ್ಯಕ್ಕೆ ಸೂಕ್ತ ಪರಿಹಾರವನ್ನು ನೀಡುವಲ್ಲಿ ಕೇಂದ್ರದಲ್ಲಿರುವ ಮೋದಿ ನೇತೃತ್ವದ ಎನ್.ಡಿ.ಎ. ಸರಕಾರ ವಿಫಲವಾಗಿದೆ ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಅವರು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಟೀಕಿಸಿದ್ದರು.
ಯತ್ನಾಳ್ ಅವರ ಈ ಹೇಳಿಕೆಯ ವಿರುದ್ಧ ಬಿಜೆಪಿ ಪಕ್ಷದ ಶಿಸ್ತು ಸಮಿತಿ ಇದೀಗ ಗರಂ ಆಗಿದ್ದು ತಾವು ನೀಡಿದ ಈ ಹೇಳಿಕೆಗೆ ಕಾರಣ ನೀಡುವಂತೆ ಕೇಳಿ ಅವರಿಗೆ ನೋಟೀಸು ನೀಡಲಾಗಿದೆ.
ರಾಜ್ಯದಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದ ಸಂದರ್ಭದಲ್ಲಿ ಸಕಾಲಿಕ ನೆರವು ಮತ್ತು ಪರಿಹಾರಗಳನ್ನು ಒದಗಿಸಿದ್ದ ನಮ್ಮದೇ ಪಕ್ಷದ ರಾಜ್ಯ ಮತ್ತು ಕೇಂದ್ರ ಸರಕಾರಗಳ ಪ್ರಯತ್ನಗಳನ್ನು ಅವಮಾನಿಸುವ ಮತ್ತು ಅವುಗಳಿಗೆ ಕಳಂಕ ತರುವ ಹೇಳಿಕೆ ನೀಡಿದ್ದರ ಹಿಂದಿನ ಕಾರಣವನ್ನು ಕೇಳಿ ಈ ನೋಟೀಸನ್ನು ಜಾರಿಗೊಳಿಸಲಾಗಿದೆ.
ಮತ್ತು ರಾಜ್ಯದ ಮತದಾರರನ್ನು ಪಕ್ಷದ ನಾಯಕತ್ವದ ವಿರುದ್ಧ ಸಿಡಿದೇಳುವಂತ ರೀತಿಯ ಕಾರ್ಯಕ್ಕೆ ಪ್ರೇರೇಪಿಸುವಂತ ಹೇಳಿಕೆ ನೀಡಿದ್ದಕ್ಕೂ ಕಾರಣವನ್ನು ಈ ನೊಟೀಸಿನಲ್ಲಿ ಕೇಳಲಾಗಿದೆ.
ಪಕ್ಷದ ನಾಯಕತ್ವವನ್ನು ಶಕ್ತಿ ಕೇಂದ್ರ ಎಂದು ಕರೆಯುವ ಮೂಲಕ ಪಕ್ಷದ ನಾಯಕತ್ವಕ್ಕೆ ಅಗೌರವ ತೋರುವ ಕೆಲಸವನ್ನು ಮಾಡಿದ್ದೀರಿ ಎಂದು ಯತ್ನಾಳ್ ಅವರ ಮೇಲೆ ಆರೋಪವನ್ನು ಹೊರಿಸಲಾಗಿದ್ದು ಈ ಎಲ್ಲಾ ಆರೋಪಗಳಿಗೆ ಮತ್ತು ಶಿಸ್ತು ಸಮಿತಿ ಕೇಳಿರುವ ಪ್ರಶ್ನೆಗಳಿಗೆ ಯತ್ನಾಳ್ ಅವರು ಇದೀಗ 10 ದಿನಗಳ ಒಳಗಾಗಿ ಉತ್ತರಿಸಬೇಕಿದೆ.