ದಾವಣಗೆರೆ: ರೈತರ ಸಾಲ ಮನ್ನಾಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಲು ಮೇ 28ರಂದು ಕರ್ನಾಟಕ ರಾಜ್ಯ ಬಂದ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೀಡಿರುವ ಕರೆಗೆ ಜಿಲ್ಲೆಯ ಜನರು ಬೆಂಬಲಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮನವಿ ಮಾಡಿದ್ದಾರೆ.
ಶನಿವಾರ, ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಚುನಾವಣೆಗೂ ಮುನ್ನ
ತಾವು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 24 ತಾಸಿನೊಳಗೆ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದರು. ಆದರೆ, ಅಧಿಕಾರ ವಹಿಸಿಕೊಂಡ ನಂತರ ಈ ಭರವಸೆ ಹುಸಿಯಾಗುವಂತೆ ಕಾಣುತ್ತಿದೆ.
ಹಾಗಾಗಿ ಕುಮಾರಸ್ವಾಮಿ ತಾವು ನೀಡಿದ ಭರವಸೆ ಈಡೇರಿಸಲು ಆಗ್ರಹಿಸಿ ಬಂದ್ ಕರೆ ನೀಡಲಾಗಿದೆ. ರೈತರ ಹಿತದೃಷ್ಟಿಯಿಂದ ಜಿಲ್ಲೆಯ ವರ್ತಕರು, ಆಟೋ, ಬಸ್ ಚಾಲಕರು, ಮಾಲೀಕರು, ಎಲ್ಲಾ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ತಮ್ಮ ವ್ಯಾಪಾರ ವಹಿವಾಟು ಬಂದ್ ಮಾಡಿ, ಸಹಕರಿಸಬೇಕೆಂದು ಅವರು ಕೋರಿದರು.
ರೈತನನ್ನು ದೇಶದ ಬೆನ್ನೆಲಬು ಎಂದು ಪರಿಗಣಿಸಲಾಗಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಆಗಿದೆ. ಆದರೆ, ಕುಮಾರಸ್ವಾಮಿ ರೈತರ ಜೀವನದೊಂದಿಗೆ ಆಟವಾಡಲು ಹೊರಟಿದ್ದಾರೆ. ಇಂತಹ ಆಟಕ್ಕೆ ಬ್ರೆಕ್ ಹಾಕಬೇಕು. ಜೊತೆಗೆ ರೈತರ ಸಾಲ ಮನ್ನಾಕ್ಕೆ ಕ್ರಮ ವಹಿಸಬೇಕೆಂದು ಬಂದ್ ಮೂಲಕ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.
ಮೇ 28ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ಮಾಡಲು ನಮ್ಮ ಪಕ್ಷದ ಕಾರ್ಯಕರ್ತರು ಎಲ್ಲಾ ಕಡೆ ತೆರಳಿ, ಮನವಿ ಮಾಡಲಿದ್ದಾರೆ. ಶಾಂತಿಯುತ ಬಂದ್ ಆಚರಿಸಿ, ರೈತರಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎನ್. ಶಿವಕುಮಾರ್, ರಮೇಶ ನಾಯ್ಕ, ರಾಜ್ಯ ಸ್ಲಂ ಮೋರ್ಚಾ ಮುಖಂಡ ಪಿಸಾಳೆ ಕೃಷ್ಣ, ಬೇತೂರು ಬಸವರಾಜ್ ಸುದ್ದಿಗೋಷ್ಠಿಯಲ್ಲಿದ್ದರು.
15 ಲಕ್ಷ ರೂ. ಖಾತೆಗೆ ಹಾಕ್ತೇನೆ ಅಂದಿಲ್ಲ ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆಗೂ ಮುನ್ನ ತಾವು ಚುನಾವಣೆಯಲ್ಲಿ ಗೆದ್ದರೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು ಎಂದು ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುತ್ತಿದೆ. ವಾಸ್ತವದಲ್ಲಿ ಮೋದಿಯವರು ಎಲ್ಲೂ ಸಹ 15 ಲಕ್ಷ ರೂ. ಖಾತೆಗೆ ಹಾಕುವ ಕುರಿತು ಮಾತನಾಡಿಲ್ಲ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ಈ ಅಂಶ ಇಲ್ಲ. ಕಪ್ಪು ಹಣ ತರುವುದಾಗಿ ಭರವಸೆ ನೀಡಿದ್ದು ನಿಜ. ಈ ಯತ್ನ ನಡೆಯುತ್ತಿದೆ.
ಯಶವಂತರಾವ್ ಜಾಧವ್, ಬಿಜೆಪಿ ಜಿಲ್ಲಾಧ್ಯಕ್ಷ