Advertisement

ಹೋರಾಟದ ನೆಲದಲ್ಲಿ ಅರಳಿದ ಕಮಲ

04:06 PM May 25, 2019 | Team Udayavani |

ಕೋಲಾರ: ಕಡು ವಿರೋಧಿಗಳ ಬೆಂಬಲದಿಂದಲೇ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಬಿಜೆಪಿಯ ಕಮಲ ಅರಳುವಂತಾಗಿದೆ. ಕೋಲಾರ ಜಿಲ್ಲೆಯ ಜನರಿಗೆ ರಾಜಕೀಯವಾಗಿ ಅಪರಿಚತರಾಗಿಯೇ ಇದ್ದ ಬಿಜೆಪಿಯ ಎಸ್‌.ಮುನಿಸ್ವಾಮಿ ಕೇವಲ 30 ದಿನಗಳಲ್ಲಿ ಬಲಿಷ್ಠ ಕೆ.ಎಚ್.ಮುನಿಯಪ್ಪರನ್ನು 2.09 ಲಕ್ಷ ಮತಗಳ ಅಂತರದಿಂದ ಸೋಲಿಸಿ ಜಯಭೇರಿ ಬಾರಿಸುವಂತಾಗಿದೆ. ಇದಕ್ಕೆ ಬಿಜೆಪಿಯ ಕಡುವಿರೋಧಿಗಳೇ ಸಾಥ್‌ ನೀಡಿರುವುದು ಇದೀಗ ರಹಸ್ಯವಾಗಿ ಉಳಿದಿಲ್ಲ.

Advertisement

ಹೋರಾಟಗಳ ನೆಲ: ಕೋಲಾರ ಜಿಲ್ಲೆಯನ್ನು ಹೋರಾಟಗಳ ತವರೂರು ಎಂದೇ ಕರೆಯುತ್ತಾರೆ. ಅದರಲ್ಲೂ ಎಡಪಂಥೀಯ ಹಾಗೂ ದಲಿತ, ರೈತ ಚಳವಳಿಗಳಲ್ಲಿ ಜಿಲ್ಲೆಯ ಮುಖಂಡರು ಮಂಚೂಣಿಯಲ್ಲಿರುತ್ತಿದ್ದರು. ಆರ್‌ಎಸ್‌ಎಸ್‌ ತತ್ವ ಸಿದ್ಧಾಂತಗಳಿಗೆ ತದ್ವಿರುದ್ಧವಾದ ಸಿದ್ಧಾಂತಗಳನ್ನು ಒಪ್ಪಿಕೊಂಡ ಚಳವಳಿಗಳಿಂದಾಗಿಯೇ ಬಿಜೆಪಿ ಕೋಲಾರ ಮೀಸಲು ಕ್ಷೇತ್ರದಲ್ಲಿ ಖಾತೆ ತೆರೆಯಲು 17 ಚುನಾವಣೆ ಕಾಯಬೇಕಾಯಿತು.

17 ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಜನಸಂಘ ಮತ್ತು ಬಿಜೆಪಿ ಗೆಲ್ಲಲು ಸಾಧ್ಯವಾಗದಂತೆ ಅಡ್ಡಿ ಇದ್ದ ಚಳವಳಿಗಳ ಮುಖಂಡ‌ರು, ಬಿಜೆಪಿಯ ಕಡುವಿರೋಧಿಗಳಾಗಿದ್ದವರೇ 2019ರ ಚುನಾವಣೆಯಲ್ಲಿ ಪರೋಕ್ಷವಾಗಿ ಬಿಜೆಪಿಯ ಬೆನ್ನಿಗೆ ನಿಂತು ಎಸ್‌.ಮುನಿಸ್ವಾಮಿ ರೂಪದಲ್ಲಿ ಗೆಲುವು ದಕ್ಕಿಸಿಕೊಟ್ಟಿರುವುದು ವಿಶೇಷವೆನಿಸಿದೆ.

ಬಿಜೆಪಿಗೆ ವಿರೋಧಿಗಳ ಬೆಂಬಲ: ಕೋಲಾರ ಜಿಲ್ಲೆಯ ಹಿರಿಯ ರಾಜಕಾರಣಿ ಶ್ರೀನಿವಾಸಪುರದ ರಮೇಶ್‌ಕುಮಾರ್‌ ಬಿಜೆಪಿ ತತ್ವಸಿದ್ಧಾಂತಗಳ ಕಡು ವಿರೋಧಿಗಳಲ್ಲಿ ಮೊದಲಿಗರಾಗಿದ್ದರು. ತಲೆ ಕಡಿದರೂ ಸರಿ ಬಿಜೆಪಿ ಸಹವಾಸ ಮಾಡುವುದಿಲ್ಲವೆಂದು ಅನೇಕ ಸಂದರ್ಭಗಳಲ್ಲಿ ಘೋಷಿಸಿದ್ದರು. ಅನಿವಾರ್ಯವೆನಿಸಿದರೆ ಕಮ್ಯುನಿಸ್ಟ್‌ ಪಕ್ಷವನ್ನು ಸೇರುತ್ತೇನೆಯೇ ಹೊರತು, ಬಿಜೆಪಿಯನ್ನಲ್ಲ ಎಂದು ಪ್ರಕಟಿಸಿದ್ದರು. ಆದರೆ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಮೇಲಿನ ವೈಯಕ್ತಿಕ ರಾಜಕೀಯ ದ್ವೇಷದಿಂದ ಬಿಜೆಪಿಯನ್ನು ಪರೋಕ್ಷವಾಗಿ ಬೆಂಬಲಿಸಿದ್ದರು. ಸ್ವತಃ ಶ್ರೀನಿವಾಸಪುರ ಕ್ಷೇತ್ರದಲ್ಲಿ ತಾವೇ ಐದತ್ತು ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಿದ್ದವರು ಈ ಚುನಾವಣೆಯಲ್ಲಿ ಬಿಜೆಪಿಗೆ 38 ಸಾವಿರಕ್ಕೂ ಅಧಿಕ ಮತಗಳು ಸಿಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಪಕ್ಷ ನಿಷ್ಠೆ ಮರೆತು ಬಿಜೆಪಿಗೆ: ಇದೇ ರೀತಿ ಬಿಜೆಪಿಯಿಂದ ಮಾರು ದೂರ ಇದ್ದ ಕೋಲಾರದ ಶಾಸಕ ಕೆ.ಶ್ರೀನಿವಾಸಗೌಡ ತಿಂಗಳ ಹಿಂದಷ್ಟೇ ತಮಗೆ ಆಪರೇಷನ್‌ ಕಮಲದ ಆಹ್ವಾನವಿತ್ತು. 30 ಕೋಟಿ ಆಫ‌ರ್‌ ಇತ್ತು ಎಂದು ಬಹಿರಂಗ ಪಡಿಸಿ ತಮ್ಮ ಜೆಡಿಎಸ್‌ ಪಕ್ಷ ನಿಷ್ಠೆಯನ್ನು ತೋರ್ಪಡಿಸಿಕೊಂಡಿದ್ದರು. ಆದರೆ, ಲೋಕಸಭಾ ಚುನಾವಣೆಯಲ್ಲಿ ಬಹಿರಂಗವಾಗಿ ಬಿಜೆಪಿಯನ್ನು ಗೆಲ್ಲಿಸಲು ಶಕ್ತಿ ಮೀರಿ ದುಡಿದರಲ್ಲದೆ ಗೆದ್ದ ಬಿಜೆಪಿ ಅಭ್ಯರ್ಥಿಯನ್ನು ಮತ ಎಣಿಕೆ ಕೇಂದ್ರಕ್ಕೆ ಬಂದು ಆಲಂಗಿಸಿ ಅಭಿನಂದಿಸಿ ಬಿಜೆಪಿ ಪ್ರೀತಿ ಮೆರೆದರು.

Advertisement

ಇದೇ ರೀತಿ ತಮ್ಮ ಕಡುವಿರೋಧಿ ಬಿಜೆಪಿ ಎನ್ನುವುದನ್ನು ಮರೆತು ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಬಿಜೆಪಿ ಪರ ನಿಂತಿದ್ದರೆಂಬ ಸತ್ಯವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪರೇ ಘೋಷಿಸಿದ್ದಾರೆ. ಶಿಡ್ಲಘಟ್ಟದಲ್ಲಿ ಬಿಜೆಪಿಗೆ ಜಾಗವಿಲ್ಲದಂತೆ ರಾಜಕೀಯ ಮಾಡಿಕೊಂಡು ಬರುತ್ತಿದ್ದ ವಿ.ಮುನಿಯಪ್ಪ, ಮುಳಬಾಗಿಲು, ಮಾಲೂರು, ಚಿಂತಾಮಣಿ ಕ್ಷೇತ್ರದ ಇತರೇ ಮುಖಂಡರು ಬಿಜೆಪಿ ವಿರೋಧಿಸಿಕೊಂಡೇ ಬಂದು ಬಿಜೆಪಿ ಗೆಲುವಿಗೆ ಕಾರಣಕರ್ತರಾಗಿದ್ದಾರೆ.

ಚಳವಳಿ ಮುಖಂಡರು: ಕೋಲಾರ ಜಿಲ್ಲೆ ದಲಿತ ಚಳವಳಿಯ ತವರೂರು. ದಲಿತ ಚಳವಳಿಯ ಮುಖಂಡರು ಬಿಜೆಪಿಯನ್ನು ಉಗ್ರವಾಗಿ ವಿರೋಧಿಸಿಕೊಂಡೇ ಚಳವಳಿ ಮುನ್ನಡೆಸಿದ್ದವರು. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಎಸ್‌.ಮುನಿಸ್ವಾಮಿ ಅಭ್ಯರ್ಥಿಯಾಗುವುದರಿಂದ ಹಿಡಿದು ಅವರು 2.09 ಲಕ್ಷ ಮತಗಳ ಅಂತರದ ಗೆಲುವು ಕೊಡಿಸುವವರೆಗೂ ಜೊತೆಗಿದ್ದು, ಕೈಹಿಡಿದು ಚುನಾವಣೆ ನಡೆಸಿ ಬಿಜೆಪಿ ಗೆಲುವನ್ನು ತಮ್ಮದೇ ಗೆಲುವೆಂಬಂತೆ ಸಂಭ್ರಮಿಸುವ ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾದರು.

ಬಲಗೈ ಪಂಗಡದವರ ಬೆಂಬಲ: ದಲಿತರಲ್ಲಿ ಬಲಗೈ ಜಾತಿಗೆ ಸೇರಿದ ಬಿಜೆಪಿಯ ಎಸ್‌.ಮುನಿಸ್ವಾಮಿಯನ್ನು ಬಲಗೈ ಪಂಗಡದವರು ಅಭೂತಪೂರ್ವವಾಗಿ ಬೆಂಬಲಿಸುವ ಮೂಲಕ ಎಡಗೈ ಪಂಗಡದ ನಾಯಕ ಕೆ.ಎಚ್.ಮುನಿಯಪ್ಪರಿಗೆ ಸೋಲಿನ ರುಚಿ ತೋರಿಸಿದರು. ಕಳೆದ ವರ್ಷ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟೂ ಕ್ಷೇತ್ರಗಳಿಂದ ಕೇವಲ 1.11 ಲಕ್ಷ ಮತಗಳನ್ನಷ್ಟೇ ಪಡೆದುಕೊಂಡಿದ್ದ ಬಿಜೆಪಿ, ಒಂದೇ ವರ್ಷದ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ 7.91 ಲಕ್ಷ ಮತಗಳನ್ನು ಪಡೆಯುವ ಮೂಲಕ ಅನಿರೀಕ್ಷಿತವಾಗಿ ದಾಖಲೆಯ ಗೆಲುವು ದಾಖಲಿಸಲು ಬಿಜೆಪಿಯನ್ನು ದಶಕಗಳಿಂದ ವಿರೋಧಿಸಿಕೊಂಡು ಬಂದವರ ಬೆಂಬಲವೇ ಕಾರಣವೆನ್ನುವುದು ಗುಟ್ಟಾಗಿ ಉಳಿದಿಲ್ಲ.

● ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next