Advertisement
ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು ಬಿಜೆಪಿ ನಾಯಕರು ತೆರೆಮರೆಯ ಪ್ರಯತ್ನ ನಡೆಸುತ್ತಿರುವುದರಿಂದ ಇದಕ್ಕೆ ಪ್ರತಿಯಾಗಿ ಬಿಜೆಪಿಯ ಹತ್ತು ಶಾಸಕರಿಗೆ ಗಾಳ ಹಾಕಲಾಗಿದೆ. ಬಿಜೆಪಿ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮೊದಲ ಸುತ್ತಿನ ಮಾತುಕತೆ ನಡೆಸಿದ್ದು, ಯಶಸ್ವಿಯಾದರೆ ಖುದ್ದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಆವರೇ ಫೀಲ್ಡಿಗೆ ಇಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಜೆಡಿಎಸ್ ಹಾಗೂ ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿ ಚುನಾವಣೆಯಲ್ಲಿ ಗೆದ್ದಿರುವ ಶಾಸಕರಿಗೆ ಗಾಳ ಹಾಕಲಾಗಿದ್ದು, ರಾಯಚೂರಿನ ಡಾ.ಎಸ್.ಶಿವರಾಜ್‌ಪಾಟೀಲ್, ಹೊಸದುರ್ಗ ಗೂಳಿಹಟ್ಟಿ ಶೇಖರ್, ಚಿತ್ರದುರ್ಗ ತಿಪ್ಪಾರೆಡ್ಡಿ, ದೇವದುರ್ಗದ ಕೆ.ಶಿವನಗೌಡ,ಸಿರಗುಪ್ಪದ ಎಂ.ಎಸ್.ಸೋಮಲಿಂಗಪ್ಪ, ಹೊಳಲ್ಕೆರೆ ಚಂದ್ರಪ್ಪ, ಮಾಯಕೊಂಡದ ಲಿಂಗಣ್ಣ, ಹಿರಿಯೂರಿನ ಪೂರ್ಣಿಮಾ, ಜಗಳೂರು ಎಸ್.ವಿ.ರಾಮಚಂದ್ರ, ಆಳಂದದ ಸುಭಾಷ್ ಗುತ್ತೇದಾರ್ ಅವರನ್ನು ಸೆಳೆಯಲು ಮುಂದಾಗಿದೆ ಎಂದು ಹೇಳಲಾಗಿದೆ.
Related Articles
Advertisement
ಲೋಕಸಭೆ ಚುನಾವಣೆ ವೇಳೆಗೆ ಸಮ್ಮಿಶ್ರ ಸರ್ಕಾರ ಕೆಡವಿ ಹೊಸ ಸರ್ಕಾರ ಅಥವಾ ಹೊಸದಾಗಿ ಚುನಾವಣೆಗೆ ಹೋಗುವ ಚಿಂತನೆಯಲ್ಲಿರುವ ಬಿಜೆಪಿಗೆ ಮರ್ಮಾಘಾತ ನೀಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮಾಸ್ಟರ್ ಪ್ಲ್ರಾನ್ ಸಿದ್ಧಪಡಿಸಿದ್ದಾರೆ. ನಾಲ್ವರು ಶಾಸಕರನ್ನು ಜೆಡಿಎಸ್‌ಗೆ, ಆರು ಶಾಸಕರನ್ನು ಕಾಂಗ್ರೆಸ್‌ಗೆ ಕರೆತರುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ.
ಈ ಮಧ್ಯೆ, ಆಪರೇಷನ್ ಹಸ್ತ-ತೆನೆಗೆ ಪೂರ್ವಭಾವಿಯಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಬಿಜೆಪಿ ಶಾಸಕರ ಮನವಿಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದ್ದಾರೆ. ಖುದ್ದು ದೂರವಾಣಿ ಕರೆ ಮಾಡಿ ನಿಮ್ಮ ಕೆಲಸ ಮಾಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದೂ ಹೇಳುತ್ತಿದ್ದಾರೆ. ವೈಯಕ್ತಿಕವಾಗಿ ಉತ್ತಮ ಬಾಂಧವ್ಯ ಹೊಂದಿರುವ ಶಾಸಕರ ಜತೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ.
ಶಾಸಕರಿಗೆ ಚುನಾವಣೆ ಭಯ: ಸಮ್ಮಿಶ್ರ ಸರ್ಕಾರ ಪತನವಾದರೆ ಮತ್ತೂಮ್ಮೆ ಚುನಾವಣೆ ಎದುರಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಬಹುತೇಕ ಶಾಸಕರಿಗೆ ಚುನಾವಣೆಗೆ ಹೋಗಲು ಆತಂಕವಿದೆ. ಹೀಗಾಗಿ, ಯಾವುದಾದರೂ ಸರ್ಕಾರ ಇರಲಿ, ಚುನಾವಣೆ ಮಾತ್ರ ಬೇಡ ಎಂಬ ಅಭಿಪ್ರಾಯ ಬಿಜೆಪಿ ಶಾಸಕರಲ್ಲೂ ಇದೆ. ಅದನ್ನು ಲಾಭ ಮಾಡಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಮುಂದಾಗಿದೆ.
ಮತ್ತೂಂದು ಮೂಲಗಳ ಪ್ರಕಾರ, ಬಿಜೆಪಿ ನಾಯಕರು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸಂಪರ್ಕಿಸಿರುವುದರಿಂದ ಬಿಜೆಪಿ ಶಾಸಕರನ್ನು ಸೆಳೆಯಲು ಪ್ರಯತ್ನಿಸಿ ಆಪರೇಷನ್ ಕಮಲಕ್ಕೆ ಹೈ ಹಾಕದಂತೆ ಮಾಡುವುದು. ಜತೆಗೆ, ಬಿಜೆಪಿಗೆ ಸೇರಲು ಮುಂದಾಗಿರುವ ತಮ್ಮ ಪಕ್ಷಗಳ ಶಾಸಕರಿಗೂ ಸಂದೇಶ ರವಾನಿಸುವುದು ಇದರ ಹಿಂದಿನ ಉದ್ದೇಶ ಎನ್ನಲಾಗಿದೆ.
ಬಿಜೆಪಿಯ 20 ಶಾಸಕರು ಜೆಡಿಎಸ್ ಸೇರಲು ಸಿದ್ಧರಿದ್ದಾರೆ. ಆಪರೇಷನ್ ಮಾಡುವುದು ಬೇಡ ಎಂದು ನಾವೇ ಸುಮ್ಮನಿದ್ದೇವೆ. 2008-09ರಲ್ಲಿ 110 ಸದಸ್ಯ ಬಲ ಇದ್ದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರಿಂದ ರಾಜೀನಾಮೆ ಕೊಡಿಸಿ ಆಪರೇಷನ್ ಕಮಲ ನಡೆಸಿತ್ತು. ಅಂತಹ ರಾಜಕಾರಣ ಮಾಡುವುದು ಬೇಡ. ಬಿಜೆಪಿ ಶಾಸಕರು ಜೆಡಿಎಸ್‌ಗೆ ಬಂದರೆ ಯಡಿಯೂರಪ್ಪನವರಿಗೆ ನೋವಾಗುತ್ತದೆ.
ಯಡಿಯೂರಪ್ಪನವರು ಇನ್ನಷ್ಟು ದಿನ ಆರೋಗ್ಯದಿಂದಿರಲಿ ಎಂದು ಜೆಡಿಎಸ್‌ಗೆ ಬರಬೇಡಿ ಎಂದು ಬಿಜೆಪಿ ಶಾಸಕರಿಗೆ ಹೇಳಿದ್ದೇವೆ.– ಎಚ್.ಡಿ.ರೇವಣ್ಣ, ಲೋಕೋಪಯೋಗಿ ಸಚಿವ – ಎಸ್. ಲಕ್ಷ್ಮಿನಾರಾಯಣ