ಬೋಲ್ಪುರ: ಪ. ಬಂಗಾಲದ 2021ರ ಚುನಾವಣೆ ಯಲ್ಲಿ 200 ಸೀಟುಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ತನ್ನ ಸಿಎಂ ಅಭ್ಯರ್ಥಿಯ ರಹಸ್ಯ ಬಹಿರಂಗಪಡಿಸಿದೆ. “ಬಂಗಾಲದ ಮುಂದಿನ ಸಿಎಂ ಹೊರಗಿನವರಲ್ಲ, ಒಳಗಿನವರೇ’ ಎನ್ನುವ ಮೂಲಕ ಗೃಹ ಸಚಿವ ಅಮಿತ್ ಶಾ, ಟಿಎಂಸಿಯ ಮಮತಾ ಬ್ಯಾನರ್ಜಿ ಅವರಿಗೆ ನೇರ ಸವಾಲು ಎಸೆದಿದ್ದಾರೆ. ಬಂಗಾಲದಲ್ಲಿ ಬಿಜೆಪಿ ಎಂದರೆ “ಹೊರಗಿನವರು’ ಎಂದು ವ್ಯಾಖ್ಯಾನಿಸಿದ್ದ ದೀದಿಗೆ ಬೋಲ್ಪುರದ ರೋಡ್ ಶೋ ಸ್ಪಷ್ಟ ಉತ್ತರ ನೀಡಿದೆ.
“ಒಳಗಿನವರೇ ಸಿಎಂ’!: “ಒಂದೆಡೆಯಿಂದ ಮತ್ತೂಂದು ರಾಜ್ಯಕ್ಕೆ ಭೇಟಿ ನೀಡಲು ಸಾಧ್ಯವಾಗದಂಥ ದೇಶ ದೀದಿ ಅವರಿಗೆ ಬೇಕಿತ್ತಾ? ಇಂದಿರಾ ಗಾಂಧಿ, ಪ್ರಣವ್ ಮುಖರ್ಜಿ, ನರಸಿಂಹ ರಾವ್ ಪ. ಬಂಗಾಲಕ್ಕೆ ಬಂದಾಗ ಅವರನ್ನೂ ಹೊರಗಿನವರು ಅಂತ ಮಮತಾ ಕರೆದಿ ದ್ದರಾ? ಆದರೆ, ಆ ಬಗ್ಗೆ ಚಿಂತೆ ಬೇಡ… ದಿಲ್ಲಿಯಿಂದ ಯಾರೂ ಬಂದು ನಿಮ್ಮನ್ನು ಸೋಲಿ ಸುವುದಿಲ್ಲ. ಬಂಗಾಲ ದೊಳಗೇ ಒಬ್ಬರು ನಿಮಗೆ ಸವಾಲು ಹಾಕುತ್ತಾರೆ. ಅವರೇ ಮುಂದಿನ ಸಿಎಂ ಆಗುತ್ತಾರೆ’ ಎಂದು ಶಾ ಪ್ರತಿಜ್ಞೆಗೈದರು.
ರೈತರಿಗೇಕೆ ಹಣ ಕೊಟ್ಟಿಲ್ಲ?: “ಪ. ಬಂಗಾಲ ಸರಕಾರ ರೈತರಿಗೆ 6 ಸಾವಿರ ರೂ. ಹಣವನ್ನೇ ನೀಡಿಲ್ಲ. ರೈತರ ಹಣ ಬಿಡುಗಡೆ ಮಾಡದಿದ್ದರೂ ಈಗ ರೈತರ ಹೋರಾಟಕ್ಕೆ ಮಮತಾ ಬೆಂಬಲ ಸೂಚಿಸುತ್ತಿದ್ದಾರೆ. ಮೊದಲು ಕೇಂದ್ರದ ಹಣವನ್ನು ರೈತರ ಕೈಗಿಡಿ. ನೀವು ಅದನ್ನು ಕೊಡುವುದು ಕೇವಲ ನಿಮ್ಮ ಸೋದರಳಿಯನ ಬರ್ತ್‌ಡೇಗಷ್ಟೇ. ಪಿಎಂ- ಕಿಸಾನ್ ಸಮ್ಮಾನ್ ನಿಧಿಗೆ ಬಂಗಾಲದ 23 ಲಕ್ಷ ರೈತರು ಮನವಿ ಸಲ್ಲಿಸಿದ್ದಾರೆ. ದೀದಿ ಇದುವರೆಗೂ ರೈತರ ಪಟ್ಟಿಯನ್ನೇ ಕೇಂದ್ರಕ್ಕೆ ರವಾನಿಸಿಲ್ಲ’ ಎಂದು ಗುಡುಗಿದರು.
ಬಾಂಗ್ಲಾ ವಲಸಿಗರ ಪ್ರಸ್ತಾವ: ಬಿಜೆಪಿ ಈ ರ್ಯಾಲಿ ಮೂಲಕ ಬಾಂಗ್ಲಾ ಅಕ್ರಮ ವಲಸಿಗರ ಸಮಸ್ಯೆಯನ್ನೂ ಮುನ್ನೆಲೆಗೆ ತಂದಿದೆ. “ರಾಜಕೀಯ ಹಿಂಸಾಚಾರ, ಭ್ರಷ್ಟಾಚಾರ, ಸುಲಿಗೆ, ಬಾಂಗ್ಲಾ ವಲಸಿಗರ ಸಮಸ್ಯೆಗಳಿಂದ ಮುಕ್ತಿ ಹೊಂದಲು ಬಂಗಾಲಿಗರು ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ’ ಎಂದು ಶಾ ವಿಶ್ಲೇಷಿಸಿದರು. “ಫೆಡರಲ್ ಮಾದರಿ ವಿರುದ್ಧ ಬಂಗಾಲದಲ್ಲಿ ನಾವು ಬೇರೇನನ್ನೂ ಮಾಡಿಲ್ಲ. ನಮ್ಮ ರೋಡ್ ಶೋಗಳಿಗೆ ಜನ ಸೇರೋದನ್ನು ನೋಡಿದರೆ, ಸರಕಾರದ ವಿರುದ್ಧ ಇವರಿಗೆಷ್ಟು ಆಕ್ರೋಶವಿದೆ ಎನ್ನುವುದು ಬಿಂಬಿತವಾಗುತ್ತದೆ. ಹಾಗೆಯೇ ಮೋದಿ ಅವರ ಆಡಳಿತದ ಮೇಲಿನ ನಂಬಿಕೆಯನ್ನೂ ಇದು ತೋರಿಸುತ್ತಿದೆ’ ಎಂದು ಹೇಳಿದರು. ಪ. ಬಂಗಾಲದ 2ನೇ ದಿನದ ಪ್ರವಾಸದಲ್ಲಿ ಶಾ, ರವೀಂದ್ರನಾಥ ಟ್ಯಾಗೋರ್‌ರ ಶಾಂತಿನಿಕೇತನಕ್ಕೆ ಭೇಟಿ ನೀಡಿ ವಿಶ್ವಕವಿಗೆ ಗೌರವ ನಮನ ಸಲ್ಲಿಸಿದರು.
ಜಾನಪದ ಗಾಯಕನ ಮನೆಯಲ್ಲಿ
ಭೋಜನ: ಶಾಂತಿನಿಕೇತನದ ಸಮೀಪದ ರತನಪಳ್ಳಿಯ ಬಂಗಾಲಿ “ಬಾಲ್’ ಜಾನಪದ ಗಾಯಕ ಬಸುದೇಬ್ ದಾಸ್ ಬಾಲ್ ಅವರ ಮನೆಯಲ್ಲಿ ಗೃಹ ಸಚಿವ ಭೋಜನ ಸವಿದರು. ಶಾ ಅವರಿಗಾಗಿಯೇ ರಸಗುಲ್ಲ ಸಿದ್ಧಪಡಿಸಲಾಗಿತ್ತು. ಈ ವೇಳೆ ಬಸುದೇಬ್ ಮತ್ತು ಅವರ ಕುಟುಂಬ ನಡೆಸಿಕೊಟ್ಟ ಸಂಗೀತಗೋಷ್ಠಿಗೆ ಸಚಿವರು ತಲೆದೂಗಿದರು.
ಸುವೇಂದು ವಿರುದ್ಧ ಕಿಡಿ
ಸಾಲುಸಾಲಾಗಿ ಪಕ್ಷ ತೊರೆಯುತ್ತಿರುವವನ್ನು ಟಿಎಂಸಿ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ. “ಪಕ್ಷದೊಳಗಿನ ಆಂತರಿಕ ಸಮಸ್ಯೆಗಳು ಟಿಎಂಸಿಯ ಚುನಾವಣ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಬಂಗಾಲದ ಸಚಿವ ಸುಭ್ರತಾ ಮುಖರ್ಜಿ ಹೇಳಿದ್ದಾರೆ. “ದೇಶದ್ರೋಹಿಗಳು, ಬೆನ್ನಿಗೆ ಚೂರಿ ಹಾಕುವವರು ಎಲ್ಲ ಕಾಲದಲ್ಲೂ ಇದ್ದೇ ಇರುತ್ತಾರೆ’ ಎಂದು ಪರೋಕ್ಷವಾಗಿ ಸುವೇಂದು ಅಧಿಕಾರಿಗೆ ಟಾಂಗ್ ಕೊಟ್ಟಿದ್ದಾರೆ.
ಒಳಗಿನವರೆಂದರೆ ಯಾರು?
ಬಿಜೆಪಿಗೆ ಬಂಗಾಲದಲ್ಲಿ ವರ್ಚಸ್ಸುಳ್ಳ ನಾಯಕರ ಕೊರತೆ ಇದ್ದೇ ಇದೆ. ಟಿಎಂಸಿಯಿಂದ ಸಿಡಿದು ಕಮಲದ ತೆಕ್ಕೆಗೆ ಬಂದಿರುವ ಸುವೇಂದು ಅಧಿಕಾರಿಯನ್ನೇ ದೃಷ್ಟಿಯಲ್ಲಿ ಟ್ಟುಕೊಂಡು ಶಾ “ಒಳಗಿನವರೇ ಸಿಎಂ ಅಭ್ಯರ್ಥಿ’ ಎಂದು ಹೇಳಿದರಾ?- ಎಂಬ ಪ್ರಶ್ನೆ ಈಗ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಹುಟ್ಟುಹಾಕಿದೆ. ಮಿಡ್ನಾಪುರ ರ್ಯಾಲಿ ವೇಳೆ ಸುವೇಂದುರನ್ನು ಶಾ ಪಕ್ಷಕ್ಕೆ ಬರಮಾಡಿಕೊಳ್ಳುವಾಗ, “ಭೂಮಿಪುತ್ರ ಮಮತಾಗೆ ಚಾಲೆಂಜ್ ಹಾಕ್ತಾರೆ’ ಎಂದಿದ್ದರು.