Advertisement

ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾಗಿ ಬಿಜೆಪಿ ಅಭ್ಯರ್ಥಿ ಆಯ್ಕೆ: ಶಶಿಕಲಾ ಜೊಲ್ಲೆ ಸಂತಸ

06:01 PM Nov 17, 2021 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯ ಮಂಡಳಿ ಅಧ್ಯಕ್ಷರಾಗಿ  ಇದೇ ಮೊದಲ ಬಾರಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಮಹಮದ್ ಷಫಿ ಸಾ ಆದಿ  ಆಯ್ಕೆಯನ್ನು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶ್ರೀಮತಿ ಶಶಿಕಲಾ ಅ. ಜೊಲ್ಲೆ ಸ್ವಾಗತಿಸಿ ಅಭಿನಂದಿಸಿದ್ದಾರೆ.

Advertisement

ಬುಧವಾರ ಕರ್ನಾಟಕ ವಕ್ಫ್ ಮಂಡಳಿಗೆ ಭೇಟಿ ನೀಡಿ ರಾಜ್ಯ ವಕ್ಫ್ ಮಂಡಳಿ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಮಹಮದ್ ಷಫಿ ಸಾ ಆದಿಯವರನ್ನು  ಅಭಿನಂದಿಸಿ ಮಾತನಾಡಿದ ಅವರು, ಯಾವುದೇ ಸಮುದಾಯ ಮೊದಲು ಶೈಕ್ಷಣಿಕವಾಗಿ ಅಭಿವೃದ್ಧಿಯಾದರೆ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುವುದರಿಂದ ಆ ನಿಟ್ಟಿನಲ್ಲಿ  ಸಮುದಾಯವು ಚಿಂತಿಸಬೇಕು ಎಂದರು.

ಮುಸ್ಲಿಂ ಸಮುದಾಯದ ಮಕ್ಕಳು  ಮತ್ತು ಮಹಿಳೆಯರ ಅಭಿವೃದ್ಧಿ ಕಡೆಗೂ ಮಂಡಳಿಯು ಹೆಚ್ಚಿನ ಗಮನ ಹರಿಸಬೇಕು. ಎಲ್ಲ ಸಮುದಾಯಗಳ ಅಭಿವೃದ್ಧಿಯಾದರೆ ಮಾತ್ರವೇ ರಾಷ್ಟ್ರದ ಹಾಗೂ ಇಡೀ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಅಭಿವೃದ್ಧಿಯು ಕೇವಲ ಭೌತಿಕವಾಗಿರದೇ ಅದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರೆಯುವಂತಾಗಬೇಕು. ಆ ನಿಟ್ಟಿನಲ್ಲಿ ವಕ್ಫ್ ಮಂಡಳಿ, ವಕ್ಫ್ ಕೌನ್ಸಿಲ್‍ನಂತಹ ಅಂಗಗಳು ಹೆಚ್ಚಿನ ಕೆಲಸ ಮಾಡಬೇಕು ಎಂದು ಶ್ರೀಮತಿ ಶಶಿಕಲಾ ಜೊಲ್ಲೆ ಕಿವಿಮಾತು ಹೇಳಿದರು.

ಸಮುದಾಯದ ಒಟ್ಟಾರೆ ಹಿತದೃಷ್ಟಿಯಿಂದ ಮಂಡಳಿಯ ಎಲ್ಲ ಸದಸ್ಯರ ಒಗ್ಗಟ್ಟಿನಿಂದಾಗಿ ನೂತನ ಅಧ್ಯಕ್ಷರ ಆಯ್ಕೆ ಸುಗಮವಾಗಿ ನಡೆದಿರುವುದು ಸಮಾಜದ ಅಭ್ಯುದಯದ ದಿಕ್ಸೂಚಿಯಾಗಿದೆ ಎಂದು ಸಚಿವರು ಹೇಳಿದರು.

ಎಲ್ಲರ ಅಭಿವೃದ್ಧಿಯೇ ರಾಷ್ಟ್ರದ ಅಭಿವೃದ್ಧಿ (ಸಬ್ ಕಾ ಸಾಥ್ ಸಬ್ ಕಾ ವಿಕಾಸ್) ಎಂಬ ಚಿಂತನೆ ಹೊಂದಿರುವ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಕಾಳಜಿಯನ್ನು ನಾವು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆಲಸ  ಮಾಡುತ್ತಿದ್ದೇವೆ.  ನಮ್ಮ ವೇಗಕ್ಕೆ ತಕ್ಕಂತೆ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರು ಮತ್ತು ಎಲ್ಲ ಸದಸ್ಯರೂ ಒಗ್ಗಟ್ಟಿನಿಂದ ಕೆಲಸ  ಮಾಡಿ ಸಮುದಾಯದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಚಿವರು ಹೇಳಿದರು.   ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿಯವರೂ ಸಹ  ಅಲ್ಪಸಂಖ್ಯಾತ ಬಂಧುಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಚಿಂತನೆಯನ್ರ್ನೆಂದಿದ್ದಾರೆ. ಹಿಂದಿನ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಅವರು ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದ ಶ್ರೀಮತಿ ಶಶಿಕಲಾ ಜೊಲ್ಲೆಯವರು ಇಡೀ ರಾಷ್ಟ್ರದಲ್ಲಿಯೇ ಮಾದರಿಯಾದ ಹಜ್ ಭವನ ನಿರ್ಮಾಣಕ್ಕೆ ಹಿಂದಿನ ಮೂವರು ಮುಖ್ಯಮಂತ್ರಿಗಳ ಸಹಾಯ ಸಹಕಾರಗಳನ್ನು ವಿವರಿಸಿದರು.

Advertisement

ರಾಜ್ಯದಲ್ಲಿ 32 ಸಾವಿರ ವಕ್ಫ್ ಸಂಸ್ಥೆಗಳ 46 ಸಾವಿರಕ್ಕೂ ಹೆಚ್ಚಿನ ಆಸ್ತಿಗಳಿವೆ. ಎಲ್ಲ ಆಸ್ತಿಗಳನ್ನು ಅಭಿವೃದ್ಧಿಪಡಿಸಿ ಆ ಮೂಲಕ ಆದಾಯ ಬರುವಂತೆ ಮಾಡಿದರೆ ಈ ಸಮುದಾಯ ಪ್ರತಿಯೊಬ್ಬ ಬಡ ವ್ಯಕ್ತಿಯೂ ಅರ್ಥಿಕವಾಗಿ ಅಭಿವೃದ್ಧಿಯಾಗಲು ಸಹಕಾರಿಯಾಗುತ್ತದೆ.  ಮೊದಲು ಆಸ್ತಿಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲು  ಸಹ ಮುಂದಾಗಬೇಕು. ಇಲಾಖೆಯ ಸಚಿವೆಯಾಗಿ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ  ಹೇಳಿದರು.

ಕೆಲ ವಕ್ಫ್ ಆಸ್ತಿಗಳು ಇನ್ನೂ ನ್ಯಾಯಾಲಯದಲ್ಲಿರುವುದರಿಂದ ಅಭಿವೃದ್ಧಿ ಸಾಧ್ಯವಾಗಿಲ್ಲ. ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಮುಂದಾದರೆ ಆಸ್ತಿಗಳ ಅಭಿವೃದ್ಧಿಪಡಿಸಬಹುದಾಗಿದೆ. ಈ ನಿಟ್ಟಿನಲ್ಲಿ ಹೊಸ ಅಧ್ಯಕ್ಷರು ಹೆಚ್ಚಿನ ಗಮನಹರಿಸಬೇಕು. ನಮ್ಮ ಸರ್ಕಾರವು ವಕ್ಪ್ ಆಸ್ತಿಗಳ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳನ್ನು ಕೇಂದ್ರ ವಕ್ಫ್  ಮಂಡಳಿ ಸದಸ್ಯರು ಮುಕ್ತಕಂಠದಿಂದ ಶ್ಲಾಘಿಸಿದ್ದಾರಲ್ಲದೇ ಕೇಂದ್ರ ಮಂಡಳಿಯಿಂದ ಹೆಚ್ಚಿನ ನೆರವು  ನೀಡುವ ಭರವಸೆ ನೀಡಿದ್ದಾರೆ. ಕೇಂದ್ರ ಮಂಡಳಿಯ ಹೆಚ್ಚಿನ ನೆರವನ್ನು ಪಡೆಯಲು ಮಂಡಳಿ ಪ್ರಯತ್ನಿಸಬೇಕೆಂದು ಸಚಿವರು ಹೇಳಿದರು.

ವಕ್ಫ್ ಮಂಡಳಿ ಅಧ್ಯಕ್ಷರ ಚುನಾವಣೆ ಸಂಬಂಧದಲ್ಲಿನ ಎಲ್ಲ ತೊಡಕುಗಳನ್ನು ನಿವಾರಿಸಿ  ಅಧ್ಯಕ್ಷರ ಚುನಾವಣೆ ಸಾಂಗೋಪಾಂಗವಾಗಿ ನಡೆಯುವಂತಾಗಲು ಎಲ್ಲ ರೀತಿಯಿಂದಲೂ ಶ್ರಮಿಸಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಎನ್. ಮಾಧುಸ್ವಾಮಿ, ವಿಧಾನಪರಿಷತ್ತಿನ ಸದಸ್ಯ ಕೆ. ರವಿಕುಮಾರ್ ಹಾಗೂ ಜಗದೀಶ್ ಅವರಿಗೆ  ಕೃತಜ್ಞತೆ ಸಲ್ಲಿಸಿದರು.

ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ರಾಜ್ಯದ ವಕ್ಫ್ ಆಸ್ತಿಗಳು ಸಾಕಷ್ಟಿದ್ದರೂ ವಿವಾದ ಹಾಗೂ ವ್ಯಾಜ್ಯಗಳಿಂದಾಗಿ ಅವುಗಳ ಅಭಿವೃದ್ಧಿ ಸಾಧ್ಯವಾಗಿಲ್ಲ. ಪ್ರತಿಯೊಬ್ಬರೂ ವ್ಯಾಜಕ್ಕೆ ಕೈಹಾಕದೇ ಚರ್ಚೆ ಮೂಲಕ ವಿವಾದಗಳನ್ನು  ಬಗೆಹರಿಸಿಕೊಳ್ಳಬೇಕು ಎಂದರು. ಯಾವುದೇ ಮಂಡಳಿ ಇಲ್ಲವೇ ಸರ್ಕಾರದ ಪ್ರಯೋಜನ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿದಾಗಲೇ ಎಲ್ಲರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಇದೇ ಮೊದಲ ಬಾರಿ ವಕ್ಫ್ ಮತ್ತು ಹಜ್ ಖಾತೆಗೆ ಸಮರ್ಪಣಾ ಮನೋಭಾವದ ಸಚಿವರು ದೊರೆತಿದ್ದು, ಅವರು ಸಹಕಾರ ಪಡೆದುಕೊಂಡು ಹೆಚ್ಚಿನ ರೀತಿಯ ಅಭಿವೃದ್ಧಿಗೆ ಮುಂದಾಗಬೇಕೆಂದು ನೂತನ ಅಧ್ಯಕ್ಷರು ಮತ್ತು ಮಂಡಳಿಯ ಎಲ್ಲ ಸದಸ್ಯರಿಗೆ ಮಾಧುಸ್ವಾಮಿ ಕಿವಿ ಮಾತು ಹೇಳಿದರು.

ನೂತನ ಅಧ್ಯಕ್ಷ ಮಹಮದ್ ಷಫಿ ಸಾ ಆದಿ  ಅವರು ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲ ಸದಸ್ಯರು ಮತ್ತು ಇದಕ್ಕೆ ಸಹಕರಿಸಿದ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ, ಜೆ.ಸಿ. ಮಾಧುಸ್ವಾಮಿ ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ತಮ್ಮ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ನೆರವು ನೀಡಬೇಕೆಂದು ಕೋರಿದರು.

ಸಭೆಯಲ್ಲಿ ವಿಧಾನಪರಿಷತ್ತಿನ ಸದಸ್ಯ ಕೆ. ರವಿಕುಮಾರ್, ವಕ್ಫ್ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next