ಬೆಂಗಳೂರು: ಬಿಜೆಪಿ ಪಕ್ಷದ ಆಣೆಕಟ್ಟು ಒಡೆದಿದ್ದು, ಅದರ ನಾಯಕರೆಲ್ಲರೂ ನೀರಿನಂತೆ ಹರಿದು ಬರುತ್ತಿರುವುದಕ್ಕೆ ಮೂರು ಬಾರಿ ಶಾಸಕರಾಗಿದ್ದ ವಿಶ್ವನಾಥ್ ಪಾಟೀಲ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿರುವುದೇ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಜೆಪಿಗೆ ಕುಟುಕಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ನಾಯಕ ಶಿವಾನಂದ ಪಾಟೀಲ್, ಅರವಿಂದ ಚೌಹಾಣ್ ಸೇರಿದಂತೆ ಅನೇಕ ನಾಯಕರನ್ನು ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡರು. ಈ ಸಂದರ್ಭದಲ್ಲಿ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಡಿಕೆಶಿ, ಬಿಜಾಪುರ, ಕಲ್ಯಾಣ ಕರ್ನಾಟಕದ ಅನೇಕ ನಾಯಕರು ಕಾಂಗ್ರೆಸ್ ತತ್ವ, ಸಿದ್ಧಾಂತಗಳನ್ನು ಒಪ್ಪಿ ಪಕ್ಷ ಸೇರಲು ಬಯಸಿದ್ದಾರೆ. ಹೀಗಾಗಿ ನಾನು ವಿವಿಧ ಮೂಲೆಯ ಜಿಲ್ಲಾ ಹಾಗೂ ಬ್ಲಾಕ್ ಘಟಕಗಳು ಸ್ಥಳೀಯ ಮಟ್ಟದಲ್ಲಿ ಅನ್ಯ ಪಕ್ಷಗಳ ನಾಯಕರ ಸೇರ್ಪಡೆಗೆ ಅನುಮತಿ ನೀಡಿದ್ದೇನೆ. ರಾಜ್ಯದಲ್ಲಿ ಈಗ ಬದಲಾವಣೆಯ ಕಾಲ ಬರುತ್ತಿದ್ದು, ಇದು ನಿಮ್ಮ ಕಾಲ. ಭ್ರಷ್ಟಾಚಾರ ಬಡಿದೋಡಿಸುವ ಕಾಲ ಬಂದಿದ್ದು ಈ ಬದಲಾವಣೆ ಸಮಯದಲ್ಲಿ ಎಲ್ಲರೂ ನಮ್ಮ ಜತೆ ಕೈ ಜೋಡಿಸಬೇಕು ಎಂದರು.
ಇದನ್ನೂ ಓದಿ:ಹೈಟೆಕ್ ವೇಶ್ಯಾವಾಟಿಕೆ ದಂಧೆ ಬೇಧಿಸಿದ ಮುಂಬೈ ಪೊಲೀಸರು: ಖ್ಯಾತ ನಟಿಯ ಬಂಧನ
ಚಿತ್ತಾಪುರ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿದ್ದ ವಿಶ್ವನಾಥ ಪಾಟೀಲ್ ಅವರು ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಇವರ ಜತೆಗೆ ಜಿಲ್ಲಾ ಪಂಚಾಯ್ತಿಯಲ್ಲಿ ವಿವಿಧ ಸ್ಥಾನಗಳಲ್ಲಿ ಕೆಲಸ ಮಾಡಿದ್ದ ಅರವಿಂದ್ ಚೌಹಾಣ್ ಅವರು ಸೇರಿದಂತೆ ಅನೇಕ ನಾಯಕರು, ಮುಖಂಡರು ಇಂದು ಪಕ್ಷ ಸೇರುತ್ತಿದ್ದಾರೆ. ಈ ಎಲ್ಲಾ ನಾಯಕರನ್ನು ನಾವು ಹೃದಯ ಪೂರ್ವಕವಾಗಿ ಪಕ್ಷಕ್ಕೆ ಸ್ವಾಗತಿಸುತ್ತೇವೆ. ಇವರ ಸೇರ್ಪಡೆಯಿಂದ ಈ ಭಾಗದಲ್ಲಿ ಪಕ್ಷಕ್ಕೆ ಹೆಚ್ಚಿನ ಶಕ್ತಿ ಸಿಕ್ಕಿದೆ ಎಂದರು.
ಬಿಜೆಪಿ, ಮುಖ್ಯಮಂತ್ರಿಗಳ ಕಚೇರಿಯಿಂದ ಅಧಿಕಾರ ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಲು ಷಡ್ಯಂತ್ರ ನಡೆಯುತ್ತಿದೆ. ಚುನಾವಣಾ ಆಯೋಗ ಮುಖ್ಯಮಂತ್ರಿ ಕಚೇರಿಯ ದೂರವಾಣಿ ಕರೆ ಪಟ್ಟಿ ತರೆಸಿಕೊಳ್ಳಬೇಕು. ಸದತ್ತಿ ಯೆಲ್ಲಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಮಪತ್ರದಲ್ಲಿ ದೋಷವಿದ್ದರೂ ಅದನ್ನು ತಿದ್ದಲು ಮುಖ್ಯಮಂತ್ರಿ ಕಚೇರಿಯಿಂದ ಚುನಾವಣಾಧಿಕಾರಿಗಳಿಗೆ ಕರೆ ಮಾಡಿ ಒತ್ತಡ ಹೇರಲಾಗುತ್ತಿದೆ. ನನ್ನ ನಾಮಪತ್ರವನ್ನೇ ತಿರಸ್ಕರಿಸಲು ಬಿಜೆಪಿ ತಂಡ ಪ್ರಯತ್ನಿಸಿದ್ದರು. ಚುನಾವಣಾ ಆಯೋಗ ಈ ಅಧಿಕಾರ ದುರುಪಯೋಗ ಗಮನಿಸಬೇಕು. ಒತ್ತಡಕ್ಕೆ ಮಣಿಯದೆ ಅರ್ಹರಿಗೆ ಸ್ಪರ್ಧೆಗೆ ಅವಕಾಶ ನೀಡಬೇಕು. ಬಿಜೆಪಿ ಅಭ್ಯರ್ಥಿಗಳ ದೋಷಪೂರಿತ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಡಿಕೆ ಶಿವಕುಮಾರ್ ಹೇಳಿದರು.