ಬೆಂಗಳೂರು: ಬಿಜೆಪಿ, ಆರ್‌ಎಸ್‌ಎಸ್‌ನವರೇ ಉಗ್ರಗಾಮಿಗಳು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ
ಬಿಜೆಪಿ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರಾಜ್ಯದಲ್ಲಿ ಹಿಂದೂ ಪರ ಕಾರ್ಯಕರ್ತರ ಹತ್ಯೆ ಆರೋಪ ಹೊತ್ತಿರುವ ಪಿಎಫ್ಐ, ಕೆಎಫ್ಡಿ, ಎಸ್ ಡಿಪಿಐ ಸಂಘಟನೆಗಳನ್ನು ನಿಷೇಧ ಮಾಡಿ ಎಂದರೆ ಆರ್ ಎಸ್‌ಎಸ್ ನಿಷೇಧಿಸಿ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ ಕಿಡಿ ಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರ್‌ಎಸ್‌ಎಸ್ ನಿಷೇಧಿಸಿ, ಬಿಜೆಪಿ ಉಗ್ರಗಾಮಿ ಸಂಘಟನೆ ಎಂದು ಹೇಳಿಕೊಂಡು ತಿರುಗುತ್ತಿರುವ ಕಾಂಗ್ರೆಸ್‌ನವರಿಗೆ ರಾಜ್ಯದ ಮತದಾರರೇ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದು ಹೇಳಿಕೆ ಖಂಡಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಸಿ.ಟಿ. ರವಿ, ಗೋಸುಂಬೆ ತರ ಬಣ್ಣ ಬದಲಾಯಿಸುವ ಸಿದ್ದರಾಮಯ್ಯ ಪಾಕಿಸ್ತಾನದ ಜತೆ ನೆಂಟಸ್ಥಿಕೆ ಮಾಡುತ್ತಿದ್ದಾರಾ ಎಂದು ವ್ಯಂಗ್ಯವಾಡಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಸಿಎಂ ಹತಾಶೆಗೆ ಒಳಗಾಗುತ್ತಿರುವುದು ಸ್ಪಷ್ಟವಾಗಿದೆ. ಆರೆಸ್ಸೆಸ್ , ಬಿಜೆಪಿಯನ್ನು ಭಯೋತ್ಪಾದಕ ಸಂಘಟನೆ ಎಂದಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿ ಬ್ಯಾನ್ ಮಾಡಬೇಕು ಎಂದಿದ್ದಾರೆ. ಅವರು ತಿಳಿದಿರುವಂತೆ ಇದು 1975ರ ಭಾರತ ಅಲ್ಲ ಮತ್ತು ಇಂದಿನ ಪ್ರಧಾನಿ ಇಂದಿರಾ ಗಾಂಧಿಯೂ ಅಲ್ಲ.
– ರಾಜ್ಯ ಬಿಜೆಪಿ (ಟ್ವೀಟ್)
ನಮ ಪಕ್ಷದ ಅಧ್ಯಕ್ಷರು ಏನು ಮಾತಾಡಬೇಕು ಎಂಬುದನ್ನು ನಿರ್ಧರಿಸುವ ಹಪಾಹಪಿ ಮುಖ್ಯಮಂತ್ರಿಗೇಕೆ?
ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಸರ್ಕಾರದ ಸಾಧನೆಗಳನ್ನೇ ಹೇಳಿಕೊಳ್ಳಬಹುದಿತ್ತು. ಅದನ್ನು ಬಿಟ್ಟು ನೀವು ಆರ್‌ಎಸ್‌ಎಸ್, ಬಿಜೆಪಿಯನ್ನು ಟೀಕೆ ಮಾಡುತ್ತಿಲ್ಲವೆ? ಹೇಳಿಕೊಳ್ಳಲು ಸಾಧನೆ ಕೊರತೆಯೇನೋ?
– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ (ಟ್ವೀಟ್)