ಬೆಳಗಾವಿ: ಜಿಲ್ಲೆಯ ಆಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ. ಅದೇ ಬಿಜೆಪಿ ಸಾಧನೆಯ ದೊಡ್ಡ ಪಟ್ಟಿಯೇ ಇದೆ. ಇದರಿಂದ ಹತಾಶಗೊಂಡಿರುವ ಕಾಂಗ್ರೆಸ್ ಮತದಾರರಿಗೆ ಹಣ ಹಂಚುವ ಕಾರ್ಯ ಆರಂಭಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಆರೋಪ ಮಾಡಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಗೋಕಾಕ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಮತದಾರರಿಗೆ ಹಣ ಹಂಚುವಾಗ ನಮ್ಮ ಕಾರ್ಯಕರ್ತರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಇದರ ಹಿಂದೆ ಇರುವುದು ಗೊತ್ತಾಗಿದೆ ಎಂದು ಹೇಳಿದರು.
ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ನಮ್ಮವರು ಹೋದಾಗ ಹಣ ಹಿಡಿದುಕೊಟ್ಟವರ ಮೇಲೆಯೇ ಪ್ರಕರಣ ದಾಖಲಿಸುವ ಪ್ರಯತ್ನವನ್ನು ಪೊಲೀಸರು ಮಾಡಿದ್ದಾರೆ. ಇಲ್ಲಿ ಕಾಂಗ್ರೆಸ್ ನವರಿಂದ ಅಧಿಕಾರ ದುರುಪಯೋಗವಾಗುತ್ತಿದೆ. ನಾವು ಈ ಸಂಬಂಧ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದರು.
ಈ ಚುನಾವಣೆ ಎರಡನೇ ಸ್ವಾತಂತ್ರ‍್ಯ ಹೋರಾಟವಾಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿಗಳು ಏನೇನೋ ಹೇಳುತ್ತಾರೆ. ಇದು ಬ್ರಿಟಿಷರ ವಿರುದ್ಧದ ಹೋರಾಟವೇ ಎಂದು ಮರು ಪ್ರಶ್ನೆ ಹಾಕಿದರು.
ಕೊರೊನಾ ಸೋಂಕಿನಿಂದ ದೆಹಲಿಯಲ್ಲಿ ಮೃತಪಟ್ಟ ಸುರೇಶ ಅಂಗಡಿ ಅವರ ಮೃತದೇಹವನ್ನು ಬಿಜೆಪಿಯವರು ಬೆಳಗಾವಿಗೆ ತರಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಮೃತದೇಹ ತರಲು ಸಾಕಷ್ಟು ಪ್ರಯತ್ನ ಮಾಡಿದೆವು. ಆಗ ಕಾನೂನು ತೊಡಕಿತ್ತು. ನಿಯಮಗಳು ಬಹಳ ಕಠಿಣವಾಗಿದ್ದವು. ಇದರ ಅರಿವಿಲ್ಲದೆ ಶಿವಕುಮಾರ ಇದರಲ್ಲೂ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ತಿರುಗೇಟು ನೀಡಿದರು.