Advertisement
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಬಿಸಿ ಕೆಟಗರಿಯಲ್ಲಿ ಸಬ್-ಕೆಟಗರಿ ಗುರುತಿಸಲು ಆಯೋಗವೊಂದನ್ನು ರಚಿಸಲು ತೀರ್ಮಾನಿಸಲಾಗಿದೆ. ಈ ಮೂಲಕ ಒಬಿಸಿ ಪಂಗಡದಲ್ಲೇ ಇರುವ ಅತ್ಯಂತ ನಿರ್ಲಕ್ಷಿತ ಮತ್ತು ತಳ ಸಮುದಾಯದ ಮೇಲೂ ಬಿಜೆಪಿ ಕಣ್ಣು ಹಾಕಿದೆ.
Related Articles
ಈ ಮಧ್ಯೆ, ಒಬಿಸಿಯೊಳಗೆ ಕೆನೆಪದರ ಮೀಸಲಾತಿ ಮಿತಿಯನ್ನು 6 ಲಕ್ಷ ರೂ.ಗಳಿಂದ 8 ಲಕ್ಷ ರೂ.ಗಳಿಗೆ ಏರಿಕೆ ಮಾಡಲು ಕೇಂದ್ರ ಸಂಪುಟ ನಿರ್ಧರಿಸಿದೆ. ಇದುವರೆಗೆ ವಾರ್ಷಿಕ 6 ಲಕ್ಷ ರೂ.ಗಳವರೆಗೆ ಆದಾಯವಿದ್ದವರಿಗೆ ಮಾತ್ರ ಮೀಸಲಾತಿ ಸೌಲಭ್ಯ ಸಿಗುತ್ತಿತ್ತು. ಈ ಮಿತಿಯನ್ನು 8 ಲಕ್ಷಗಳಿಗೆ ಏರಿಕೆ ಮಾಡಲಾಗಿದ್ದು, ಒಬಿಸಿಯಲ್ಲಿರುವ ಬಹುತೇಕ ಮಂದಿಗೆ ಅನುಕೂಲವಾಗಲಿದೆ. ಈ ಬಗ್ಗೆಯೂ ಕಳೆದ ವರ್ಷವೇ ಕೇಂದ್ರ ಸರ್ಕಾರ ಪ್ರಸ್ತಾಪವಿಟ್ಟಿತ್ತಾದರೂ, ಈ ನಿರ್ಧಾರ ಈಗ ಜಾರಿಗೆ ಬಂದಿದೆ.
Advertisement
ಸಬ್-ಕೆಟಗರಿ ಮೀಸಲಾತಿಯ ಲಾಭ-ನಷ್ಟಕೆಟಗರಿಯಲ್ಲೇ ಉಪ-ಕೆಟಗರಿ ಮಾಡಿ ಮೀಸಲಾತಿ ನೀಡುವು ಇರುವೆ ಗೂಡಿಗೆ ಕೈಹಾಕಿದಷ್ಟು ಕಷ್ಟಕರವಾದ ಕೆಲಸ. ಒಬಿಸಿಯಲ್ಲಿ ನೂರಾರು ಜಾತಿಗಳು ಬರಲಿದ್ದು, ಇವುಗಳನ್ನು ಯಾವ ಕೆಟಗರಿಗೆ ಸೇರಿಸಬೇಕು ಎಂಬುದೇ ಮೊದಲ ಗೊಂದಲ. ಅಲ್ಲದೆ ಸದ್ಯ ಇರುವಂತೆ ಹೆಚ್ಚು ಹಿಂದುಳಿದವರು, ಹಿಂದುಳಿದವರು ಮತ್ತು ತೀರಾ ಹಿಂದುಳಿದವರು ಎಂದು ವಿಭಾಗಿಸಲಾಗಿದೆ. ಇದುವರೆಗೆ ಹೆಚ್ಚಿನ ಮೀಸಲಾತಿ ಸೌಲಭ್ಯ ಸಿಕ್ಕಿರುವುದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪ್ರಬಲರಾಗಿರುವ ಹೆಚ್ಚು ಹಿಂದುಳಿದವರಿಗೇ. ಇವರನ್ನು ಬಿಟ್ಟರೆ ಹಿಂದುಳಿದವರಿಗೆ ಕೊಂಚ ಮಟ್ಟಿಗೆ ಸಿಕ್ಕಿದೆ. ಆದರೆ ತೀರಾ ಹಿಂದುಳಿದವರಿಗೆ 30 ವರ್ಷಗಳಿಂದಲೂ ನಷ್ಟವಾಗುತ್ತಲೇ ಇದೆ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉಪ ಕೆಟಗರಿ ಮಾಡಿ ಮೀಸಲಾತಿ ನೀಡಲು ಮುಂದಾಗಿದೆ ಎನ್ನಲಾಗಿದೆ. ಉತ್ತರ ಪ್ರದೇಶದಲ್ಲಿ ಯಶಸ್ವಿಯಾದ ತಂತ್ರ
ಉತ್ತರ ಪ್ರದೇಶದಲ್ಲಿ ಇದೇ ತಂತ್ರವನ್ನು ಇರಿಸಿಕೊಂಡೇ ಬಿಜೆಪಿ ಚುನಾವಣೆಗೆ ಇಳಿದಿತ್ತು. 1990ರಲ್ಲಿ ವಿ.ಪಿ. ಸಿಂಗ್ ನೇತೃತ್ವದ ಸರ್ಕಾರ ಮಂಡಲ್ ಆಯೋಗದ ಮೂಲಕ ಒಬಿಸಿ ವರ್ಗಕ್ಕೆ ಶೇ.27ರಷ್ಟು ಮೀಸಲಾತಿ ನೀಡುವ ಅವಕಾಶ ಕಲ್ಪಿಸಿತ್ತು. ಆಗಿನಿಂದಲೂ ಕೇಂದ್ರ ಸರ್ಕಾರಿ ಉದ್ಯೋಗಳಲ್ಲಿ ಒಬಿಸಿಯಲ್ಲಿನ ಹೆಚ್ಚು ಹಿಂದುಳಿದ ವರ್ಗದವರೇ ಇದರ ಅನುಕೂಲ ಪಡೆದುಕೊಂಡು ಬಂದಿದ್ದಾರೆ. ಅಲ್ಲದೆ ಉತ್ತರ ಪ್ರದೇಶದಲ್ಲಿ ಈ ಮೀಸಲಾತಿಯ ಸದುಪಯೋಗ ಪಡೆದವರು ಯಾದವರು. ಈ ಅಂಶವನ್ನೇ ಮುಂದಿಟ್ಟುಕೊಂಡಿದ್ದ ಬಿಜೆಪಿ ಯಾದವೇತರರ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇದೇ ತಂತ್ರವನ್ನು 2019ಕ್ಕೂ ಅನ್ವಯಿಸುವ ಇರಾದೆ ಬಿಜೆಪಿಗೆ ಇದೆ ಎಂದು ಹೇಳಲಾಗಿದೆ. ಮೀಸಲಾತಿಯ ಮರುಪರಿಶೀಲನೆ ಅಲ್ಲ
ಒಬಿಸಿ ವರ್ಗದಲ್ಲಿನ ಉಪ-ಕೆಟಗರಿ ಮೀಸಲಾತಿ ನೀಡುವ ಸಂಬಂಧ ಆಯೋಗ ರಚಿತವಾಗಿರುವ ಹಿಂದೆ ಮೀಸಲಾತಿ ವ್ಯವಸ್ಥೆಯನ್ನು ಮರುಪರಿಶೀಲನೆ ಮಾಡುವ ಉದ್ದೇಶವಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಇದು ಕೇವಲ ಮೀಸಲಾತಿ ಸಿಗದವರಿಗೆ ಮಾತ್ರ ಅನುಕೂಲವಾಗಲಿ ಎಂಬ ಕಾರಣದಿಂದ ಮಾಡಲಾಗಿದೆ. ಇದನ್ನು ಬಿಟ್ಟು ಬೇರೆ ಯಾವ ಉದ್ದೇಶವಿಲ್ಲ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.