ಉಡುಪಿ: ರಾಜ್ಯದಲ್ಲಿ ಪ.. ಜಾತಿ, ಬಡ ವರ್ಗದ ಜನರೇ ಹೆಚ್ಚಾಗಿ ಮತಾಂತರಕ್ಕೆ ಗುರಿಯಾಗುತ್ತಿದ್ದಾರೆ. ಮತಾಂತರ ಗೊಂಡವ ರಿಗೆ ಪರಿಶಿಷ್ಟ ಜಾತಿ ಕೋಟದಲ್ಲಿ ದೊರೆಯುವ ಸರಕಾರಿ ಸವಲತ್ತುಗಳನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಆಗ್ರಹಿಸಿದರು.
ರವಿವಾರ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಾಂತರ ತಡೆಯುವ ನಿಟ್ಟಿನಲ್ಲಿ ಸರಕಾರ ಕಠಿನ ಕ್ರಮ ತೆಗೆದುಕೊಳ್ಳ ಬೇಕು. ಧರ್ಮಾಂತರದಿಂದ ರಾಷ್ಟ್ರಾಂತರ ವಾಗುತ್ತದೆ ಎಂಬ ಡಾ| ಅಂಬೇಡ್ಕರ್ ಮಾತನ್ನು ನೆನಪಿಟ್ಟುಕೊಳ್ಳಬೇಕು. ಕೇಂದ್ರ ಸರಕಾರವು ಪರಿಶಿಷ್ಟ ಜಾತಿ ಕಲ್ಯಾಣಕ್ಕಾಗಿ ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಂಬೇಡ್ಕರ್ ಅವರಿಗೆ ಸಂಬಂಧಪಟ್ಟ 5 ಕ್ಷೇತ್ರಗಳನ್ನು ಪಂಚತೀರ್ಥ ಕ್ಷೇತ್ರವಾಗಿ ಅಭಿವೃದ್ಧಿ ಮಾಡಲಾಗಿದೆ ಎಂದರು.
ಕೇಂದ್ರ ಸರಕಾರ 59 ಸಾವಿರ ಕೋ. ರೂ. ಮೀಸಲಿಟ್ಟಿದ್ದು, ಸ್ವೋದ್ಯೋಗಕ್ಕೆ ಶೇ.4ರ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತದೆ. ರಾಜ್ಯ ಸರಕಾರ ಅಂಬೇಡ್ಕರ್ ಭೇಟಿ ನೀಡಿದ 7 ಜಿಲ್ಲೆಗಳ 10 ಸ್ಥಳಗಳನ್ನು ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿಪಡಿಸಿದೆ ಎಂದು ಹೇಳಿದರು.
ಬಿಜೆಪಿ ಎಸ್ಸಿ ಮೋರ್ಚಾ ಸಂಘಟನಾತ್ಮಕ ನೆಲೆಯಲ್ಲಿ ಪ್ರತಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪಕ್ಷದ ಚಟುವಟಿಕೆ ವಿಸ್ತರಿಸಲಾಗುತ್ತಿದೆ. ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಕ್ಕೆ ಸಂಬಂಧಿಸಿ ಸರಕಾರಿ ಯೋಜನೆಗಳ ಮಾಹಿತಿ ಕಟ್ಟಕಡೆಯ ವ್ಯಕ್ತಿಗೂ ತಲುಪುವ ರೀತಿಯಲ್ಲಿ ನಮ್ಮ ಮೋರ್ಚಾ ಕಾರ್ಯನಿರ್ವಹಿಸುತ್ತಿದೆ. ಬಿಜೆಪಿ ದಲಿತರ ಬಗ್ಗೆ ನೈಜ ಕಾಳಜಿ ಹೊಂದಿದೆ ಎಂದರು.
ಕೋರ್ಟ್ ತೀರ್ಪು ಪ್ರಶ್ನಿಸಿ ಬೀದಿಗೆ ಇಳಿದವರನ್ನು ಕಾಂಗ್ರೆಸ್ ಬೆಂಬಲಿಸುತ್ತಿದ್ದು, ಸಂವಿಧಾನ ಬದಲಾಯಿಸುವ ಅಗತ್ಯವಿದೆ ಎಂಬುದಾಗಿ ಹೇಳಿಕೆ ನೀಡಿದ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಬಗ್ಗೆ ಕಾಂಗ್ರೆಸ್ ಚಕಾರ ಎತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎಸ್‌ಸಿ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಎಸ್.ಕುಮಾರ್, ಉಪಾಧ್ಯಕ್ಷ ನಂಜುಂಡಸ್ವಾಮಿ, ಪ್ರ. ಕಾರ್ಯದರ್ಶಿ ಜಗದೀಶ್, ಪ್ರಭಾರಿ ಸಿದ್ದರಾಜು ಪತ್ರಿಕಾಗೋಷ್ಠಿಯಲ್ಲಿದ್ದರು.