Advertisement

ಸಾಮಾನ್ಯ ಸಭೆಗೆ ಬಿಸಿ ತಟ್ಟದ ಬಿಜೆಪಿ ಬಹಿಷ್ಕಾರ

06:05 PM Oct 01, 2021 | Team Udayavani |

ರಾಯಚೂರು: ಅವಿಶ್ವಾಸದ ಆತಂಕ ಎದುರಿಸುತ್ತಿದ್ದ ನಗರಸಭೆ ಅಧ್ಯಕ್ಷ ಈ.ವಿನಯಕುಮಾರ್‌ ಅಗತ್ಯ ಕೋರಂನೊಂದಿಗೆ ಸಾಮಾನ್ಯ ನಡೆಸುವ ಮೂಲಕ ಬೀಸುವ ದೊಣ್ಣೆಯಿಂದ ಪಾರಾದರು. ಆದರೆ, ಬಿಜೆಪಿ ಸದಸ್ಯರು ಮಾತ್ರ ತಮ್ಮ ನಿಲುವಿಗೆ ಬದ್ಧರಾಗಿ ಸಭೆಯಿಂದ ದೂರ ಉಳಿಯುವ ಮೂಲಕ ತಮ್ಮ ಅಸಹಕಾರ ಮುಂದುವರಿಸಿದರು.

Advertisement

ನಗರಸಭೆ ಸಭಾಂಗಣದಲ್ಲಿ ಗುರುವಾರ ಸಾಮಾನ್ಯ ಸಭೆ ಕರೆಯಲಾಗಿತ್ತು. ಈಚೆಗೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಪಕ್ಷಾತೀತವಾಗಿ ಸಭೆ ನಡೆಸಿದ್ದ ಸದಸ್ಯರು, ಈಗ ಯಾವ ನಡೆ ತೋರುವರು ಎಂಬ ಕುತೂಹಲವಿತ್ತು. ಸಭೆಗೂ ಮುನ್ನವೇ ಸಭೆಗೆ ಬೇಕಾದ ಕೋರಂ ಸಿದ್ಧಪಡಿಸಿಕೊಂಡಿದ್ದ ಅಧ್ಯಕ್ಷ, ಸದಸ್ಯರ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದಂತೆ ಕಂಡು ಬಂದಿತು. ಆ ಕಾರಣಕ್ಕೆ ಕಿಂಚಿತ್ತೂ ಅಳುಕಿಲ್ಲದೇ ಸಭೆಗೆ ಆಗಮಿಸಿದ ಅವರು, ಅಗತ್ಯ ಸದಸ್ಯರ ಬೆಂಬಲದೊಂದಿಗೆ ಸಭೆ ಮುಗಿಸಿದರು.

33ನೇ ವಾರ್ಡ್‌ ಸದಸ್ಯ ನರಸರೆಡ್ಡಿ ಸಭೆಯಲ್ಲಿ ವೇದಿಕೆ ಕೆಳಗೆ ಕುಳಿತು ಧರಣಿ ಆರಂಭಿಸಿದರು. ನನ್ನ ವಾರ್ಡ್‌ ವ್ಯಾಪ್ತಿಯಲ್ಲಿ ಬರುವ ಮೇಘಾ ರೆಸಿಡೆನ್ಸಿ ನಿಯಮ ಬಾಹಿರವಾಗಿದ್ದು, ಕೂಡಲೇ ಅದರ ವಿರುದ್ಧ ಕ್ರಮ ಜರುಗಿಸಬೇಕು. ಈ ಬಗ್ಗೆ ಪ್ರತಿ ಸಭೆಯಲ್ಲೂ ಹೇಳಿದರೂ ಯಾರು ಸ್ಪಂದಿಸುತ್ತಿಲ್ಲ. ಜನರಿಗೆ ಕುಡಿವ ನೀರಿಲ್ಲದೇ ಎರಡು ಮೂರು ದಿನಕ್ಕೊಮ್ಮೆ ಬಿಡುತ್ತಿದ್ದೇವೆ.

ಆದರೆ, ಮೇಘಾ ರೆಸಿಡೆನ್ಸಿಯವರು ಅನುಮತಿ ಪಡೆಯದೆ ಮುಖ್ಯ ಪೈಪ್‌ಲೈನ್‌ ಮೂಲಕವೇ ನೀರು ಪಡೆಯುತ್ತಿದ್ದಾರೆ. ಪ್ರಶ್ನಿಸಿದರೆ ನನ್ನ ವಿರುದ್ಧವೇ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದು ಆರೋಪಿಸಿ ಧರಣಿ ನಡೆಸಿದರು. ಇದಕ್ಕೆ ಸದಸ್ಯ ಸಾಜಿದ್‌ ಸಮೀರ್‌, ರಮೇಶ ಕೂಡ ಬೆಂಬಲ ನೀಡಿದರು. ಕಾನ್ವೆಂಟ್‌ ಶಾಲೆಗೆ ನಗರಸಭೆ ಸದಸ್ಯರೂ ಎಂಬುದನ್ನು ಲೆಕ್ಕಿಸದೆ ಅಗೌರವ ತೋರುತ್ತಾರೆ. ಸದಸ್ಯರ ಬಗ್ಗೆ ಇಷ್ಟೊಂದು ತಾತ್ಸಾರವಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಮುನಿಸ್ವಾಮಿ, ಮೇಘಾ ರೆಸಿಡೆನ್ಸಿ ವಿಚಾರ ನ್ಯಾಯಾಲಯದಲ್ಲಿದೆ. ಅದಕ್ಕೆ ಬೇಕಾದ ದಾಖಲೆಗಳನ್ನು ನಾವು ಅಲ್ಲಿಗೆ ಸಲ್ಲಿಸುತ್ತೇವೆ ಎಂದು ವಿವರಿಸಿದರು. ಇದಕ್ಕೆ ಒಪ್ಪದ ಸದಸ್ಯ ನರಸರೆಡ್ಡಿ, ನಗರಸಭೆಯಿಂದ ಕೂಡಲೇ ಕ್ರಮ ಜರುಗಿಸಬೇಕು. ರೆಸಿಡೆನ್ಸಿಯವರು ನಕಲಿ ದಾಖಲೆ ಸೃಷ್ಟಿಸಿದ್ದು, ಕೂಡಲೇ ಕ್ರಮ ಜರುಗಿಸಬೇಕು ಎಂದರು.

Advertisement

ಸದಸ್ಯ ಜಯಣ್ಣ ಮಾತನಾಡಿ, ನೀವು ಈ ರೀತಿ ಹಠ ಹಿಡಿಯುವುದು ಸರಿಯಲ್ಲ. ಏನೇ ಸಮಸ್ಯೆಗಳಿದ್ದರೂ ಚರ್ಚೆ ನಡೆಸಿ ತೀರ್ಮಾನಿಸಬೇಕು. ಕೂಡಲೇ ಮೇಘಾ ರೆಸಿಡೆನ್ಸಿ ಹಾಗೂ ಸದಸ್ಯರಿಗೆ ಅಗೌರವ ತೋರಿದ ಕಾನ್ವೆಂಟ್‌ಗೆ ನೋಟಿಸ್‌ ಜಾರಿ ಮಾಡುವಂತೆ ತಾಕೀತು ಮಾಡಿದರು. ಬಸವರಾಜ್‌ ದರೂರು ಮಾತನಾಡಿ,ಸಣ್ಣ ಪುಟ್ಟ ಸಮಸ್ಯೆಗಳನ್ನು ಯಾರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈಚೆಗೆ ಚೈತನ್ಯ ಆಸ್ಪತ್ರೆ ಹತ್ತಿರ ಮುಖ್ಯ ಪೈಪ್‌ಲೈನ್‌ ಒಡೆದು ನಿರಂತರ ಹರಿಯುತ್ತಿದ್ದರೂ ಯಾರು ಕ್ರಮ ಕೈಗೊಂಡಿಲ್ಲ.

ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಕೆಲ ಸದಸ್ಯರು, ನಮ್ಮ ಬಡಾವಣೆಯಲ್ಲಿ ಸ್ವತ್ಛತೆಗೆ ಪೌರ ಕಾರ್ಮಿಕರೇ ಇಲ್ಲದಾಗಿದೆ. ಹೇಳಿ ಹೇಳಿ ಸಾಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಸ ವಿಲೇವಾರಿಗೆ ಹೊಸ ವಾಹನ ಸಿಗಬಹುದು ಎಂದು ಕೊಂಡರೆ ಹಳೇ ವಾಹನಗಳನ್ನೇ ದುರಸ್ತಿ ಮಾಡಿಸಿ ನೀಡುತ್ತಿರುವುದು ಸರಿಯೇ ಎಂದು ಸದಸ್ಯರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ, ಹಳೇ ವಾಹನಗಳ ದುರಸ್ತಿ ಜತೆಗೆ ಕೆಲವೊಂದು ಹೊಸ ವಾಹನಗಳನ್ನು ಮಂಜೂರು ಮಾಡಲಾಗಿದೆ. ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುವುದು ಎಂದು ಸಮಾಧಾನ ವ್ಯಕ್ತಪಡಿಸಿದರು.

ಚೈತನ್ಯ ಎಲೆಕ್ಟ್ರಿಕಲ್‌ಗೆ ಅನುಮೋದನೆ
ಆರೋಪಗಳ ಸುರಿಮಳೆಯನ್ನೆ ಎದುರಿಸಿದ ಚೈತನ್ಯ ಎಲೆಕ್ಟ್ರಿಕಲ್‌ ಕಂಪನಿಗೆ ಟೆಂಡರ್‌ ಅನುಮೋದನೆ ನೀಡುವ ಮೂಲಕ ಅಧ್ಯಕ್ಷ ಹಿಡಿದ ಪಟ್ಟು ಸಾಧಿ ಸಿಕೊಂಡಂತೆ ಕಂಡು ಬಂತು. ಚೈತನ್ಯ ಎಲೆಕ್ಟ್ರಿಕಲ್‌ ಸಂಸ್ಥೆ ಕಾರ್ಯಕ್ಷಮತೆ ಬಗ್ಗೆ ಸಾಕಷ್ಟು ಆರೋಪಗಳಿದ್ದವು. ಉಪಾಧ್ಯಕ್ಷರ ಪತಿ ಕೂಡ ಈ ಬಗ್ಗೆ ಆರೋಪ ಮಾಡಿದ್ದರು. ಆದರೆ, ಅದೆಲ್ಲ ಮೀರಿ ಈಗ ಅದೇ ಕಂಪನಿಗೆ ಅ ಧಿಕೃತ ಹೊಣೆ ನೀಡಲಾಗಿದೆ. ಈ ಬಗ್ಗೆ ಸದಸ್ಯ ನರಸರೆಡ್ಡಿ, ನಮ್ಮ ವಾರ್ಡ್‌ನಲ್ಲಿ ಬೀದಿದೀಪಗಳು
ಮೂರು ದಿನ ಕೂಡ ಬಾಳಿಕೆ ಬರುತ್ತಿಲ್ಲ. ಚೈತನ್ಯ ಎಲೆಕ್ಟ್ರಿಕಲ್‌ ಸಂಸ್ಥೆ ಕಳಪೆ ಗುಣಮಟ್ಟದ ಬಲ್ಬ್ಗಳನ್ನು ನೀಡುತ್ತಿದೆ ಎಂದು ದೂರಿದರು. ಆದರೆ, ನಿಮ್ಮ ಯಾವುದೇ ದೂರುಗಳಿದ್ದರೂ ಪೌರಾಯುಕ್ತರ ಗಮನಕ್ಕೆ ತನ್ನಿ ಎಂದು ಅಧ್ಯಕ್ಷ ಚರ್ಚೆಗೆ ವಿರಾಮ ನೀಡಿದರು.

ಮತ್ತೆ ಏಪಕ್ಷೀಯ ನಿರ್ಧಾರ?
ಪ್ರತಿ ಬಾರಿ ಸಭೆಯಲ್ಲಿ ಎಲ್ಲ ವಿಷಯಗಳಿಗೂ ವಿರೋಧವಿಲ್ಲದೇ ಅನುಮೋದನೆ ಸಿಗುತ್ತಿತ್ತು. ಈ ಬಾರಿ ಅಧ್ಯಕ್ಷರ ವಿರುದ್ಧ ಸದಸ್ಯರು ಸಾಕಷ್ಟು ಅಸಮಾಧಾನಗೊಂಡಿದ್ದರು. ಸಭೆಯಲ್ಲಿ ಅನೇಕ ವಿಚಾರಗಳಿಗೆ ವಿರೋಧ ಬರಬಹುದು ಎಂದೇ ಅಂದಾಜಿಸಲಾಗಿತ್ತು. ಆದರೆ, ಬಿಜೆಪಿಯವರು ಸಭೆಗೆ ಬರಲಿಲ್ಲ. ಇನ್ನೂ ಕಾಂಗ್ರೆಸ್‌ ಹಾಗೂ ಪಕ್ಷೇತರ ಸದಸ್ಯರು ಮಾತ್ರ ಸಭೆಯಲ್ಲಿದ್ದರು. ಇದರಿಂದ ಅವರು ಕೂಡ ಯಾವ ವಿಷಯಗಳಿಗೂ ಚಕಾರ ಎತ್ತದೆ ಅನುಮೋದನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next