Advertisement

ಬಿಜೆಪಿಯಲ್ಲಿ ಮತ್ತೆ ಬ್ರಿಗೇಡ್‌ ಸಮರ? ಈಶ್ವರಪ್ಪ ಬಹಿರಂಗ ಅತೃಪ್ತಿ

03:45 AM Mar 05, 2017 | |

ಬೆಂಗಳೂರು: ಬಿಜೆಪಿ ಅಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಅವರೊಂದಿಗಿನ ಅತೃಪ್ತಿ ದೆಹಲಿ ಮಟ್ಟದಲ್ಲಿ ಶಮನಗೊಂಡಿದೆ ಎಂದು ಭಾವಿಸಿಕೊಳ್ಳುವಷ್ಟರಲ್ಲೇ, “ಬ್ರಿಗೇಡ್‌ನ‌ಲ್ಲಿ ಗುರುತಿಸಿಕೊಂಡಿರುವ ಬಿಜೆಪಿಯವರಿಗೆ ನ್ಯಾಯ ಸಿಗುವವರೆಗೆ ಸುಮ್ಮನೆ ಕೂರುವುದಿಲ್ಲ’ ಎಂದು ಪಕ್ಷದ ಹಿರಿಯ ಮುಖಂಡ ಕೆ ಎಸ್‌ ಈಶ್ವರಪ್ಪ ಕಿಡಿಕಾರಿದ್ದಾರೆ.

Advertisement

ಪಕ್ಷದ ವರಿಷ್ಠರ ಸೂಚನೆಯಂತೆ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಅನ್ನು ರಾಜಕೀಯೇತರ ಸಂಘಟನೆಯಾಗಿ ಪರಿವರ್ತಿಸಿರುವ ಈಶ್ವರಪ್ಪ, ಇದೀಗ ಅದೇ ಬ್ರಿಗೇಡ್‌ ವೇದಿಕೆಯಲ್ಲಿ ಬಿಜೆಪಿಯ ನಾಯಕರ ಬಗ್ಗೆ ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನಗರದಲ್ಲಿ ಬ್ರಿಗೇಡ್‌ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಈಶ್ವರಪ್ಪ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಅನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸಿಕೊಳ್ಳುವುದಿಲ್ಲ. ಆದರೆ, ಬ್ರಿಗೇಡ್‌ನ‌ಲ್ಲಿ ಗುರುತಿಸಿಕೊಂಡಿರುವ ಬಿಜೆಪಿಯವರಿಗೆ ನ್ಯಾಯ ಸಿಗುವವರೆಗೆ ಸುಮ್ಮನೆ ಕೂರುವುದಿಲ್ಲ ಎಂದು ಹೇಳಿದ್ದಾರೆ.

ಬ್ರಿಗೇಡ್‌ನ‌ಲ್ಲಿ ಗುರುತಿಸಿಕೊಂಡಿರುವ ಬಿಜೆಪಿಯ ಕೆಲವರನ್ನು ಅಮಾನತುಗೊಳಿಸಿರುವ ಆದೇಶ ವಾಪಸ್‌ ಪಡೆಯುವುದು, ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವುದು ಮುಂತಾದ ವಿಚಾರಗಳ ಬಗ್ಗೆ ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೊಂದಿಗೆ ಮಾತನಾಡಿದ್ದೇನೆ. ಆದರೆ, ವಿಳಂಬ ಏಕಾಗುತ್ತಿದೆಯೋ ಗೊತ್ತಿಲ್ಲ ಎನ್ನುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದರು. ಜತೆಗೆ ಎಲ್ಲಾ ಗೊಂದಲಗಳು ಶೀಘ್ರವೇ ನಿವಾರಣೆಯಾಗಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ತುಮಕೂರಿನಲ್ಲಿ ಶುಕ್ರವಾರ ಕೆಲವು ಬಿಜೆಪಿ ಮುಖಂಡರು ಸಭೆ ಸೇರಿ ತಮ್ಮ ಅಸಮಾಧಾನ ಹೊರಹಾಕಿರುವ ಬಗ್ಗೆಯೂ ಪ್ರಸ್ತಾಪಿಸಿದ ಈಶ್ವರಪ್ಪ, ಅಸಮಾಧಾನಿತ ನಾಯಕರಿಗೆ ವರಿಷ್ಠರನ್ನು ಭೇಟಿ ಮಾಡುವ ಪರಿಸ್ಥಿತಿ ಸೃಷ್ಟಿಸದೆ ಸ್ಥಳೀಯವಾಗಿಯೇ ಸಮಸ್ಯೆ ಬಗೆಹರಿಸಬೇಕು ಎಂಬ ಸಲಹೆಯನ್ನೂ ಬಿಜೆಪಿಯ ರಾಜ್ಯ ಮುಖಂಡರಿಗೆ ನೀಡಿದರು.

ಹಿಂದುಳಿದವರು, ದಲಿತರು ಹಾಗೂ ಬಡವರಿಗೆ ನ್ಯಾಯ ಸಿಗಬೇಕು ಎಂಬ ಕಾರಣಕ್ಕೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಚಟುವಟಿಕೆ ನಡೆಸುತ್ತಿದ್ದೇವೆಯೇ ಹೊರತು ಬಿಜೆಪಿ ಅಥವಾ ಯಡಿಯೂರಪ್ಪ ಅವರ ವಿರುದ್ಧ ಅಲ್ಲ. ಹೀಗಾಗಿ ಬಿಜೆಪಿಯಲ್ಲಿ ಭಿನ್ನಮತ, ಯಡಿಯೂರಪ್ಪ ವಿರುದ್ಧ ಅಸಮಾಧಾನ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸ್ಥಗಿತ ಇತ್ಯಾದಿ ಊಹಾಪೋಹಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಯಾರಿಗೆ ಅನ್ಯಾಯವಾಗಿದೆಯೋ ಅವರಿಗೆ ಸಾಮಾಜಿಕ ನ್ಯಾಯ ಸಿಗಬೇಕು ಎಂಬ ದೃಷ್ಟಿಯಿಂದ ಸಂಘಟಿಸಲಾಗುತ್ತಿರುವ ಬ್ರಿಗೇಡ್‌ನ‌ ಉದ್ದೇಶ ಸಾಧಿಸಿ ತೋರಿಸಿ ಎಂದು ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಸಲಹೆ ನೀಡಿದರು.

Advertisement

ತಾವು ರಾಯಣ್ಣ ಬ್ರಿಗೇಡ್‌ನಿಂದ ಹಿಂದೆ ಸರಿಯುವುದಿಲ್ಲ. ಅಮಿತ್‌ ಶಾ ಕೂಡ ಬ್ರಿಗೇಡ್‌ ಮುಂದುವರಿಸಿ ಎಂದು ಹೇಳಿದ್ದಾರೆ. ಆದರೆ, ರಾಜಕೀಯ ಚಟುವಟಿಕೆಗಳಿಗೆ ಅದನ್ನು ಬಳಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಈಶ್ವರಪ್ಪ, ಇನ್ನು ಮುಂದೆ ಪ್ರತಿ ತಿಂಗಳ 4ನೇ ತಾರೀಕು ಒಂದೊಂದು ಜಿಲ್ಲೆಯಲ್ಲಿ ಪದಾಧಿಕಾರಿಗಳ ಸಭೆ ನಡೆಸಬೇಕು. ಮುಂದಿನ ಸಭೆಯೊಳಗೆ ಎಲ್ಲಾ ಸಮಿತಿಗಳ ರಚನೆ ಪೂರ್ಣಗೊಳ್ಳಬೇಕು ಎಂದೂ ತಿಳಿಸಿದರು.

ಸಭೆಯಲ್ಲಿ ಬ್ರಿಗೇಡ್‌ ಪದಾಧಿಕಾರಿಗಳಾದ ಕೆ.ವಿರೂಪಾಕ್ಷಪ್ಪ, ಕೆ.ಮುಕುಡಪ್ಪ, ಎಸ್‌.ಪುಟ್ಟಸ್ವಾಮಿ, ಸೋಮಶೇಖರ, ರೇಖಾ ಹುಲಿಯಪ್ಪಗೌಡ, ಯಂಜೂರಪ್ಪ, ಡಿ.ವೆಂಕಟೇಶಮೂರ್ತಿ  ಮತ್ತಿತರರು ಹಾಜರಿದ್ದರು.

ಬ್ರಿಗೇಡ್‌ನ‌ ಪದಾಧಿಕಾರಿಗಳು
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ‌ ಅಧ್ಯಕ್ಷರಾಗಿ ಕೆ.ವಿರೂಪಾಕ್ಷಪ್ಪ, ಕಾರ್ಯಾಧ್ಯಕ್ಷರಾಗಿ ಕೆ.ಮುಕುಡಪ್ಪ, ಗೌರವಾಧ್ಯಕ್ಷರಾಗಿ ಎಸ್‌.ಪುಟ್ಟಸ್ವಾಮಿ, ಕಾರ್ಯದರ್ಶಿಗಳಾಗಿ ಡಿ.ವೆಂಕಟೇಶ್‌ಮೂರ್ತಿ, ಕಾಶೀನಾಥ್‌ ಹುಡೇದ, ಅಶೋಕ್‌ ಗಸ್ತಿ, ಬಸವರಾಜ ಬಾಳೆಕಾಯಿ, ಖಜಾಂಚಿಯಾಗಿಟಿ.ಬಿ.ಬಳಗಾವಿ ಅವರನ್ನು ಆಯ್ಕೆ ಮಾಡಲಾಗಿದೆ. ಅದೇ ರೀತಿ ನಿವೃತ್ತ ಪೊಲೀಸ್‌ ಅಧಿಕಾರಿ ಸಂಗ್ರಾಮ್‌ ಸಿಂಗ್‌ ಸೇರಿದಂತೆ ಐದು ಉಪಾಧ್ಯಕ್ಷರು, ಒಂಬತ್ತು ಕಾರ್ಯದರ್ಶಿಗಳು, 12 ನಿರ್ದೇಶಕರು, ಒಬ್ಬ ಕಚೇರಿ ಕಾರ್ಯದರ್ಶಿ, ಒಬ್ಬ ಕಾನೂನು ಸಲಹೆಗಾರರನ್ನು ನೇಮಕ ಮಾಡಲಾಗಿದೆ. ಅಲ್ಲದೆ, ಕೆ.ಮುಕುಡಪ್ಪ, ಸಂಗ್ರಾಮ್‌ ಸಿಂಗ್‌, ಅಮೃತೇಶ್‌, ಬಿ.ಎಸ್‌.ರಾಜಶೇಖರ್‌ ಅವರಿಗೆ ವಕ್ತಾರರ ಜವಾಬ್ದಾರಿಯನ್ನೂ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next