ಹೊಸಂಗಡಿ: ರಾಷ್ಟ್ರೀಯ ಚಿಂತನೆಯೊಂದಿಗೆ ದೇಶದ ಸಮಗ್ರ ಅಭಿವೃದ್ಧಿಯ ಹರಿಕಾರದೊಂದಿಗೆ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷಕ್ಕೆ ಪರ್ಯಾಯವಾಗಿ ಬೇರೊಂದು ಶಕ್ತಿ ನಿರ್ಮಿಸಲು ಕಾಂಗ್ರೆಸ್ ಹಾಗೂ ಎಡಪಕ್ಷಗಳಿಗೆ ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಪ್ರಬುದ್ಧ ನಿರ್ಧಾರಗಳು, ಸಂಘಟಿತ ಆಡಳಿತ ತಂತ್ರಗಳಿಂದ, ಅಂತಾರಾಷ್ಟ್ರೀಯ ಮಟ್ಟದಲ್ಲಿನ ಸಂಬಂಧಗಳ ಧನಾತ್ಮಕತೆಯಿಂದ ವಿಶ್ವಗುರುವಿನ ಕನಸನ್ನು ಸಾಕಾರತೆಯ ಹೊಸ್ತಿಲಲ್ಲಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಸಿ.ಕೆ. ಪದ್ಮ ನಾಭನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಹೊಸಂಗಡಿ ಹಿಲ್‌ಸೈಡ್ ಸಭಾಂಗಣದಲ್ಲಿ ನಡೆದ ಮಂಜೇಶ್ವರ ಮಂಡಲ ಮಟ್ಟದ ವಿವಿಧ ಸ್ತರಗಳ ಬಿಜೆಪಿ ಕಾರ್ಯಕರ್ತರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿಯ ಶಕ್ತಿಕೇಂದ್ರವಾಗಿ ಗುರುತಿಸಲ್ಪಡುತ್ತಿರುವ ಮಂಜೇಶ್ವರದಲ್ಲಿ ಪಕ್ಷವನ್ನು ಇನ್ನಷ್ಟು ಪ್ರಬಲಗೊಳಿಸುವ ಅಗತ್ಯವಿದೆ ಎಂದು ತಿಳಿಸಿದ ಅವರು ಗೆಲುವಿನ ಹೊಸ್ತಿಲ ಬಳಿ ನಿಂತಿರುವ ಗುರಿಯನ್ನು ಇನ್ನಷ್ಟು ಹತ್ತಿರಕ್ಕೆಳೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜನಸಾಮಾನ್ಯರ ಬಳಿಗೆ ತೆರಳಿ ಕೇಂದ್ರ ಸರಕಾರದ ಯೋಜನೆಗಳನ್ನು ತಲಪಿಸಬೇಕೆಂದು ಕರೆನೀಡಿದರು.
ಸತೀಶ್ಚಂದ್ರ ಭಂಡಾರಿ ಕೋಳಾರು ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಪ್ರಮೀಳಾ ಸಿ.ನಾೖಕ್, ಸುರೇಶ್ ಕುಮಾರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಪಿ. ರಮೇಶ್, ಸತ್ಯಶಂಕರ ಭಟ್, ಬಾಬು ಮಾಸ್ತರ್, ಅಬ್ದುಲ್ಲ ಪಿ.ಎಂ., ಸುಮಿತ್‌ರಾಜ್, ಪುಷ್ಪಾ ಅಮೆಕ್ಕಳ, ಎ.ಕೆ. ಕಯ್ನಾರ್, ಪ್ರೇಮಲತಾ ಎಸ್. ಉಪಸ್ಥಿತರಿದ್ದು ಮಾತನಾಡಿದರು. ಮುರಳೀಧರ ಯಾದವ್ ನಾಯ್ಕಪು ಸ್ವಾಗತಿಸಿ, ಆದರ್ಶ ಬಿ.ಎಂ. ವಂದಿಸಿದರು.