ಹುಬ್ಬಳ್ಳಿ: ಹಿಂದುತ್ವ ಹಾಗೂ ಭಾವನಾತ್ಮಕ ವಿಷಯ ಇಟ್ಟುಕೊಂಡು ಕರ್ನಾಟಕದಲ್ಲಿ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಪ್ರಕರಣ ಹಾಗೂ ದಿ ಕಾಶ್ಮೀರ ಫೈಲ್ಸ್ ಚಲನಚಿತ್ರದಿಂದ ಕರ್ನಾಟಕದ ಜನರ ಮನಸ್ಸು ಬದಲಾವಣೆ ಮಾಡಲು ಸಾಧ್ಯವಿಲ್ಲ. ಜನ ಚುನಾವಣೆಯಲ್ಲಿ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ವಿಷಯಗಳ ಮೇಲೆ ಮತ ಹಾಕುತ್ತಾರೆ. ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ನೂರಕ್ಕೆ ನೂರು ನಾವೇ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ ಚುನಾವಣೆ ಎದುರಿಸಲು ಸಿದ್ಧವಾಗಿದೆ. ರಾಜ್ಯದಲ್ಲಿ ಬಿಜೆಪಿ ಎಂದಿಗೂ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದಿಲ್ಲ. ಅಪರೇಷನ್ ಕಮಲ ಮಾಡಿಯೇ ಅಧಿಕಾರ ಬಂದಿದ್ದು. ಜಗದೀಶ ಶೆಟ್ಟರ ಸಿಎಂ ಆಗಿದ್ದಾಗ ಬಿಜೆಪಿ ಕೇವಲ 40 ಸ್ಥಾನ ಪಡೆದಿತ್ತು. ಅವರ ಮಾತಿಗೆ ಕಿಮ್ಮತ್ತು ಇದೆಯೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಪಾಠಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸಚಿವ ಮಾಧುಸ್ವಾಮಿ
ನಮ್ಮ ಪಕ್ಷದಲ್ಲಿ ಬಣ ರಾಜಕೀಯವಿಲ್ಲ. ಬಿಜೆಪಿಯಲ್ಲೇ ಹತ್ತಾರು ಬಣಗಳಿವೆ. ಪಕ್ಷಕ್ಕೆ ಹಾನಿ ಮಾಡಿ ಹೊರ ಹೋದವರನ್ನು ಮರಳಿ ಸೇರಿಸಿಕೊಳ್ಳುವುದಿಲ್ಲ. ಪಕ್ಷದ ಸಿಡಬ್ಲ್ಯುಸಿ ಸಭೆಯಲ್ಲಿ ಸೋನಿಯಾ ಅವರೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೆಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ಈ ವೇಳೆ ಪಕ್ಷದ ಬಲವರ್ಧನೆ ಬಗ್ಗೆ ಚರ್ಚೆಯಾಗಿದೆ ಎಂದರು.
ಶಾಲಾ ಪಠ್ಯದಲ್ಲಿ ನೈತಿಕ ಶಿಕ್ಷಣ ಮುಖ್ಯ. ಅದರ ಜೊತೆಗೆ ಗುಣಮಟ್ಟದ ಶಿಕ್ಷಣ ಕೂಡ ನೀಡಬೇಕು. ಸಂವಿಧಾನ ವಿರೋಧಿಯಾಗಿ ಏನನ್ನು ಮಾಡಬಾರದು. ಮಹಾದಾಯಿಗಾಗಿ ಪಾದಯಾತ್ರೆ ನಡೆಸುವ ಕುರಿತು ಈ ಭಾಗದ ಮುಖಂಡರ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದರು