ತಿ.ನರಸೀಪುರ: ತಾಲೂಕಿನ ಸೋಮನಾಥಪುರ ಜಿಪಂ ಕ್ಷೇತ್ರದ ಉಪ ಚುನಾವಣೆಯಲ್ಲಿ ಗ್ರಾಮೀಣ ಮತದಾರರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಹೇಳಿದರು.
ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಪಾದಯಾತ್ರೆ ನಡೆಸಿ ಜಿಪಂ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ವೆಂಕಟೇಶ್ ಪರ ಮತಯಾಚಿಸಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದರೂ ಬಿಜೆಪಿಗೆ ಅಧಿಕಾರ ತಪ್ಪಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿವುದಕ್ಕೆ ತಕ್ಕ ಪಾಠ ಕಲಿಸಲು ಉಪ ಚುನಾವಣೆಯಲ್ಲಿ ಜಿಪಂ ಕ್ಷೇತ್ರದ ಮತದಾರರು ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಸೋಮನಾಥಪುರ ಕ್ಷೇತ್ರಾದ್ಯಂತ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗೆ ಮತದಾರರು ಮತ ಹಾಕಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವದ ಆಡಳಿತ ಮೆಚ್ಚಿ ಬಿಜೆಪಿ ಅಭ್ಯರ್ಥಿ ವೆಂಕಟೇಶ್‌ರನ್ನು ಎಲ್ಲಾ ವರ್ಗದ ಜನರು ಬೆಂಬಲಿಸಿ ಆಯ್ಕೆ ಮಾಡಲಿದ್ದಾರೆ ಎಂದು ಸಿ.ರಮೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಸೋಮನಾಥಪುರ ಜಿಪಂ ಕ್ಷೇತ್ರದ ಉಪ ಚುನಾವಣೆಗೆ ಎರಡೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಉಕ್ಕಲಗೆರೆ ಗ್ರಾಮ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸಂಚರಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮನೆಮನೆಗೆ ತೆರಳಿ ಕರಪತ್ರ ವಿತರಿಸಿ ಅಭ್ಯರ್ಥಿ ವೆಂಕಟೇಶ್ ಪರ ಮತ ಯಾಚಿಸಿದರು.
ಈ ವೇಳೆ ಜಿಪಂ ಉಪಾಧ್ಯಕ್ಷ ಕೈಯಂಬಳ್ಳಿ ಜಿ.ನಟರಾಜು, ಬಿಜೆಪಿ ಕ್ಷೇತ್ರಾಧ್ಯಕ್ಷ ಎಚ್.ಎಂ.ಪರಶಿವಮೂರ್ತಿ, ತೋಟದಪ್ಪ ಬಸವರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಚಿನ್ನಂಬಳ್ಳಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಬಸವರಾಜು, ಟೌನ್ ಅಧ್ಯಕ್ಷ ಬಿ.ವೀರಭದ್ರಪ್ಪ, ನಾಗರಾಜು(ತಾತ), ಪ್ರದೀಪ್ ಹಾಗೂ ಇನ್ನಿತರರಿದ್ದರು.