ಉಡುಪಿ: ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗೆ ಬಿಜೆಪಿ ಅಧ್ಯಕ್ಷರ ಆಯ್ಕೆ ನಡೆದಿದ್ದರೂ ಉಡುಪಿ ಜಿಲ್ಲೆಗೆ ಇನ್ನೂ ದಿನ ಕೂಡಿಬಂದಿಲ್ಲ. ಮೂರೂ ಜಿಲ್ಲೆಗಳಿಗೆ ಏಕಕಾಲದಲ್ಲಿ ಆಯ್ಕೆ ನಡೆಸುವುದು ಎಂದು ನಿರ್ಧರಿಸಲಾಗಿತ್ತಾದರೂ ಉಡುಪಿ ಜಿಲ್ಲೆಗೆ ವರಿಷ್ಠರಿನ್ನೂ ಹಸುರು ನಿಶಾನೆ ತೋರಿಸಿಲ್ಲ.
ಜಿಲ್ಲೆಯಲ್ಲಿ ಮೂವರ ಹೆಸರನ್ನು ಕೋರ್ ಸಮಿತಿ ಶಿಫಾರಸು ಮಾಡಿ ರಾಜ್ಯ ಸಮಿತಿಗೆ ಕಳುಹಿಸಿತ್ತು. ಈ ಮೂವರಲ್ಲಿ ಯಾರಾದರೂ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆ ಇತ್ತು. ಆದರೆ ಇತ್ತೀಚೆಗೆ ತಿಳಿದುಬಂದ ಪ್ರಕಾರ ಬೇರೆ ಮೂಲಗಳ ಬಲದಿಂದ ಅಧ್ಯಕ್ಷರಾಗಲು ಪಕ್ಷದೊಳಗೆ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಕೋರ್ ಸಮಿತಿ ಶಿಫಾರಸು ಮಾಡಿದವರನ್ನು ಬಿಟ್ಟು ಮೂರನೆಯ ವ್ಯಕ್ತಿಯನ್ನು ಆಯ್ಕೆ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಮೊದಲು ಮೂವರ ಹೆಸರುಗಳನ್ನು ರಾಜ್ಯ ವರಿಷ್ಠರ ಬಳಿಗೆ ಕಳುಹಿಸಿದ್ದರೂ ಎಲ್ಲ ಆಕಾಂಕ್ಷಿಗಳ ಪಟ್ಟಿ ಕಳುಹಿಸಲು ಕೋರಿದಂತೆ ಅದನ್ನೂ ಕಳುಹಿಸಲಾಗಿತ್ತು. ಮಟ್ಟಾರು ರತ್ನಾಕರ ಹೆಗ್ಡೆ, ಕುಯಿಲಾಡಿ ಸುರೇಶ ನಾಯಕ್, ಕುತ್ಯಾರು ನವೀನ್ ಶೆಟ್ಟಿ, ಹೆರ್ಗ ದಿನಕರ ಶೆಟ್ಟಿ, ಬೈಕಾಡಿ ಸುಪ್ರಸಾದ ಶೆಟ್ಟಿ, ಯಶಪಾಲ್ ಸುವರ್ಣರ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿ ಇತ್ತೆಂದು ತಿಳಿದುಬಂದಿದೆ. ಜಿಲ್ಲಾಧ್ಯಕ್ಷರು ಮರು ಆಯ್ಕೆಗೊಳ್ಳುವಂತಿಲ್ಲ ಎಂಬ ನಿಯಮ ಇರುವುದರಿಂದ ಹಾಲಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆಯವರ ಹೆಸರು ಲುಪ್ತವಾಗಲಿದೆ.
55ರ ವಯೋಮಿತಿಯನ್ನು ಜಿಲ್ಲಾಧ್ಯಕ್ಷರಿಗೆ ಹಾಕಿರುವ ಕಾರಣ ಕೆಲವು ಆಕಾಂಕ್ಷಿಗಳಿಗೆ ಅವಕಾಶ ತಪ್ಪಿ ಹೋಗಿದೆ. ಹಾಲಿ ಅಧ್ಯಕ್ಷರ ಅವಧಿ ಮುಗಿದು ಆರು ತಿಂಗಳು ಕಳೆದಿವೆ.
ಕೆಲವು ಕಡೆ ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಾಗಿ ವಿಂಗಡಿಸಿದ ಕಾರಣ ರಾಜ್ಯದಲ್ಲಿ ಒಟ್ಟು 36 ಸಂಘಟನಾತ್ಮಕ ಜಿಲ್ಲೆಗಳಿವೆ. ಇನ್ನು ಒಂದು ವಾರದಲ್ಲಿ ಅರ್ಧಾಂಶಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಅಧ್ಯಕ್ಷರ ಆಯ್ಕೆ ನಡೆಯುವ ಸಾಧ್ಯತೆ ಇದೆ. ಹೀಗಾದ ಬಳಿಕ ರಾಜ್ಯಾಧ್ಯಕ್ಷರು ಪೂರ್ಣ ಪ್ರಮಾಣದಲ್ಲಿ ಅಧಿಕಾರವನ್ನು ಹೊಂದಲಿದ್ದಾರೆ.