Advertisement

ಬಿಜೆಪಿ ಗುರಿ ನೂರೈವತ್ತು : ಕಾರ್ಯಕಾರಿಣಿಯಲ್ಲಿ ಸಿಎಂ ಘೋಷಣೆ

11:31 PM Apr 16, 2022 | Team Udayavani |

ಹೊಸಪೇಟೆ/ಬೆಂಗಳೂರು: ರಾಜ್ಯದಲ್ಲಿ ಪರಿಣಾಮಕಾರಿ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ವಿಶ್ವಾಸ ಗಳಿಸಿ ಮುಂದಿನ ಚುನಾವಣೆ ಗೆಲ್ಲುವತ್ತ ಕಾರ್ಯೋನ್ಮುಖವಾಗಲು ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿ ತೀರ್ಮಾನಿಸಿದೆ.

Advertisement

ವಿಪಕ್ಷಗಳ ಟೀಕೆಗಳಿಗೆ ತನ್ನ ಕಾರ್ಯದ ಮೂಲಕವೇ ಉತ್ತರಿಸಿ, ಪಕ್ಷವನ್ನು ಮತ್ತೂಮ್ಮೆ ಅಧಿಕಾರಕ್ಕೆ ತರಲು 150 ಸ್ಥಾನಗಳ ಗುರಿ ತಲುಪುವ ಸಂಕಲ್ಪ ತೊಡಲಾಗಿದೆ.

ಕಾರ್ಯಕಾರಿಣಿ ಉದ್ಘಾಟಿಸಿದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದರು. ರಿಪೋರ್ಟ್‌ ಕಾರ್ಡ್‌ ಮೂಲಕ 2023ರ ವಿಧಾನಸಭೆ ಚುನಾವಣೆಗೆ ಹೋಗಲಿದ್ದೇವೆ. ಸಕಾರಾತ್ಮಕ ಅಲೆಯಿಂದ ಬಿಜೆಪಿ ಮತ್ತೆ ಗೆಲುವು ಸಾಧಿಸಲಿದೆ. ಈ ಸಂಕಲ್ಪ ಮತ್ತು ವಿಜಯದ ಯಾತ್ರೆ ವಿಜಯನಗರದ ಈ ಪುಣ್ಯಭೂಮಿಯಿಂದ ಆರಂಭವಾಗುತ್ತಿದೆ ಎಂದು ಘೋಷಿಸಿದರು.

ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್‌ಗೆ ದಿಕ್ಕು ತೋಚುತ್ತಿಲ್ಲ. ಹಿಜಾಬ್‌ ವಿಚಾರದಲ್ಲಿ ಗೊಂದಲ ಮಾಡಿದವರ ಕುರಿತು ಮಾತನಾಡುವ ಧೈರ್ಯ ಕಾಂಗ್ರೆಸ್‌ಗೆ ಇಲ್ಲ. ಯುವಕನ ಆತ್ಮಹತ್ಯೆ ಪ್ರಕರಣವನ್ನು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ನಿಮ್ಮ ಕಾಲದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ವೀಡಿಯೋ ದಲ್ಲಿ ಸಚಿವರ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿ ದ್ದರು. ಆದರೂ ಸಚಿವರು ಕೂಡಲೇ ರಾಜೀನಾಮೆ ಕೊಡಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಕೈ ಭ್ರಷ್ಟಾಚಾರದ ಗಂಗೋತ್ರಿ
ಕಾಂಗ್ರೆಸ್‌ ಭ್ರಷ್ಟಾಚಾರದ ಗಂಗೋತ್ರಿಯಂತಿದೆ. ಬಿಡಿಎ ಹಗರಣ, ಸ್ಟೀಲ್‌ ಬ್ರಿಡ್ಜ್ ಸೇರಿದಂತೆ ಕಾಂಗ್ರೆಸ್‌ ಹಗರಣಗಳು ಇನ್ನೂ ಜನರಿಗೆ ನೆನಪಿವೆ. ರಾಜ್ಯದಲ್ಲೂ ಕಾಂಗ್ರೆಸ್‌ ನೆಲಕಚ್ಚಲಿದೆ. ಕಾಂಗ್ರೆಸ್‌ನವರೇನು ಬಹಳ ಶುದ್ಧಹಸ್ತದವರೇ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು. ಎಲ್ಲ ಪ್ರಕರಣಗಳಲ್ಲೂ ಸತ್ಯ ಹೊರಕ್ಕೆ ಬರಲಿದೆ. ಕಾಂಗ್ರೆಸಿಗರ ಮುಖವಾಡ ಕಳಚಿ ಬೀಳಲಿದೆ. ಕಾಂಗ್ರೆಸ್‌ ಮುಖಂಡರ ಕಪಾಟಿನಲ್ಲಿ ಭ್ರಷ್ಟಾಚಾರದ ಅಸ್ಥಿಪಂಜರಗಳಿವೆ ಎಂದು ಟೀಕಿಸಿದರು.

Advertisement

ದಿಲ್ಲಿಯಲ್ಲಿ ಮೋದಿಜಿ ನೇತೃತ್ವದಲ್ಲಿ ಕೇಂದ್ರ ಸರಕಾರ ಆಡಳಿತ ನಡೆಸುತ್ತಿದ್ದು, ದೇಶದ ಬಗ್ಗೆ ವಿಶ್ವದಾದ್ಯಂತ ಗೌರವ ಹೆಚ್ಚಾಗಿದೆ. ದೇಶವು ಆರ್ಥಿಕ- ಸಾಮಾಜಿಕ ಕ್ರಾಂತಿ ಮಾಡುತ್ತಿದೆ. ರೈತರಿಗಾಗಿರುವ ಕಿಸಾನ್‌ ಸಮ್ಮಾನ್‌ ಯೋಜನೆ 60 ಕೋಟಿ ಜನರನ್ನು ತಲುಪುತ್ತಿದೆ. ಆಯುಷ್ಮಾನ್‌ ಭಾರತವು ಜನರ ಆರೋಗ್ಯ ಕವಚವಾಗಿ ಹೊರಹೊಮ್ಮಿದೆ. ಯುವಕರಿಗೆ ಕೆಲಸ ನೀಡುವ ಹಲವಾರು ಯೋಜನೆಗಳು ಆಶಾದಾಯಕವಾಗಿ ಕೆಲಸ ಮಾಡುತ್ತಿವೆ ಎಂದರು.

ರಾಜ್ಯದ ಆದಾಯ ಹೆಚ್ಚಾಗಿದ್ದು, ಗುರಿ ಮೀರಿ 15 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚು ಆದಾಯ ಲಭಿಸು ತ್ತಿದೆ. 11 ಸಾವಿರ ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹ ಹೆಚ್ಚಾಗಿದೆ. ಕೇಂದ್ರದಿಂದ 9 ಸಾವಿರ ಕೋಟಿ ರೂ. ಗಿಂತ ಹೆಚ್ಚು ಅನುದಾನ ಲಭಿಸಿದೆ. ಕಳೆದ ವರ್ಷಕ್ಕಿಂತ 19 ಸಾವಿರ ಕೋಟಿ ರೂ. ಹೆಚ್ಚಳದ ಬಜೆಟ್‌ ಸಾಧ್ಯವಾಗಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗುತ್ತಿದೆ. 57 ಲಕ್ಷ ಜನರ ಪಿಂಚಣಿ ಹೆಚ್ಚಿಸಿದ್ದೇವೆ ಎಂದರು.

ಭವ್ಯ ಭವಿಷ್ಯದ ನಿರ್ಣಯ
ದೇಶದೆಲ್ಲೆಡೆ ಜನಮಾನಸದಲ್ಲಿ ಬಿಜೆಪಿ ಶಾಶ್ವತ ಸ್ಥಾನಮಾನ ಪಡೆದಿದೆ. ಹಿಂದೆ ಬಿಜೆಪಿ ಬಗ್ಗೆ ಅಪಪ್ರಚಾರ ನಡೆಯುತ್ತಿತ್ತು. ಕೇಂದ್ರದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್‌ನ ಮತಬ್ಯಾಂಕ್‌ ರಾಜಕೀಯ, ಸಮಾಜ ಒಡೆಯುವ ಪ್ರವೃತ್ತಿ, ದೇಶ ಶಿಥಿಲಗೊಳಿಸುವ ರಾಜಕೀಯ ಜನರ ಅರಿವಿಗೆ ಬಂತು. ಸರ್ವರ ಏಳಿಗೆಗಾಗಿ ಜನರು ಈಗ ಎಲ್ಲೆಡೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ವಿಜಯನಗರ ಸಾಮ್ರಾಜ್ಯವು ಪರಕೀಯರ ಆಕ್ರಮಣವನ್ನು ತಡೆದು ನಿಲ್ಲಿಸಿ ಹಿಂದೂಗಳ ರಕ್ಷಣೆ ಮಾಡಿದ ಭೂಮಿ. ಈ ಭೂಮಿಯು ಅತ್ಯಂತ ಗಟ್ಟಿ ಮತ್ತು ಸುರಕ್ಷಿತ ಪ್ರದೇಶ. ಈ ಭೂಮಿಯಲ್ಲಿ ಮಾಡಿದ ಸಂಕಲ್ಪವು ಗಟ್ಟಿಯಾಗಿ ನಿಲ್ಲಲಿದೆ. ಇಲ್ಲಿ ಕಾರ್ಯಕಾರಿಣಿ ನಡೆಯುತ್ತಿರುವುದು ಪುಣ್ಯ ಎಂದರು. ಬಿಜೆಪಿ ವಿಚಾರಧಾರೆಗೆ ಸ್ಫೂರ್ತಿ ಕೊಟ್ಟ ಸ್ಥಳವಿದು. ಇಲ್ಲಿನ ನಿರ್ಣಯಗಳು ರಾಜ್ಯದ ಭವ್ಯ ಭವಿಷ್ಯ ಬರೆಯಲಿವೆ ಎಂದರು.

ಕಾಂಗ್ರೆಸ್‌
ಮುಂದಿನ ಚುನಾವಣೆ ಯಲ್ಲಿ ನೆಲ ಕಚ್ಚಲಿದೆ. ನಾವು 2023ರ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಮತ್ತೆ ಸರಕಾರ ರಚಿಸಲಿದ್ದೇವೆ.
-ಅರುಣ್‌ ಸಿಂಗ್‌, ಬಿಜೆಪಿ ರಾಜ್ಯ ಉಸ್ತುವಾರಿ

ರಾಜ್ಯದ ಮುಂದಿನ ಗೆಲುವು ದಕ್ಷಿಣ
ಭಾರತಕ್ಕೆ ಒಂದು ಸಂದೇಶ ನೀಡಲಿದೆ. ರಾಜ್ಯದಲ್ಲಿ ಬಿಜೆಪಿ ಬೆಳೆದಿದೆ, ಬೆಳಗುತ್ತಿದೆ.

– ನಳಿನ್‌ ಕುಮಾರ್‌ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ

ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಧಾನಿ ಮೋದಿ ಹೆಸರೊಂದೇ ಸಾಲದು. ಪ್ರತಿಯೊಬ್ಬರೂ ಪಕ್ಷ ಸಂಘಟನೆಯ ಕೆಲಸ ಮಾಡಬೇಕು.

-ಬಿ.ಎಲ್‌. ಸಂತೋಷ್‌, ಬಿಜೆಪಿ ರಾ. ಸಂಘಟನ ಪ್ರ. ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next