ಹೊಸದಿಲ್ಲಿ : ಗದರ್ – ಏಕ್ ಪ್ರೇಮ್ ಕಥಾ ಮತ್ತು ಬಾರ್ಡರ್ ಚಿತ್ರಗಳಲ್ಲಿ ನಟಿಸಿ ಪಾಕಿಸ್ಥಾನದ ವಿರುದ್ಧ ದೊಡ್ಡ ದೊಡ್ಡ ಮಾತುಗಳನ್ನು ತೆರೆಯ ಮೇಲೆ ಆಡಿ ಜನಪ್ರಿಯರಾಗಿರುವ ಹಿಂದಿ ಚಿತ್ರ ನಟ ಹಾಗೂ ಪಂಜಾಬ್ ನ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸನ್ನಿ ದೇವಲ್, “ನನಗೆ ಬಾಲಾಕೋಟ್ ಮೇಲಿನ ಭಾರತೀಯ ವಾಯು ಪಡೆಯ ವಾಯು ದಾಳಿಯ ಬಗೆಗಾಗಲೀ, ಭಾರತ-ಪಾಕ್ ನಡುವಿನ ಸಂಬಂಧಗಳ ಬಗೆಗಾಗಲೀ ಹೆಚ್ಚೇನೂ ಗೊತ್ತಿಲ್ಲ’ ಎಂದು ಹೇಳುವ ಮೂಲಕ ಅಚ್ಚರಿ ಉಂಟುಮಾಡಿದ್ದಾರೆ.
ರಾಲಿಯೊಂದರಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ 62ರ ಹರೆಯದ ದೇವಲ್‌ಗೆ ಪತ್ರಕರ್ತರು ಭಾರತ-ಪಾಕ್ ಸಂಬಂಧಗಳ ಬಗ್ಗೆ ಏನಂತೀರಿ ಎಂದು ಕೇಳಿದರು; ಅದಕ್ಕೆ ಆತ “ನಾನಿಲ್ಲಿರೋದು ಜನಸೇವೆಗೆ; ನಾನು ಚುನಾವಣೆಯಲ್ಲಿ ಗೆದ್ದರೆ ಆ ಬಳಿಕವಷ್ಟೇ ನನ್ನ ಅಭಿಪ್ರಾಯ ಹೇಳಬಹುದು; ಈಗ ಅಲ್ಲ’ ಎಂದು ಉತ್ತರಿಸಿದರು.
ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಲ್ಲಿ ತನ್ನ ಎದುರಾಳಿಯಾಗಿರುವ ಕಾಂಗ್ರೆಸ್ ಅಭ್ಯರ್ಥಿ ಮತ್ತು ಹಾಲಿ ಸಂಸದ ಸುನೀಲ್ ಕುಮಾರ್ ಜಾಖಡ್ ಬಗ್ಗೆ ಪ್ರತಿಕ್ರಿಯಿಸಿದ ದೇವಲ್, “ಜಾಖಡ್ ಅವರು ತಮಗೆ ಏನು ಬೇಕೋ ಅದನ್ನು ಹೇಳುತ್ತಾರೆ; ಅವರು ಕೂಡ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ; ಅವರೂ ಮಾತನಾಡಲಿ; ನಾನಿಲ್ಲಿ ಕೆಲಸ ಮಾಡಲು ಮತ್ತು ಜನಸೇವೆ ಕೈಗೊಳ್ಳಲು ಬಂದಿರೋದು ಅಂತ ಅವರಿಗೂ ಗೊತ್ತಿದೆ; ಆದುದರಿಂದಲೇ ಅವರಿಗೆ ನನ್ನ ಬಗ್ಗೆ ಭಯವಿದೆ’ ಎಂದು ಹೇಳಿದರು.