ಹುಬ್ಬಳ್ಳಿ: ಹು-ಧಾ ಪೊಲೀಸ್ ಕಮಿಷನರೇಟ್‌ನ ಪೇದೆಯೊಬ್ಬ ಫೇಸ್‌ಬುಕ್‌ನಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ಪರ ಪ್ರಚಾರ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಅವರು ಸೈಬರ್ ಕ್ರೈಂ ವಿಭಾಗಕ್ಕೆ ತನಿಖೆಗೆ ಆದೇಶಿಸಿದ್ದಾರೆ.
ಬೆಂಡಿಗೇರಿ ಠಾಣೆಯ ಪೇದೆ ನಾಗರಾಜ ಕೆಂಚಕ್ಕನವರ ಎಂಬಾತ ‘ಏಕಲವ್ಯ ಹುಬ್ಬಳ್ಳಿ’ ಎಂಬ ಫೇಸ್‌ಬುಕ್ ಖಾತೆಯಲ್ಲಿ ಹಲವು ವರ್ಷಗಳಿಂದ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರನ್ನು ಹೊಗಳುವ ಹಾಗೂ ಅವರನ್ನು ಸಮರ್ಥನೆ ಮಾಡಿಕೊಳ್ಳುವ ಪೋಸ್ಟ್‌ಗಳನ್ನು ಮಾಡುತ್ತಿದ್ದ. ಡಾ.ಪ್ರಭಾಕರ ಭಟ್ ಕಲ್ಲಡ್ಕ, ಚಕ್ರವರ್ತಿ ಸೂಲಿಬೆಲೆ, ರಾಘವೇಶ್ವರ ಭಾರತಿ ಸ್ವಾಮೀಜಿ, ಜನಾರ್ದನ ರೆಡ್ಡಿ ಸೇರಿದಂತೆ ಹಲವು ಬಿಜೆಪಿ ಹಾಗೂ ಬಲಪಂಥೀಯ ನಾಯಕರ ಪರ ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡುತ್ತಿದ್ದ. ಅಲ್ಲದೆ ಕಾಂಗ್ರೆಸ್ ಮತ್ತು ಅದರ ನಾಯಕರು, ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧದ ಪೋಸ್ಟ್‌ಗಳು ರಾರಾಜಿಸುತ್ತಿದ್ದವು.
ಪೋಸ್ಟ್ ಮಾಡುವಾಗ ಜೈ ಶ್ರೀರಾಮ ಎಂದು ಆರಂಭಿಸುತ್ತಿದ್ದ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೂ ಈ ಕಾಯಕ ಮುಂದುವರಿಸಿದ್ದ. ತಾನೊಬ್ಬ ಸರ್ಕಾರಿ ನೌಕರ ಎಂಬುದನ್ನು ಮರೆತು ಬಿಜೆಪಿ ಪರ ಪ್ರಚಾರ ಮಾಡತೊಡಗಿದ್ದ. ಈ ಕುರಿತು ಮಾಧ್ಯಮಗಳಲ್ಲಿ ವರದಿ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ನಾಗರಾಜ ಕೆಂಚಕ್ಕನವರ, ಪ್ರಚಾರ ಹಾಗೂ ಸಮರ್ಥನೆ ಮಾಡಿಕೊಂಡಿದ್ದ ಪೋಸ್ಟ್‌ಗಳನ್ನು ತನ್ನ ಫೇಸ್‌ಬುಕ್ ಖಾತೆಯಿಂದ ತೆಗೆದು ಹಾಕಿದ್ದಾನೆ. ಪ್ರಕರಣವು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಆಯುಕ್ತರು ಪೇದೆ ಕೆಂಚಕ್ಕನವರ ವಿರುದ್ಧ ಸೈಬರ್ ಕ್ರೈಂ ವಿಚಾರಣೆಗೆ ಒಳಪಡಿಸಿದ್ದಾರೆ.
ಪೊಲೀಸ್ ಪೇದೆ ನಾಗರಾಜ ಕೆಂಚಕ್ಕನವರ ಫೇಸ್‌ಬುಕ್ ಖಾತೆ ತೆರೆದು ಅದರಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ಬಗ್ಗೆ ಪೋಸ್ಟ್ ಮಾಡುತ್ತಿದ್ದ ಬಗ್ಗೆ ತನಿಖೆಯನ್ನು ಸೈಬರ್ ಕ್ರೈಂಗೆ ವಹಿಸಲಾಗಿದೆ. ಆತನೇ ಖಾತೆ ತೆರೆದಿದ್ದನೋ ಅಥವಾ ಇನ್ಯಾರೋ ತೆರೆದು ಪೋಸ್ಟ್ ಮಾಡುತ್ತಿದ್ದರೋ ಎಂಬುದನ್ನು ಸೈಬರ್ ಕ್ರೈಂನವರು ತನಿಖೆ ನಡೆಸಿ ವರದಿ ಕೊಡಲಿದ್ದಾರೆ. ನಂತರವಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಎಂ.ಎನ್. ನಾಗರಾಜ್, ಆಯುಕ್ತರು, ಹು-ಧಾ ಪೊಲೀಸ್