Advertisement

ಸಿಎಂ ವಿರುದ್ಧ ಕ್ರಮಕ್ಕೆ ಬಿಜೆಪಿ ಒತ್ತಾಯ

09:25 AM Sep 22, 2018 | |

ಶಿವಮೊಗ್ಗ: ಬಿಜೆಪಿ ವಿರುದ್ಧ ದಂಗೆಗೆ ಕರೆ ಕೊಟ್ಟಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ನಗರದ ಗೋಪಿವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾನಿರತರು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸಿದರಲ್ಲದೆ, ರಾಜ್ಯಪಾಲರು ಕುಮಾರಸ್ವಾಮಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

Advertisement

ಪ್ರತಿಭಟನಾ ಸಭೆಯಲ್ಲಿ ಶಾಸಕ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ರಾಜ್ಯದಲ್ಲಿ ಪ್ರಜಾಪ್ರಭುತ್ವ ಇದೆಯೇ ಎಂಬ ಅನುಮಾನ ಕಾಡುತ್ತಿದೆ. ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಜಾರಿಯಲ್ಲಿದೆ ಎಂದರೆ, ದಂಗೆ ಏಳಬೇಕೆಂದು ಕರೆ ನೀಡಿದ
ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. 

ಪಕ್ಷದ ಜಿಲ್ಲಾಧ್ಯಕ್ಷ ಎಸ್‌. ರುದ್ರೇಗೌಡ ಮಾತನಾಡಿ, ರಾಜ್ಯದ ರಕ್ಷಣೆ ಮಾಡಬೇಕಾದ ಮುಖ್ಯಮಂತ್ರಿಯೇ ದಂಗೆ ಏಳಬೇಕು ಎಂಬ ಹೇಳಿಕೆ ನೀಡಿರುವುದು ಖಂಡನೀಯ. ಅಲ್ಲದೆ, ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪರವರ ಮನೆ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರು ದಾಳಿ ನಡೆಸಿರುವುದು ಹೀನ ಕೃತ್ಯ. ಇದನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ. ರಾಜ್ಯಪಾಲರು ಇದನ್ನೆಲ್ಲಾ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.  ಪ್ರತಿಭಟನೆಯಲ್ಲಿ ಪ್ರಮುಖರಾದ ಎಂ.ಬಿ. ಭಾನುಪ್ರಕಾಶ್‌, ಡಿ.ಎಸ್‌. ಅರುಣ್‌, ಎಸ್‌. ದತ್ತಾತ್ರಿ, ಎಂ. ಶಂಕರ್‌, ಎನ್‌.ಜೆ. ರಾಜಶೇಖರ್‌, ಎನ್‌.ಜೆ. ನಾಗರಾಜ್‌, ಮಧುಸೂದನ್‌, ಹಿರಣ್ಣಯ್ಯ ಮತ್ತಿತರರು ಇದ್ದರು.

ಸಿಎಂ ದಂಗೆ ಹೇಳಿಕೆಗೆ ಆಕ್ರೋಶ
ಶಿಕಾರಿಪುರ:
ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಜನರನ್ನು ದಂಗೆ ಏಳಿಸುತ್ತೇನೆ ಎಂದು ಹೇಳಿರುವುದು ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿಯಾಗಿದೆ ಎಂದು ಆರೋಪಿಸಿ ತಾಲೂಕು ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್‌. ಗುರುಮೂರ್ತಿ ಮಾತನಾಡಿ, ಮುಖ್ಯಮಂತ್ರಿಗಳು ನಿರಾಸೆ ಹಾಗೂ ಆಡಳಿತ ವೈಫಲ್ಯದಿಂದ ಸಮ್ಮಿಶ್ರ ಸರ್ಕಾರದ ಸಂಕಷ್ಟಗಳಿಂದ ಬಿಜೆಪಿ ವಿರುದ್ಧ ಕೇವಲ ಮತ್ತು ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ವಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪನವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಯಡಿಯೂರಪ್ಪನವರು ತಂದೆಯ ಹೆಸರು ಹೇಳಿಕೊಂಡು ರಾಜಕಾರಣದಲ್ಲಿ ಮೇಲೆ ಬಂದವರಲ್ಲ ಎಂದರು.

Advertisement

ತಾಲೂಕು ಬಿಜೆಪಿ ಅಧ್ಯಕ್ಷ ಕೆ. ರೇವಣಪ್ಪ ಮಾತನಾಡಿ, ಮುಖ್ಯಮಂತ್ರಿಗಳ ಬೆದರಿಕೆಗೆ ಬಿಜೆಪಿ ಜಗ್ಗುವುದಿಲ್ಲ ಎಂದರು. ತಾಪಂ ಅಧ್ಯಕ್ಷ ಕವಲಿ ಸುಬುಮಣ್ಯ, ಎಪಿಎಂಸಿ ಅಧ್ಯಕ್ಷ ಸತೀಶ ತಾಳಗುಂದ, ಟಿ.ಎ.ಪಿ.ಎಂ. ಎಸ್‌.ನ ಶಶಿಧರ, ಎಂ.ಬಿ. ಚನ್ನವೀರಪ್ಪ, ನ್ಯಾಮತಿ ಸಿದ್ದಣ್ಣ, ಎಂ.ಬಿ. ಶಿವಕುಮಾರ, ಕೆ.ಸಿ. ಗುರುಪ್ರಸಾದ್‌ ದೀಕ್ಷಿತ್‌, ಡಿ.ಎಲ್‌. ಬಸವರಾಜು, ಪ್ರವೀಣ್‌ ಶೆಟ್ಟಿ, ಮಹಿಳಾ ಮೋರ್ಚಾದ ಶುಭಾ, ಅರುಂಧತಿ, ಗಾಯತ್ರಿ ಮಲ್ಲಪ್ಪ ಮತ್ತಿತರರು ಇದ್ದರು. 

ಬಿಜೆಪಿ ಆಕ್ರೋಶ
ಹೊಸನಗರ: ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ ಅಸಂವಿಧಾನಿಕ ಹೇಳಿಕೆಯನ್ನು ಖಂಡಿಸಿ ತಾಲೂಕು ಬಿಜೆಪಿ ಹಾಗೂ ಯುವ ಮೋರ್ಚಾ ವತಿಯಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಲಾಯಿತು.

ನಂತರ ಬಸ್‌ ನಿಲ್ದಾಣದ ಆವರಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಉಮೇಶ ಕಂಚುಗಾರ್‌ ಮಾತನಾಡಿ, ತಮ್ಮದೇ ಆಂತರಿಕ ಕಲಹದಿಂದ ರಾಜ್ಯ ಸಮ್ಮಿಶ್ರ ಸರ್ಕಾರ ಬೀಳಲಿದೆ. ಇದಕ್ಕೆ ಬಿಜೆಪಿಯನ್ನು ತಳುಕು ಹಾಕುವುದು ಯಾವ ನ್ಯಾಯ ಎಂದರು.

ಸರ್ಕಾರ ಕೆಡವಿದರೆ “ದಂಗೆ’ ಎಬ್ಬಿಸುವುದಾಗಿ ಹೇಳಿಕೆ ನೀಡಿರುವ ಮುಖ್ಯಮಂತ್ರಿಗಳನ್ನು ರಾಜ್ಯಪಾಲರು ಬಂಧಿಸುವ ಆದೇಶ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.  ಯಾವುದೇ ತಾತ್ವಿಕ ನೆಲೆಗಟ್ಟು ಇಲ್ಲದೆ, ಕೇವಲ ಅಧಿಕಾರಕ್ಕೋಸ್ಕರ ಆದ ಕಾಂಗ್ರೆಸ್‌- ಜೆಡಿಸ್‌ ಮೈತ್ರಿ ಹೆಚ್ಚು ದಿನ ಉಳಿಯುವುದಿಲ್ಲ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು ಎಂದು ಕುಟುಕಿದರು.

ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಎ.ವಿ. ಮಲ್ಲಿಕಾರ್ಜುನ್‌, ಪ್ರಮುಖರಾದ ಬಿ. ಯುವರಾಜ, ಎನ್‌.ಆರ್‌. ದೇವಾನಂದ್‌, ಗಿರೀಶ, ಮಾಧ್ಯಮ ಪ್ರಮುಖ ತೀರ್ಥೇಶ ಮತ್ತಿತರರು ಇದ್ದರು 

Advertisement

Udayavani is now on Telegram. Click here to join our channel and stay updated with the latest news.

Next