Advertisement

ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಚಾರ

12:17 AM Nov 26, 2019 | Team Udayavani |

ಬೆಂಗಳೂರು: ಶಿವಾಜಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಸರವಣ ಅವರು ತಮ್ಮ ಪತ್ನಿ ಬಿಬಿಎಂಪಿ ಸದಸ್ಯೆ ಮಮತಾ ಸರವಣ ಅವರೊಂದಿಗೆ ಸೋಮವಾರ ಹಲಸೂರು ವಾರ್ಡ್‌ನ ಶ್ರೀ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯ ಆರಂಭಿಸಿದರು. ಚಿಕ್ಕಪೇಟೆ ಶಾಸಕ ಉದಯ್‌ ಗರುಡಾಚಾರ್‌ ಅವರು ಅಭ್ಯರ್ಥಿ ಸರವಣ ಮತ್ತು ಮಮತಾ ಸರವಣ ಅವರಿಗೆ ಸಾಥ್‌ ನೀಡಿ ಮನೆ, ಮನೆಗೆ ತೆರಳಿ ಮತಯಾಚನೆ ಮಾಡಿದರು.

Advertisement

ಈ ಭಾಗದ ಜನತೆ ಗೌರವಪೂರ್ವಕವಾಗಿ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಸರವಣ ಅವರು, ಹಲಸೂರು ವಾರ್ಡ್‌ನ ನಾಗರಿಕರು ನನಗೆ ಚಿರಪರಿಚಿತ. ಇಲ್ಲಿನ ಪ್ರತಿಯೊಬ್ಬರ ಕಷ್ಟಗಳನ್ನು ಕಂಡಿದ್ದೇನೆ ಮತ್ತು ಕೇಳಿದ್ದೇನೆ. ಪಾಲಿಕೆ ಸದಸ್ಯನಾಗಿ ಇವರ ಜೊತೆ ದುಡಿದ್ದೇನೆ. ಈ ನಮ್ಮ ಕ್ಷೇತ್ರದಲ್ಲಿ ಹೆಚ್ಚಾಗಿ ಅಲ್ಪಸಂಖ್ಯಾತರೇ ಇದ್ದಾರೆ. ಇವರಲ್ಲಿ ನಾನೂ ಒಬ್ಬನಾಗಿ ಬೆಳೆದಿದ್ದೇನೆ.

ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಹಾಗೂ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಹಲವಾರು ಹೊಸ ಹೊಸ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿದ್ದಾರೆ. ಇದೆಲ್ಲವೂ ಈ ಭಾಗದ ಜನತೆಗೆ ತಲುಪಬೇಕಿದೆ. ಆ ನಿಟ್ಟಿನಲ್ಲಿ ನಾನು ನಿಮ್ಮ ಸೇವಕನಾಗಿ ದುಡಿಯಲು ಇಚ್ಛಿಸಿದ್ದೇನೆ ಎಂದರು.

ಸಂಜೆ ವಸಂತಪುರ ವ್ಯಾಪ್ತಿಯ ಬಡಾವಣೆಗಳ ನಿವಾಸಿಗಳ ಮನೆಗೆ ಭೇಟಿ ಕೊಟ್ಟು ಮತಯಾಚನೆ ಮಾಡಿದರು. ಅಂಗಡಿ ವ್ಯಾಪಾರಿಗಳು ತಾವು ಅನುಭವಿಸುವ ಕಷ್ಟಗಳನ್ನು ಸರವಣ ಅವರಿಗೆ ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಶಾಸಕ ಉದಯ್‌ ಗರುಡಾಚಾರ್‌, ಶ್ರೀಮತಿ ಮಮತಾ ಸರವಣ, ಸ್ಥಳೀಯ ಮುಖಂಡರು ಹಾಗೂ ಅಪಾರ ಕಾರ್ಯಕರ್ತರು ಜತೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next