Advertisement

ಜರ್ಮನಿ ಹಸ್ತಕ್ಷೇಪ: ಬಿಜೆಪಿ-ಕಾಂಗ್ರೆಸ್‌ ವಾಕ್ಸಮರ

12:31 AM Mar 31, 2023 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಅನರ್ಹತೆಗೆ ಸಂಬಂಧಿಸಿ ಅಮೆರಿಕದ ಬಳಿಕ ಈಗ ಜರ್ಮನಿಯೂ ಪ್ರತಿಕ್ರಿಯಿಸಿದೆ. ಜರ್ಮನಿ ವಿದೇಶಾಂಗ ಇಲಾಖೆಯಿಂದ ಹೇಳಿಕೆ ಹೊರ ಬೀಳುತ್ತಿದ್ದಂತೆಯೇ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಗ್ಯುದ್ಧ ತೀವ್ರಗೊಂಡಿದೆ.

Advertisement

“ರಾಹುಲ್‌ಗಾಂಧಿಯವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಭಾರತದಲ್ಲಿ ಪ್ರಜಾಸತ್ತೆಯೊಂದಿಗೆ ಹೇಗೆ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ನಾವು ಗಮನಿಸುತ್ತಿದ್ದೇವೆ’ ಎಂದು ಗುರುವಾರ ಜರ್ಮನಿ ವಿದೇಶಾಂಗ ಇಲಾಖೆ ಟ್ವೀಟ್‌ ಮಾಡಿತ್ತು. ಇದನ್ನು ಹಂಚಿಕೊಂಡ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಅವರು ಜರ್ಮನಿಗೆ ಧನ್ಯವಾದ ತಿಳಿಸಿದ್ದರು.

ಇದಾದ ಕೂಡಲೇ ಬಿಜೆಪಿ ನಾಯಕರು, ಕೇಂದ್ರದ ಹಲವು ಸಚಿವರು ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದರು. ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವಂತೆ ವಿದೇಶಗಳಿಗೆ ಕಾಂಗ್ರೆಸ್‌ ಆಹ್ವಾನ ನೀಡುತ್ತಿದೆ ಎಂದು ಆರೋಪಿಸಿದರು. “ನೆನಪಿಡಿ, ವಿದೇಶಿ ಹಸ್ತಕ್ಷೇಪವು ಭಾರತದ ನ್ಯಾಯಾಂಗದ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ. ವಿದೇಶಿ ಪ್ರಭಾವವನ್ನು ಭಾರತ ಸಹಿಸುವುದಿಲ್ಲ. ಏಕೆಂದರೆ, ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಂಬುದನ್ನು ಮರೆಯಬೇಡಿ’ ಎಂದು ಕೇಂದ್ರ ಸಚಿವ ರಿಜಿಜು ಟ್ವೀಟ್‌ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ನಾಯಕ ಪವನ್‌ ಖೇರಾ, “ರಿಜಿಜು ಅವರೇ, ಮುಖ್ಯ ವಿಚಾರದಿಂದ ಜನರ ಹಾದಿ ತಪ್ಪಿಸುತ್ತಿರುವುದೇಕೆ? ಇಲ್ಲಿ ವಿಷಯ ಇರುವುದು ಅದಾನಿಗೆ ಸಂಬಂಧಿಸಿದ ರಾಹುಲ್‌ ಪ್ರಶ್ನೆಗೆ ಪ್ರಧಾನಿ ಮೋದಿ ಉತ್ತರಿಸುತ್ತಿಲ್ಲ ಎನ್ನುವುದು. ಜನರನ್ನು ದಾರಿತಪ್ಪಿಸುವ ಬದಲು ಪ್ರಶ್ನೆಗಳಿಗೆ ಉತ್ತರ ಕೊಡಿ’ ಎಂದರು.

ಕಾಂಗ್ರೆಸ್‌ ಡ್ಯಾಮೇಜ್‌ ಕಂಟ್ರೋಲ್‌: ಇದರ ಬೆನ್ನಲ್ಲೇ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಕಾಂಗ್ರೆಸ್‌, ವಿವಾದದಿಂದ ದೂರವುಳಿಯಲು ಯತ್ನಿಸಿದ್ದು ಕಂಡುಬಂತು. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಟ್ವೀಟ್‌ ಮಾಡಿ, “ಪ್ರಧಾನಿ ಮೋದಿಯವರಿಂದ ದೇಶದ ಪ್ರಜಾಸತ್ತೆಗೆ ಎದುರಾಗಿರುವ ಅಪಾಯವನ್ನು ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ಮೂಲಕವೇ ಎದುರಿಸಬೇಕು ಎಂಬುದನ್ನು ಕಾಂಗ್ರೆಸ್‌ ಬಲವಾಗಿ ನಂಬಿದೆ. ಮೋದಿಯವರ ದ್ವೇಷ, ಅವಮಾನ, ಬೆದರಿಕೆಯ ರಾಜಕೀಯವನ್ನು ಧೈರ್ಯವಾಗಿ ಎದುರಿಸುವ ಶಕ್ತಿ ಕಾಂಗ್ರೆಸ್‌ ಹಾಗೂ ವಿಪಕ್ಷಗಳಿಗೆ ಇವೆ’ ಎಂದು ಬರೆದುಕೊಂಡಿದ್ದಾರೆ.

Advertisement

ಲಲಿತ್‌ ಮೋದಿ ಬೆದರಿಕೆ
ಹಣಕಾಸು ಅವ್ಯವಹಾರದ ಆರೋಪ ಹೊತ್ತಿರುವ ಐಪಿಎಲ್‌ ಮಾಜಿ ಮುಖ್ಯಸ್ಥ ಲಲಿತ್‌ ಮೋದಿ ಗುರುವಾರ ರಾಹುಲ್‌ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ. “ಮೋದಿ ಸರ್‌ನೆàಮ್‌’ ಹೇಳಿಕೆ ಕುರಿತು ಸರಣಿ ಟ್ವೀಟ್‌ ಮಾಡಿರುವ ಲಲಿತ್‌, ಲಂಡನ್‌ನಲ್ಲಿಯೇ ರಾಹುಲ್‌ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಎ.3ರಂದು ವಿಪಕ್ಷಗಳ ಸಭೆ
ಡಿಎಂಕೆ ಅಧ್ಯಕ್ಷ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ನೇತೃತ್ವದಲ್ಲಿ ಮುಂದಿನ ಸೋಮ ವಾರ ಚೆನ್ನೈನಲ್ಲಿ ವಿಪಕ್ಷಗಳ ಸಭೆ ಆಯೋಜಿಸ ಲಾಗಿದೆ. ಬಿಜೆಪಿಯೇತರ ಪಕ್ಷಗಳನ್ನು ಒಂದು ಗೂಡಿಸಿ ಸಾಮಾಜಿಕ ನ್ಯಾಯದ ಕುರಿತು ಚರ್ಚೆ ನಡೆಸುವ ಉದ್ದೇಶದಿಂದ ಈ ಸಭೆ ಆಯೋಜಿಸ ಲಾಗಿದ್ದು, ಸುಮಾರು 20 ಪಕ್ಷಗಳ ನಾಯಕರು ಖುದ್ದಾಗಿ ಅಥವಾ ವರ್ಚುಯಲ್‌ ಆಗಿ ಭಾಗಿಯಾಗಲಿದ್ದಾರೆ.

ದೇಶಾದ್ಯಂತ ಆಪ್‌ ಅಭಿಯಾನ
ಆಮ್‌ ಆದ್ಮಿ ಪಕ್ಷವು ಗುರುವಾರ ದೇಶಾದ್ಯಂತ “ಮೋದಿ ಹಠಾವೋ, ದೇಶ್‌ ಬಚಾವೋ’ ಪೋಸ್ಟರ್‌ ಅಭಿಯಾನ ಆರಂಭಿಸಿದೆ. ಒಟ್ಟು 22 ರಾಜ್ಯಗಳಲ್ಲಿ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಪೋಸ್ಟರ್‌, ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next