ಬೆಂಗಳೂರು: ಹಲವು ಕುತೂಹಲಗಳಿಗೆ ಕಾರಣವಾಗಿದ್ದ ರಾಜರಾಜೇಶ್ವರಿ ನಗರ ಉಪಚುನಾವಣೆಯ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಿದ್ದ ಮುನಿರತ್ನ ಅವರು ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ.
ಇದೇ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ನ ಕುಸುಮಾ ಅವರು ಸೋಲನುಭವಿಸಿದ್ದಾರೆ. ಜೆಡಿಎಸ್ ನ ಕೃಷ್ಣಮೂರ್ತಿ ಅವರದ್ದು ತೀರಾ ಸಾಧಾರಣ ಪ್ರದರ್ಶನ.
ಇದುವರೆಗೆ 25 ಸುತ್ತುಗಳ ಮತ ಎಣಿಕೆ ಮುಕ್ತಾಯವಾಗಿದ್ದು, ಮುನಿರತ್ನ ಅವರು 1,25,734 ಮತಗಳನ್ನು ಪಡೆದರೆ ಕಾಂಗ್ರೆಸ್ ನ ಕುಸುಮಾ 67,798 ಮತಗಳನ್ನು ಪಡೆದರು. ಜೆಡಿಎಸ್ ಗೆ ಲಭಿಸಿದ್ದು 10,251 ಮತಗಳಷ್ಟೇ. ಇದರೊಂದಿಗೆ ಮುನಿರತ್ನ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕುಸುಮಾ ಅವರಿಗಿಂದ 57,936 ಹೆಚ್ಚು ಮತಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ:ಶಿರಾದಲ್ಲಿ ‘ವಿಜಯ’: ಕಲ್ಪತರು ನಾಡಿನಲ್ಲಿ ಕಮಲ ಅರಳಿಸಿದ ಡಾ.ರಾಜೇಶ್ ಗೌಡ
ಡಿಕೆಶಿಗೆ ಮುಖಭಂಗ: ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಚುನಾವಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಆರ್.ಆರ್. ನಗರ ಫಲಿತಾಂಶ ದೊಡ್ಡ ಹಿನ್ನಡೆಯಾಗಿದೆ. ಪ್ರತಿಷ್ಠೆಯ ವಿಚಾರವಾಗಿ ವೈಯಕ್ತಿಕ ಹೊಣೆಗಾರಿಕೆಯೊಂದಿಗೆ ಕೆಲಸ ನಿರ್ವಹಿಸಿದ್ದ ಡಿಕೆ ಸಹೋದರರಿಗೆ ಕುಸುಮಾ ಸೋಲು ಮುಖಭಂಗ ಉಂಟುಮಾಡಿದೆ.
ಮಿನಿಸ್ಟರ್ ಮುನಿರತ್ನ: ಉಪಚುನಾವಣೆಯಲ್ಲಿ ಗೆದ್ದ ಕೂಡಲೇ ಮುನಿರತ್ನಗೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಇದೀಗ ಚುನಾವಣೆಯಲ್ಲಿ ಗೆದ್ದಾಯ್ತು, ಇನ್ನು ಸಚಿವಗಿರಿಯೊಂದೇ ಬಾಕಿ.