ವಿಧಾನಸಭೆ: ಬಿಬಿಎಂಪಿ ಬಿಜೆಪಿ ಸದಸ್ಯೆಯ ಪತಿ ಕದಿರೇಶ್ ಹತ್ಯೆ ಸದನದಲ್ಲಿ ಪ್ರಸ್ತಾಪಗೊಂಡು “ಇನ್ನೂ ಯಾರ್ಯಾರು ಹತ್ಯೆಯಾಗ್ತಾರೆ?’ ಎಂಬ ಪ್ರತಿಪಕ್ಷದವರ ಪ್ರಶ್ನೆಗೆ “ಸಿ.ಟಿ.ರವಿಯದು’ ಎಂದು ಆಡಳಿತ ಪಕ್ಷದ ಕಡೆಯಿಂದ ಬಂದ ಧ್ವನಿ ಕೋಲಾಹಲಕ್ಕೆ ಕಾರಣವಾದ ಪ್ರಸಂಗ ಗುರುವಾರ ನಡೆಯಿತು.
ಅದು ಸಚಿವರೊಬ್ಬರ ಧ್ವನಿ ಎಂಬುದು ಪ್ರತಿಪಕ್ಷದವರು ಖಚಿತಪಡಿಸಿ ಅವರಿಂದ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು. ಆದರೆ ಆ ಸಚಿವರು ಯಾರು ಎಂಬುದನ್ನು ಅವರೂ ಹೇಳಲಿಲ್ಲ. ಆದರೆ ಈ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷದವರ ನಡುವೆ ದೊಡ್ಡ ಮಾತಿನ ಸಮರವೇ ನಡೆದು ಸದನದಲ್ಲಿ ಗದ್ದಲ, ಕೋಲಾಹಲ ಉಂಟಾಯಿತು.
ಶೂನ್ಯ ವೇಳೆಯಲ್ಲಿ ಬಿಜೆಪಿಯ ಆರ್.ಅಶೋಕ್, ಕದಿರೇಶ್ ಹತ್ಯೆ ಪ್ರಸ್ತಾಪಿಸಿ ಸೇಫ್ ಸಿಟಿ ಎಂದು ಹೆಸರು ಪಡೆದಿದ್ದ ಬೆಂಗಳೂರು ಕ್ರೈಮ್ ಸಿಟಿಯಾಗಿದೆ. ಹಾಡಹಗಲೇ ಪಾಲಿಕೆ ಸದಸ್ಯೆ ಪತಿ ಹತ್ಯೆಯಾಗಿದೆ. ದುಷ್ಕರ್ಮಿಗಳಿಗೆ ಸರ್ಕಾರ ಹಾಗೂ ಪೊಲೀಸರ ಬಗ್ಗೆ ಭಯ ಇಲ್ಲದಂತಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಇನ್ನೆಷ್ಟು ಹತ್ಯೆಗಳಾಗಬೇಕು, ಇನ್ನೂ ಯಾರ್ಯಾರು ಹತ್ಯೆಯಾಗ್ತಾರೆ ಎಂದಾಗ ಆಡಳಿತ ಪಕ್ಷದ ಕಡೆಯಿಂದ “ಸಿ.ಟಿ.ರವಿ’ ಎಂದು ಸಚಿವರೊಬ್ಬರು ಹೇಳಿದರು. ಇದರಿಂದ ಸಿಟ್ಟಿಗೆದ್ದ ಬಿಜೆಪಿಯ ಜೀವರಾಜ್, ಸಚಿವರು ಶಾಸಕರೊಬ್ಬರನ್ನು ಕುರಿತು “ಮುಂದಿನ ಸರದಿ ನಿಮ್ಮದೇ’ ಎಂದು ಹೇಳುವುದು ಎಷ್ಟು ಸರಿ? ಸಿ.ಟಿ.ರವಿಯವರಿಗೆ ಈಗಾಗಲೇ ಬೆದರಿಕೆಯಿದೆ. ಅವರು ಡಿಜಿಪಿಗೆ ಈ ಕುರಿತು ಪತ್ರ ಸಹ ಬರೆದಿದ್ದಾರೆ. ಇಂತಹ ಸಂದರ್ಭದಲ್ಲಿ ಸಚಿವರೊಬ್ಬರು ಆಡಿರುವ ಮಾತಿನ ಹಿಂದೆ ಏನಿರಬಹುದು ಎಂದು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇತರೆ ಸದಸ್ಯರು ಧ್ವನಿಗೂಡಿಸಿದರು.
ಸಿ.ಟಿ.ರವಿ ಅವರಂತೂ, ನಾನು ಸಾವಿಗೆ ಹೆದರುವುದಿಲ್ಲ. ಇಲ್ಲಿ ಯಾರೂ ಶಾಶ್ವತವಾಗಿ ಗೂಟ ಹೊಡೆದುಕೊಂಡು ಇರುವುದಿಲ್ಲ. ನಾನು ಸಾವಿಗೆ ಅಂಜಿ ಬದುಕುವುದೂ ಇಲ್ಲ. ನನಗೆ ಸ್ಕೆಚ್ ಹಾಕಿದ್ದರೆ ಹೇಳಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರವಿಂದ ಲಿಂಬಾವಳಿ, ಇದೊಂದು ಬೇಜವಾಬ್ದಾರಿ ಹೇಳಿಕೆ. ಈ ಸದನದ ಶಾಸಕರ ಬಗ್ಗೆ ಈ ರೀತಿ ಹೇಳುವುದು ಎಂದರೆ ಏನು ಎಂದು ಏರಿದ ಧ್ವನಿಯಲ್ಲಿ ಟೀಕಿಸಿದರು. ಈ ಸಂದರ್ಭ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಧ್ಯೆಪ್ರವೇಶಿಸಿದರು.
ಅರವಿಂದ ಲಿಂಬಾವಳಿ ಆಕ್ಷೇಪ ವ್ಯಕ್ತಪಡಿಸಿ ಯಾರು ಆ ಮಾತು ಹೇಳಿದ್ದಾರೋ ಅವರಿಂದಲೇ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು. ಆಗ ಕಾಗೋಡು ತಿಮ್ಮಪ್ಪ ಹಾಗೂ ಲಿಂಬಾವಳಿ ನಡುವೆ ಮಾತಿನ ಚಕಮಕಿಯೂ ನಡೆಯಿತು. ಸಲುಗೆಯಿಂದ ಆ ರೀತಿ ಹೇಳಿರಬಹುದು. ಆದರೂ ವಿಷಾದಿಸುತ್ತೇವೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು. ಸ್ಪೀಕರ್ ಪೀಠದಲ್ಲಿದ್ದ ಉಪಾಧ್ಯಕ್ಷ
ಶಿವಶಂಕರರೆಡ್ಡಿ, ಸರ್ಕಾರದ ಪರವಾಗಿ ವಿಷಾದ ವ್ಯಕ್ತಪಡಿಸಿದ್ದಾರೆ ಇಲ್ಲಿಗೆ ಮುಗಿಸಿ. ಹತ್ಯೆ ಬಗ್ಗೆ ಗೃಹ ಸಚಿವರಿಂದ ಉತ್ತರ ಕೊಡಿಸಲಾಗುವುದು ಎಂದು ವಿಷಯಕ್ಕೆ ತೆರೆ ಎಳೆದರು. ಆದರೂ ಕೊನೆಗೆ ಮುಂದಿನ ಸರದಿ ಸಿ.ಟಿ. ರವಿ ಅವರದು ಎಂದು ಹೇಳಿದ ಸಚಿವರು ಯಾರು ಎಂಬುದು ಗೊತ್ತಾಗಲಿಲ್ಲ. ಅವರ ಹೆಸರು ಕಡತಕ್ಕೂ ಹೋಗಲಿಲ್ಲ.