ಹುಬ್ಬಳ್ಳಿ: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಫೆ.10ರಂದು ಸಂಜೆ 4 ಗಂಟೆಗೆ ನಗರದಲ್ಲಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ, ಧಾರವಾಡ, ಹಾವೇರಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳನ್ನೊಳ ಗೊಂಡ ಕಾರ್ಯಕ್ರಮ ಆಯೋಜಿಸಲಾಗಿದೆ. 24 ವಿಧಾನಸಭಾ ಕ್ಷೇತ್ರದ ಪಕ್ಷದ ಶಾಸಕರು, ಮಾಜಿ ಶಾಸಕರು ಪಾಲ್ಗೊಳ್ಳಲಿದ್ದು, 3 ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಕಾರ್ಯಕ್ರಮದ ಯಶಸ್ಸಿಗಾಗಿ 33 ಸಮಿತಿ ರಚಿಸಲಾಗಿದೆ ಎಂದರು. ರಾಜ್ಯದಲ್ಲಿ ಮೊದಲ ಚುನಾವಣಾ ಪ್ರಚಾರ ಕಾರ್ಯಕ್ರಮ ಇದಾಗಿದ್ದು, ಫೆ.17 ರಂದು ಕಲಬುರಗಿಯಲ್ಲಿ ಎರಡನೇ ಕಾರ್ಯ ಕ್ರಮ ನಡೆಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಮೂರು ದಿನ ನೀಡಿದ್ದಾರೆ. ಹೀಗಾಗಿ, ಇನ್ನೊಂದು ಸಭೆಯ ಸ್ಥಳ ಹಾಗೂ ದಿನಾಂಕವನ್ನು ಶೀಘ್ರವೇ ನಿರ್ಧರಿಸಲಾಗುವುದು. ಈ ಸಂದರ್ಭದಲ್ಲಿ ಯಾವುದೇ ಅನ್ಯ ಪಕ್ಷದ ಶಾಸಕರು ನಮ್ಮ ಪಕ್ಷ ಸೇರುವ ಕಾರ್ಯಕ್ರಮ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಫೆ.19 ಹಾಗೂ 27ರಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದಲ್ಲಿ ಪ್ರಚಾರಾರ್ಥ ಪ್ರವಾಸ ಕೈಗೊಳ್ಳಲಿದ್ದು, ಸ್ಥಳ ನಿಗದಿಯಾಗಿಲ್ಲ. 21 ಕ್ಷೇತ್ರ ಗಳಲ್ಲಿ ಗೆಲುವು ಸಾಧಿಸಬೇಕು ಎನ್ನುವ ಗುರಿಯಿದೆ. ಕೇಂದ್ರದ ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟುಕೊಂಡು ಈ ಬಾರಿ ಚುನಾವಣೆಗೆ ಹೋಗುತ್ತಿದ್ದೇವೆ. ಕೇಂದ್ರ ಸರ್ಕಾರ ಅಭೂತಪೂರ್ವ ಆಯವ್ಯಯ ಮಂಡಿಸಿದ್ದು, ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
ಅಧಿವೇಶನದೊಳಗೆ ಸರ್ಕಾರ ಬಣ್ಣ ಬಯಲು
ಹುಬ್ಬಳ್ಳಿ: ಜೆಡಿಎಸ್-ಕಾಂಗ್ರೆಸ್‌ನ ಮೈತ್ರಿ ಸರ್ಕಾರದಲ್ಲಿ ಏನೆಲ್ಲಾ ನಡೆದಿದೆ ಎಂಬುದು ಅಧಿವೇಶನ ಆರಂಭವಾಗುವುದಕ್ಕೂ ಮೊದಲೇ ಜನತೆಗೆ ಸ್ಪಷ್ಟವಾಗಿ ಗೊತ್ತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು. ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದ ಒಳಜಗಳ ನಿರಂತರವಾಗಿ ನಡೆದಿದೆ. ಈ ಸರ್ಕಾರದಲ್ಲಿ ಹೊಂದಾಣಿಕೆ ಎನ್ನುವುದೇ ಇಲ್ಲ. ಪರಸ್ಪರ ಅಸಮಾಧಾನ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಸರ್ಕಾರ ಇದೆಯೋ, ಇಲ್ಲವೋ ಎಂಬಂತಾಗಿದೆ. ಹೀಗಾಗಿ, ಅಧಿವೇಶನ ನಡೆಯುವುದೋ, ಇಲ್ಲವೋ ಎಂಬುದನ್ನು ಕಾಂಗ್ರೆಸ್‌ನವರೇ ರಾಜ್ಯದ ಜನತೆಗೆ ಹೇಳಬೇಕಾಗಿದೆ. ಫೆ.6ರಂದು ಅಧಿವೇಶನ ಆರಂಭವಾಗುವುದರೊಳಗೆ ಈ ಮೈತ್ರಿ ಸರ್ಕಾರದ ಬಣ್ಣ ಬಯಲಾಗಲಿದೆ ಎಂದರು.
ಬರ ಅಧ್ಯಯನ ವರದಿ ಸದನದಲ್ಲಿ ಪ್ರಸ್ತಾಪ
ಶಿವಮೊಗ್ಗ: ಬಿಜೆಪಿ ಶಾಸಕರು, ಮುಖಂಡರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿ ವರದಿ ನೀಡಿದ್ದಾರೆ. ಬರ ಪೀಡಿತ ಪ್ರದೇಶಗಳ ಸ್ಥಿತಿಗತಿ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿ ಯೂರಪ್ಪ ತಿಳಿಸಿದರು. ಸುದ್ದಿ ಗಾರರೊಂದಿಗೆ ಮಾತನಾಡಿ, ಫೆ.6 ರಂದು ರಾಜ್ಯಪಾಲರು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆ ವೇಳೆ ಬರ ಅಧ್ಯಯನದ ಪ್ರಸ್ತಾಪ ಮಾಡಲಾಗುವುದು ಎಂದರು. ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಚರ್ಚೆಗಳು ನಡೆಯುತ್ತಿದ್ದು, ಅನೇಕರ ಹೆಸರು ಪ್ರಸ್ತಾಪವಾಗುತ್ತಿದೆ. ಆದರೆ, ಸಭೆ ಕರೆದು ಅಂತಿಮವಾಗಿ ನಿರ್ಧರಿಸಲಾಗುವುದು ಎಂದರು. ಕೇಂದ್ರ ಸರಕಾರ ಈ ಬಾರಿಯ ಬಜೆಟ್‌ನಲ್ಲಿ ರೈತರು, ಕಾರ್ಮಿಕರು, ಸರಕಾರಿ ಉದ್ಯೋಗಿಗಳಿಗೆ ಉತ್ತಮ ಯೋಜನೆ ಘೋಷಿಸಿದೆ. ಇದೊಂದು ಐತಿಹಾಸಿಕ ಬಜೆಟ್ ಎಂದು ತಿಳಿಸಿದರು.