Advertisement

ಜೆಪಿ ನಡ್ಡಾ ನಿವಾಸದಲ್ಲಿ ನಿರ್ಣಾಯಕ ಸಭೆ, ಬಿಎಸ್ ವೈ ಸೇರಿ ಪ್ರಮುಖರು ಭಾಗಿ

02:35 PM Apr 08, 2023 | Team Udayavani |

ಹೊಸದಿಲ್ಲಿ : ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಒಂದು ದಿನ ಮೊದಲು, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಎಸ್ ಯಡಿಯೂರಪ್ಪ ಸೇರಿದಂತೆ ಪ್ರಮುಖ ರಾಜ್ಯ ನಾಯಕರೊಂದಿಗೆ ಸಂಭಾವ್ಯ ಅಭ್ಯರ್ಥಿಗಳ ಕುರಿತು ಮಹತ್ವದ ಚರ್ಚೆ ನಡೆಸಿದರು.

Advertisement

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಮೇ 10 ರಂದು ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿ ಸಂಸದೀಯ ಮಂಡಳಿ ಭಾನುವಾರ ನಿರ್ಣಾಯಕ ಸಭೆ ಸೇರಲಿದೆ.

ಚರ್ಚೆ ಪ್ರಾರಂಭವಾಗುವ ಮೊದಲು, ಮುಖ್ಯಮಂತ್ರಿ ಬೊಮ್ಮಾಯಿ, “ನಾವು ಎಲ್ಲಾ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಚರ್ಚಿಸುತ್ತೇವೆ. ನಮ್ಮ ಬಳಿ ಜಿಲ್ಲೆ ಮತ್ತು ಕ್ಷೇತ್ರವಾರು ವಿವರಗಳು ಮತ್ತು ಇತ್ತೀಚಿನ ಸಮೀಕ್ಷೆಯ ಫಲಿತಾಂಶಗಳಿವೆ. ಅದನ್ನೆಲ್ಲ ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ನಾಯಕರ ಜತೆ ವಿಸ್ತೃತ ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.

ಪೂರ್ಣ ಪಟ್ಟಿಯನ್ನು ಒಂದೇ ಬಾರಿಗೆ ಪ್ರಕಟಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಕೆಲವು ಹೆಸರುಗಳನ್ನು ಹೊರತುಪಡಿಸಿ ಉಳಿದವುಗಳನ್ನು ಮಂಡಳಿಯ ಅನುಮೋದನೆ ಪಡೆದ ನಂತರ ಪ್ರಕಟಿಸಬಹುದು. ಭಾನುವಾರ ಸಂಜೆ 5 ಗಂಟೆಗೆ ನಡೆಯಲಿರುವ ಸಂಸದೀಯ ಮಂಡಳಿ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದರು.

ನಡ್ಡಾ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ವಿಧಾನಸಭಾ ಚುನಾವಣೆಗೆ ಬಿಜೆಪಿ ಉಸ್ತುವಾರಿಯಾಗಿರುವ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಮನ್ಸುಖ್ ಮಾಂಡವಿಯಾ ಹಾಗೂ ಪಕ್ಷದ ಹಿರಿಯ ನಾಯಕ ಅರುಣ್ ಸಿಂಗ್ ಭಾಗವಹಿಸಿದ್ದರು.

Advertisement

ಬೊಮ್ಮಾಯಿ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲದೆ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

ರಾಜ್ಯದ ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣೆಗೆ ತಮ್ಮ ಅಭ್ಯರ್ಥಿಗಳ ಆರಂಭಿಕ ಪಟ್ಟಿಯನ್ನು ಪ್ರಕಟಿಸಿದ್ದು ಉಳಿದ ಅಭ್ಯರ್ಥಿಗಳ ಅಂತಿಮ ಪಟ್ಟಿಗಾಗಿ ಕಾಯಲಾಗುತ್ತಿದೆ.

ಮತ್ತೆ ಅಧಿಕಾರಕ್ಕೆ ಬರುವ ಗುರಿ ಹೊಂದಿರುವ ಬಿಜೆಪಿ 224 ಸ್ಥಾನಗಳಲ್ಲಿ ಕನಿಷ್ಠ 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ.

ಒಟ್ಟು 224 ಸ್ಥಾನಗಳ ಪೈಕಿ ಕಾಂಗ್ರೆಸ್ 166 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದರೆ, ಜೆಡಿಎಸ್ 93 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಕರ್ನಾಟಕದ ಸಣ್ಣ ಪಕ್ಷಗಳಾದ ಕರ್ನಾಟಕ ರಾಷ್ಟ್ರ ಸಮಿತಿ, ಆಮ್ ಆದ್ಮಿ ಪಾರ್ಟಿ, ಆಲ್ ಇಂಡಿಯಾ ಮಜ್ಲಿಸ್-ಇತ್ತೆಹಾದುಲ್ ಮುಸ್ಲಿಮೀನ್ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೂಡ ತಮ್ಮ ಮೊದಲ ಮತ್ತು ಎರಡನೇ ಪಟ್ಟಿಯನ್ನು ಪ್ರಕಟಿಸಿವೆ.

ಎಪ್ರಿಲ್ 13 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 20 ಆಗಿದೆ. ಫಲಿತಾಂಶವು ಮೇ 13 ರಂದು ಪ್ರಕಟವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next