Advertisement

ಬೀಳಗಿಯಲ್ಲಿ ನಿರಾಣಿ ರೋಡ್‌ ಶೋ

12:30 PM May 09, 2023 | Team Udayavani |

ಬಾಗಲಕೋಟೆ: ದೇಶವು ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಕಳೆದ 9 ವರ್ಷಗಳಲ್ಲಿ ಆದ ಅಭಿವೃದ್ಧಿಯದ್ದು, ಒಂದು ತೂಕವಾದರೆ. 60 ವರ್ಷಗಳ ಕಾಂಗ್ರೆಸ್‌ ಅಭಿವೃದ್ಧಿ ಈ ತೂಕಕ್ಕೆ ಎಲ್ಲಿಯೂ ಸಮನಾಗುವುದಿಲ್ಲ. 60 ವರ್ಷಗಳಲ್ಲಿ ಕಾಂಗ್ರೆಸ್‌ ಮತ್ತು ಗಾಂಧಿ ಕುಟುಂಬ ಅಭಿವೃದ್ಧಿಯಾದರೆ ಕಳೆದ 10 ವರ್ಷಗಳಲ್ಲಿ ಪ್ರತಿಯೊಬ್ಬ ಭಾರತೀಯನ ವೈಯಕ್ತಿಕ ಬದುಕು ವಿಕಾಸದೆಡೆಗೆ ಸಾಗುತ್ತಿದೆ ಎಂದು ಬೀಳಗಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಹೇಳಿದರು.

Advertisement

ಬೀಳಗಿ ಕ್ಷೇತ್ರದ ಕಲಾದಗಿ, ಗದ್ದನಕೇರಿ, ಮುರನಾಳ ಹಾಗೂ ಬೀಳಗಿ ಪಟ್ಟಣದಲ್ಲಿ ಭರ್ಜರಿ ರೋಡ್‌ ಶೋ ನಡೆಸಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್‌ ಪ್ರಜಾಪ್ರಭುತ್ವದ ಆಶಯವಾದ ಸರ್ವರಿಗೂ ಸಮಪಾಲು, ಸಮಬಾಳು ತತ್ವವನ್ನು ಗಾಳಿಗೆ ತೂರಿ , ಶೋಷಿತರನ್ನು ಅರ್ಧ ಶತಮಾನಗಳ ಕಾಲ ಶೋಷಿತರನ್ನಾಗಿಟ್ಟು ವೋಟ್‌ಬ್ಯಾಂಕ್‌ ರಾಜಕಾರಣ ಮಾಡಿದೆ. ಮೋದಿಜಿಯವರ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ ಮಂತ್ರ ಭಾರತವನ್ನು ಒಂದು ರಾಷ್ಟ್ರವಾಗಿ ತೆಗೆದುಕೊಂಡು ಹೋಗುತ್ತಿದೆ. ನಮ್ಮ ಡಬಲ್‌ ಇಂಜಿನ್‌ ಸರ್ಕಾರ ಎಲ್ಲ ಸಮುದಾಯಕ್ಕೂ ಮಿಸಲಾತಿ ಸೌಕರ್ಯವನ್ನು ಪುನರ್‌ ಹಂಚಿಕೆ ಮಾಡಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಎತ್ತಿ ಹಿಡಿದಿದೆ. ಮಿಸಲಾತಿಯೊಂದಿಗೆ ಉತ್ತಮ ಶಿಕ್ಷಣ, ಮೂಲಭೂತ ಸೌಕರ್ಯ, ಆರೋಗ್ಯ, ನೀರಾವರಿ, ಸಮೃದ್ಧ ಕೃಷಿ ಎಲ್ಲವೂ ನಮ್ಮ ಬಿಜೆಪಿ ಸರ್ಕಾರದಿಂದ ಸಾಧ್ಯವಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ಗೆ ಬೀಳಗಿಯಲ್ಲಿ ಮುಗಿದ ಅಧ್ಯಾಯ, ಪಾಳು ಬಿದ್ದ ಮನೆ, ಜನತೆ ವಿಕಾಸದ ಹಾದಿಯಲ್ಲಿದ್ದಾರೆ. ಕಾಂಗ್ರೆಸ್‌ಗೆ ಈ ಪದದ ಅರ್ಥವೇ ಗೊತ್ತಿಲ್ಲ. ನಮ್ಮ ತೊಟದಲ್ಲಿರುವ ಕಾಂಗ್ರೆಸ್‌ ಕಸ ನಮ್ಮ ಬೆಲೆಗೆ ಮಾರಕ ಎಂಬ ಸತ್ಯವನ್ನು ಜನತೆ ಅರಿತಿದ್ದಾರೆ. ಜೆ. ಟಿ. ಪಾಟೀಲ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಬೀಳಗಿಯಲ್ಲಿಯೂ ಜನತೆ ಕಾಂಗ್ರೆಸ್‌ ತಿರಸ್ಕರಿಸಿದ್ದಾರೆ. ಹನುಮಭಕ್ತರನ್ನು ನಿಂದಿಸಿದವರನ್ನು ಜನ ಒಪ್ಪಲು ಸಿದ್ಧವಿಲ್ಲ. ಕರ್ನಾಟಕದಲ್ಲಿ ಬಿಜೆಪಿ 130 ಸ್ಥಾನ ಪಡೆದು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಅವರು ಹೇಳಿದರು.

ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಜನತೆಯ ಸ್ಪಂದನೆ ಕಂಡು ಹೆಮ್ಮೆಯಾಗುತ್ತಿದೆ. ನಮ್ಮ ಜನತೆ ನನ್ನ ಸೇವಾ ಕಾರ್ಯವನ್ನು ಒಪ್ಪಿಕೊಂಡಿದ್ದಾರೆ. ಅವರ ಅವಶ್ಯಕತೆ ಅರಿತು ನಾನು ಕೆಲಸ ಮಾಡಿದ್ದೇನೆ. ಮುಂದಿನ 5 ವರ್ಷಗಳಲ್ಲಿ ಬೀಳಗಿ ರಾಜ್ಯದಲ್ಲಿಯೇ ಆದರ್ಶ ಮತಕ್ಷೇತ್ರ ಮಾಡುವ ಸಂಕಲ್ಪ ನನ್ನದಾಗಿದೆ. ಮುಂದಿನ 18 ತಿಂಗಳಲ್ಲಿ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸಿ ರೈತನ ಬದುಕನ್ನು ಹಸಿರಾಗಿಸಲು ನಾನು ಬದ್ಧನಾಗಿದ್ದೇನೆ. ನಮ್ಮ ಮಕ್ಕಳಿಗೆ ಶಿಕ್ಷಣ, ಉತ್ತಮ ರಸ್ತೆಗಳು, ವೈದ್ಯಕೀಯ ಸೇವೆ, ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗ, ವಿಮಾನ ನಿಲ್ದಾಣ, ಕೈಗಾರಿಕೆಗಳ ಮೂಲಕ ಯುವಕರ ಕೈಗೆ ಉದ್ಯೋಗ ಎಲ್ಲದರಲ್ಲಿಯೂ ಮುಂದಿನ ದಿನಗಳಲ್ಲಿ ಬೀಳಗಿ ನಂ.1 ಆಗಲಿದೆ. ಈ ಬಾರಿಯೂ ನಿಮ್ಮ ಮನೆ ಮಗನಿಗೆ ಆಶಿರ್ವದಿಸಿ ಅಧಿಕ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ವಿಧಾನಪರಿಷತ್‌ ಸದಸ್ಯರಾದ ಪಿ.ಎಚ್‌. ಪೂಜಾರ, ಹನುಮಂತ ನಿರಾಣಿ, ಮುಖಂಡರಾದ ವಿಜಯ ನಿರಾಣಿ, ಈರಣ್ಣ ಗಿಡ್ಡಪ್ಪಗೋಳ, ಈರಣ್ಣ ತೋಟದ, ಹೂವಪ್ಪ ರಾಠೊಡ, ಮಹಾಂತೇಶ ಕೋಲಕಾರ, ವಿಠ್ಠಲ ಬಾಗೇವಾಡಿ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next