ಬೆಂಗಳೂರು: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಅವಾಸ್ ಯೋಜನೆ ಯಡಿ ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ
“ಸರ್ವರಿಗೂ ಸೂರು’ ಯೋಜನೆಯಡಿ ಕೋಟ್ಯಂತರ ರೂ. ಅವ್ಯವಹಾರ ನಡೆಯುತ್ತಿದ್ದು, ಈ ಬಗ್ಗೆ ಸಿಬಿಐ ತನಿಖೆ
ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಸರ್ವರಿಗೂ ಸೂರು ಯೋಜನೆಯಡಿ 2,500 ಕೋಟಿ ರೂ. ವೆಚ್ಚದಲ್ಲಿ 50 ಸಾವಿರ ಮನೆ ನಿರ್ಮಾಣ ಕೈಗೊಳ್ಳಲಾಗುತ್ತಿದ್ದು, ಪಾರದರ್ಶಕ ಕಾಯ್ದೆ ಪಾಲಿಸದೆ ಟೆಂಡರ್ ಕರೆದು ಶೇ. 10ರಷ್ಟು ಕಮಿಷನ್ ದಂಧೆ ನಡೆಸಲಾಗುತ್ತಿದೆ ಪ್ರತಿಪಕ್ಷ ನಾಯಕರಾದ ಜಗದೀಶ ಶೆಟ್ಟರ್ ಮತ್ತು ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಮಗಾರಿ ಕೈಗೊಳ್ಳುವ ಬಗ್ಗೆ ಮೊದಲು ಕರೆದಿರುವ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರೇ ಹೇಳಿ ಆ ಕುರಿತು ತನಿಖೆಗೆ ಸಮಿತಿ ರಚಿಸಿದ್ದರು. ಈ ಸಮಿತಿ ತನ್ನ ವರದಿ ನೀಡುವ ಮುನ್ನವೇ ಮತ್ತೆ ಕಾಯ್ದೆ ಉಲ್ಲಂಘಿಸಿ ಅಲ್ಪಾವಧಿ ಟೆಂಡರ್ ಕರೆದಿದ್ದು, ಅನರ್ಹರಿಗೆ ಎರಡನೇ ಟೆಂಡರ್‌ನಲ್ಲಿ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆಂದು ಆರೋಪಿಸಿದರು.