Advertisement

ಸಚಿವ ಕೃಷ್ಣ ಬೈರೇಗೌಡ ರಾಜೀನಾಮೆಗೆ ಬಿಜೆಪಿ ಆಗ್ರಹ

06:33 AM Mar 16, 2019 | |

ಬೆಂಗಳೂರು: ರಾಜ್ಯ ಮೈತ್ರಿ ಸರ್ಕಾರ 20 ಪರ್ಸೆಂಟ್‌ ಕಮಿಷನ್‌ ಸರ್ಕಾರವಾಗಿದೆ. ಶುಕ್ರವಾರ ಐಟಿ ದಾಳಿ ವೇಳೆ 2 ಕೋಟಿ ರೂ. ಹಣದೊಂದಿಗೆ ಸಿಕ್ಕಿಬಿದ್ದ ವ್ಯಕ್ತಿಯು ಹಣವನ್ನು ಸಚಿವರಿಗೆ ನೀಡಲು ಕೊಂಡೊಯ್ಯಲಾಗುತ್ತಿತ್ತು ಎಂದಿದ್ದು, ನೈತಿಕ ಹೊಣೆ ಹೊತ್ತು ಕೃಷ್ಣ ಬೈರೇಗೌಡ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಆಗ್ರಹಿಸಿದರು.

Advertisement

ರಾಜ್ಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಐಟಿ ದಾಳಿ ನಡೆದಾಗ ರಾಜಮಹಲ್‌ ಹೋಟೆಲ್‌ನಲ್ಲಿ 2 ಕೋಟಿ ರೂ. ಹಣ ಪತ್ತೆಯಾಗಿದ್ದು, ಆ ಹಣವನ್ನು ಸಚಿವ ಕೃಷ್ಣ ಬೈರೇಗೌಡರಿಗೆ ತಲುಪಿಸಲು ಸಂಗ್ರಹಿಸಲಾಗಿತ್ತು ಎಂದು ಸಿಕ್ಕಿಬಿದ್ದ ವ್ಯಕ್ತಿ ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಕೂಡಲೇ ಕೃಷ್ಣ ಬೈರೇಗೌಡ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರ ಕಾರ್ಯಕ್ರಮವು ಮಾನ್ಯತಾ ಟೆಕ್‌ಪಾರ್ಕ್‌ ಬಳಿಯ ಬರ್ಡ್ಸ್‌ ಪಾರ್ಕ್‌ನಲ್ಲಿ ನಡೆಯಲಿದೆ. ಆ ಕಾರ್ಯಕ್ರಮ ಆಯೋಜಿಸಲು ಕೃಷ್ಣ ಬೈರೇಗೌಡ ಅವರು ಹಣ ಸಂಗ್ರಹಿಸಿದರೆ? ದಾಖಲೆಯಿಲ್ಲದೆ 50,000 ರೂ. ನಗದು ಸಾಗಿಸುವಂತಿಲ್ಲ ಎಂದು ಚುನಾವಣಾ ಆಯೋಗ ಸೂಚಿಸಿದೆ. ಹೀಗಿರುವಾಗ 2 ಕೋಟಿ ರೂ. ಹಣ ಸಿಕ್ಕಿದ್ದು, ಚುನಾವಣಾ ಆಯೋಗ ತನ್ನ ನಿರ್ಧಾರ ತಿಳಿಸಬೇಕು ಎಂದು ಆಗ್ರಹಿಸಿದರು.

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಶೇ.10 ಪರ್ಸೆಂಟ್‌ ಕಮಿಷನ್‌ ಸರ್ಕಾರವಾಗಿತ್ತು. ಇದೀಗ ಮೈತ್ರಿ ಸರ್ಕಾರವು 10 ಪರ್ಸೆಂಟ್‌ನಿಂದ 20 ಪರ್ಸೆಂಟ್‌ ಕಮಿಷನ್‌ ಸರ್ಕಾರವಾಗಿ ಮಾರ್ಪಟ್ಟಿದೆ. ಸಚಿವ ಪುಟ್ಟರಂಗ ಶೆಟ್ಟಿ ಅವರ ಆಪ್ತ ಸಹಾಯಕ ಮೋಹನ್‌ ಕುಮಾರ್‌ ಬಳಿ 25 ಲಕ್ಷ ರೂ. ಪತ್ತೆಯಾದರೂ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ. ಹಾಗಾಗಿ ಹಣ ವಸೂಲಿ ಮುಂದುವರಿದಿದ್ದು, ಇದೀಗ ಮತ್ತೆ 2 ಕೋಟಿ ರೂ. ಪತ್ತೆಯಾಗಿದೆ ಎಂದು ವಾಗ್ಧಾಳಿ ನಡೆಸಿದರು.

ವಿಧಾನ ಪರಿಷತ್‌ ಸದಸ್ಯೆ ತೇಜಸ್ವಿನಿ ಗೌಡ, ಕೆಪಿಸಿಸಿ ಬಿಡುಗಡೆ ಮಾಡಿರುವ ಕೈಪಿಡಿಯಲ್ಲಿನ ಮಾಹಿತಿಯು ರಾಷ್ಟ್ರೀಯ ಕಾಂಗ್ರೆಸ್‌ಗೆ ಒದಗಿಸಿರುವ ಸಂಶೋಧನಾ ದಾಖಲೆಯಾಗಿದ್ದು, ಪಕ್ಷದ ಅಧಿಕೃತ ದಾಖಲೆಯಾಗಿ ಪರಿಗಣಿಸುವಂತಿಲ್ಲ ಎಂದು ಸ್ಪಷ್ಟನೆ ನೀಡುವಷ್ಟರ ಮಟ್ಟಿಗೆ ಕಾಂಗ್ರೆಸ್‌ ದಿಕ್ಕು ತಪ್ಪಿಸಿದೆ. ಕೈಪಿಡಿಯಲ್ಲಿ ಸಂಪೂರ್ಣ ಸುಳ್ಳು ಮಾಹಿತಿಯಿದ್ದು, ಇತಿಹಾಸ ತಿರುಚಲಾಗಿದೆ.

Advertisement

ಇಂದಿರಾಗಾಂಧಿಯವರ ಕಾಲದಲ್ಲಿ 420 ಸ್ಥಾನ ಗೆದ್ದಿದ್ದ ಕಾಂಗ್ರೆಸ್‌ ನಂತರ 44ಕ್ಕೆ ಕುಸಿದಿರುವ ಬಗ್ಗೆ ಈ ರೀತಿಯ ಕೈಪಿಡಿ ತಂದರೆ ಅನುಕುಲವಾಗಬಹುದೇನೋ. ಈ ರೀತಿಯ ಕಾಗಕ್ಕ- ಗೂಬಕ್ಕನ ಕತೆಯನ್ನೆಲ್ಲಾ ಕೇಳುವ ಭಾರತ ಇಂದು ಇಲ್ಲ ಎಂಬುದನ್ನು ತಿಳಿಯಬೇಕು ಎಂದು ಹೇಳಿದರು. ರಾಜ್ಯ ಲೋಕಸಭಾ ಚುನಾವಣೆ ನಿರ್ವಹಣೆ ಮಾಧ್ಯಮ ಸಂಚಾಲಕ ಎ.ಎಚ್‌.ಆನಂದ, ಸಹ ಸಂಚಾಲಕ ಎಸ್‌.ಪ್ರಕಾಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next