Advertisement

POLITICS: ಇಂದು BJP ಕೋರ್‌ ಕಮಿಟಿ ಸಭೆ- ಲೋಕಸಭೆ ಚುನಾವಣೆ ಕಾರ್ಯತಂತ್ರ

09:33 PM Aug 20, 2023 | Team Udayavani |

ಬೆಂಗಳೂರು: ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಸೂಕ್ತ ಸಾರಥಿ ಇಲ್ಲದೆ ಬಸವಳಿದಿರುವ ರಾಜ್ಯ ಬಿಜೆಪಿ ಘಟಕ “ಆಪರೇಷನ್‌ ಹಸ್ತ’ದ ಸಾಧ್ಯತೆ ಹೆಚ್ಚಿರುವ ಬೆನ್ನಲ್ಲೇ ಸೋಮವಾರ ಮಹತ್ವದ ಕೋರ್‌ ಕಮಿಟಿ ಸಭೆ ಕರೆದಿದೆ. ಲೋಕಸಭಾ ಚುನಾವಣೆ ತಂತ್ರಗಾರಿಕೆ ಸಹಿತ ಅನೇಕ ವಿಚಾರಗಳ ಬಗ್ಗೆ ಇಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.

Advertisement

ವಿಧಾನಸಭೆ ಚುನಾವಣೆಯ ಬಳಿಕ ಮೊದಲ ಬಾರಿಗೆ ನಡೆಯುತ್ತಿರುವ ಕೋರ್‌ ಕಮಿಟಿ ಸಭೆ ಇದು. ಸೋಮವಾರ ಬೆಳಗ್ಗೆ 11 ಗಂಟೆಗೆ ಬಿಜೆಪಿ ಕಾರ್ಯಾಲಯದಲ್ಲಿ ಸಭೆ ನಡೆಯಲಿದ್ದು, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಕೆ.ಎಸ್‌. ಈಶ್ವರಪ್ಪ, ಸಿ.ಟಿ. ರವಿ ಮತ್ತು ಕೋರ್‌ ಕಮಿಟಿಯ ಹಾಲಿ ಎಲ್ಲ ಸದಸ್ಯರು ಭಾಗವಹಿಸಲಿದ್ದಾರೆ.

ಆ. 23ರಂದು ರಾಜ್ಯ ಸರಕಾರದ ವಿರುದ್ಧ ಬೃಹತ್‌ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಇದರ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ಮತ್ತೂಮ್ಮೆ ಚರ್ಚಿಸಲಾಗುತ್ತದೆ. ಜತೆಗೆ ಲೋಕಸಭಾ ಚುನಾವಣ ತಯಾರಿ ಬಗ್ಗೆ ಪ್ರಸ್ತಾವವಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆಪರೇಷನ್‌ ಹಸ್ತದ ಭಯ ಪಕ್ಷವನ್ನು ಕಾಡುತ್ತಿದ್ದು, ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಬಗ್ಗೆ ಹಾಗೂ ಕಾಂಗ್ರೆಸ್‌ನ ತಂತ್ರಗಾರಿಕೆಗೆ ತಿರುಗೇಟು ನೀಡುವ ಬಗ್ಗೆ ಚರ್ಚೆಯಾಗಲಿದೆ.

ಸಂಧಾನ?

ಈ ನಡುವೆ ಕೆಲವು ಲೋಕಸಭಾ ಸದಸ್ಯರು ಹಾಗೂ ಶಾಸಕರ ಮಧ್ಯೆ ಸೃಷ್ಟಿಯಾಗಿರುವ ವೈಮನಸ್ಸು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂಬ ಭಯ ರಾಜ್ಯ ನಾಯಕರನ್ನು ಕಾಡುತ್ತಿದೆ. ಹೀಗಾಗಿ ಸಂಧಾನ ಪ್ರಕ್ರಿಯೆ ನಡೆಸಲು ನಿರ್ಧರಿಸಿದ್ದಾರೆ. ಬೀದರ್‌, ಮೈಸೂರು, ದಾವಣಗೆರೆ ಸೇರಿ ಐದಾರು ಲೋಕಸಭಾ ಕ್ಷೇತ್ರಗಳಲ್ಲಿ ಈ ಸಮಸ್ಯೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಸಂಧಾನಕ್ಕೆ ಮುಂದಾಗಿದ್ದಾರೆ.

Advertisement

ಕೋರ್‌ ಕಮಿಟಿ ಸಭೆ ಬಳಿಕ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಮಾಜಿ ಸಚಿವ ಪ್ರಭು ಚೌಹಾಣ್‌ ಅವರನ್ನು ಪಕ್ಷದ ಕಚೇರಿಗೆ ಬರುವಂತೆ ಜೋಷಿ ಕರೆ ನೀಡಿದ್ದಾರೆ. ಇಬ್ಬರನ್ನು ಜತೆಗೆ ಕುಳ್ಳಿರಿಸಿ ಸಂಧಾನ ನಡೆಸುವ ಬಗ್ಗೆ ಜೋಷಿ ಯೋಜನೆ ರೂಪಿಸಿದ್ದು, ಮಾತುಕತೆ ಬಳಿಕ ಕೇಂದ್ರಕ್ಕೆ ವರದಿ ಕಳುಹಿಸುವ ಸಾಧ್ಯತೆ ಇದೆ. ಆದರೆ ಮೂಲಗಳ ಪ್ರಕಾರ ಖೂಬಾ-ಚೌಹಾಣ್‌ ಮಧ್ಯೆ ಪರಸ್ಪರ ಮುಖ ನೋಡದಂಥ ವಾತಾವರಣ ಸೃಷ್ಟಿಯಾಗಿದ್ದು, ಯಾರಾದರೊಬ್ಬರು ಸಭೆಗೆ ಗೈರಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next